ರಾಷ್ಟ್ರೀಯ

ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ನಕ್ಸಲರಿಂದ ಟ್ರಕ್ ಸ್ಫೋಟ; 15 ಸೇನಾ ಕಮಾಂಡೋಗಳು ಹುತಾತ್ಮ

Pinterest LinkedIn Tumblr

ಗಡಚಿರೋಲಿ, ಮಹಾರಾಷ್ಟ್ರ: ಮೂವತ್ತಕ್ಕೂ ಹೆಚ್ಚು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ ಆರ್ಭಟಿಸಿದ ಬೆನ್ನಲ್ಲೇ ನಕ್ಸಲರು 15ಕ್ಕೂ ಹೆಚ್ಚು ಸೇನಾ ಕಮಾಂಡೋಗಳನ್ನ ಬಲಿತೆಗೆದುಕೊಂಡಿದ್ದಾರೆ. ಗಡಚಿರೋಲಿಯಲ್ಲಿ ಸಿ-60 ಕಮಾಂಡೋಗಳ ತಂಡವೊಂದನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಮೇಲೆ ನಕ್ಸಲರು ಐಇಡಿ ಬಾಂಬ್ ಸ್ಫೋಟಿಸಿದ ಪರಿಣಾಮ 15ಕ್ಕೂ ಹೆಚ್ಚು ಕಮಾಂಡೋಗಳು ದಾರುಣ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಕೂಡ ಮೃತಪಟ್ಟಿದ್ದಾರೆ. ಬಾಂಬ್ ಸ್ಫೋಟದ ಬೆನ್ನಲ್ಲೇ ನಕ್ಸಲ್ ಮತ್ತು ಉಳಿದು ಕಮಾಂಡೋಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಟ್ರಕ್​ನಲ್ಲಿ ಸಾಗುತ್ತಿದ್ದ ಸಿ-60 ಕಮಾಂಡೋ ತಂಡವು ಅತ್ಯಂತ ಕಠಿಣ ನಕ್ಸಲ್ ನಿಗ್ರಹ ತರಬೇತಿ ಪಡೆದಿತ್ತು. ನಕ್ಸಲರ ವಿರುದ್ಧ ಹೋರಾಡಲು ಬೇಕಾದ ಗೆರಿಲ್ಲಾ ಮೊದಲಾದ ಆಕ್ರಮಣ ತಂತ್ರಗಳನ್ನ ಕರಗತ ಮಾಡಿಕೊಂಡಿತ್ತು. ಕಳೆದ ವರ್ಷ ಇದೇ ತಂಡವು ಗಡಚಿರೋಲಿಯಲ್ಲೇ 40 ಮಾವೋವಾದಿ ಉಗ್ರರನ್ನು ಎನ್​ಕೌಂಟರ್ ಮಾಡಿ ಹತ್ಯೆಗೈದಿತ್ತು. ಆ ಹತ್ಯೆಗೆ ನಕ್ಸಲರು ಇವತ್ತು ಕಾರ್ಮಿಕರ ದಿನದಂದು ಸೇಡು ತೀರಿಸಿಕೊಂಡಿದ್ದಾರೆ. 2018ರ ಏಪ್ರಿಲ್ 22ರಂದು 40 ನಕ್ಸಲರ ಸಂಹಾರವಾಗಿತ್ತು. ಆ ದುರಂತಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಮಾವೋವಾದಿಗಳು ಈ ವಾರ ಪೂರ್ತಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಭಾಗವಾಗಿ ಇವತ್ತು ಹಲವು ವಾಹನಗಳನ್ನ ಸುಟ್ಟು ಹಾಕಿದ್ದಾರೆ. ಹಾಗೂ ಕಮಾಂಡೋಗಳಿದ್ದ ಟ್ರಕ್ಕನ್ನು ಸ್ಫೋಟಿಸಿದ್ದಾರೆನ್ನಲಾಗಿದೆ.

ಇದಕ್ಕೂ ಮುನ್ನ ಇವತ್ತು ಬೆಳಗ್ಗೆ ಗಡಚಿರೋಲಿಯ ಕುರ್ಖೇಡಾ ಎಂಬಲ್ಲಿ ಖಾಸತಿ ಗುತ್ತಿಗೆದಾರರಿಗೆ ಸೇರಿದ 30ಕ್ಕೂ ಹೆಚ್ಚು ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದರು. ಇದಾದ ನಂತರ, ನಕ್ಸಲ್ ನಿಗ್ರಹ ಕಮಾಂಡೋಗಳು ಖಾಸಗಿ ಟ್ರಕ್ ಏರಿ ಇಡೀ ಪ್ರದೇಶದಲ್ಲಿ ಪಹರೆ ತಿರುಗುತ್ತಿದ್ದರು. ಆಗ ನಕ್ಸಲರು ಕಮಾಂಡೋಗಳ ಟ್ರಕ್​ಗೇ ಬಾಂಬ್ ಹಾಕಿ ಸ್ಫೋಟಿಸಿದ್ದಾರೆ. ಸದ್ಯಕ್ಕೆ 15 ಕಮಾಂಡೋಗಳು ಈ ಘಟನೆಯಲ್ಲಿ ಸಾವನ್ನಪಿದ್ದು, ಹುತಾತ್ಮರ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯನ್ನು ಬಲವಾಗಿ ಖಂಡಿಸಿದ್ದು, ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ್ದಾರೆ.

Comments are closed.