ಕರ್ನಾಟಕ

ಫನಿ ಚಂಡಮಾರುತ​; ಮುಂದಿನ ವಾರ ರಾಜ್ಯದ ಹಲವೆಡೆ ಭಾರೀ ಮಳೆ​

Pinterest LinkedIn Tumblr
Cyclone

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಪರಿಣಾಮ ಪಕ್ಕದ ತಮಿಳುನಾಡು ರಾಜ್ಯದಲ್ಲಿ ಏ. 30 ಮತ್ತು ಮೇ 1ರಂದು ಫನಿ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಫನಿ ಚಂಡಮಾರುತದ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲೂ 3ರಿಂದ 4 ದಿನಗಳ ಕಾಲ ಭಾರೀ ಮಳೆಯಾಗಲಿದೆ.

ಮುಂದಿನ ವಾರ 3ರಿಂದ 4 ದಿನಗಳ ಕಾಲ ಬೆಂಗಳೂರಲ್ಲಿ ಸತತ ಮಳೆಯಾಗಲಿದ್ದು, ಮೈಸೂರು, ಮಂಡ್ಯ, ತುಮಕೂರು, ಮಲೆನಾಡು, ಚಿಕ್ಕಮಗಳೂರು, ಸಕಲೇಶಪುರ, ರಾಜ್ಯದ ಕರಾವಳಿಯಲ್ಲಿ ಕೂಡ ಭಾರೀ ಗಾಳಿ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ವಾರವಷ್ಟೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿತ್ತು. ನಾಲ್ಕೈದು ದಿನಗಳಿಂದ ಬಿಸಿಲಿನ ಮುಖ ನೋಡುತ್ತಿರುವ ಬೆಂಗಳೂರಿನಲ್ಲಿ ಮತ್ತೆ ಮಳೆರಾಯ ಅಬ್ಬರಿಸಲಿದ್ದಾನೆ.

ತಮಿಳುನಾಡಿನ ಚೆನ್ನೈನಲ್ಲಿ ಭೀಕರ ಮಳೆಯಾಗುವ ಸಾಧ್ಯತೆಯಿದ್ದು, ಮುಂದಿನ ವಾರ ತಮಿಳುನಾಡಿಗೆ ಫನಿ ಚಂಡಮಾರುತ ಅಪ್ಪಳಿಸಲಿದೆ. 115 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿರುವ ಚಂಡಮಾರುತದ ಸೂಚನೆ ಸಿಕ್ಕಿರುವ ಕಾರಣ ಚೆನ್ನೈ ಸೇರಿ ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಜೊತೆಗೆ ಕೇರಳ, ಪುದುಚೆರಿಯಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ತಮಿಳುನಾಡು, ಕೇರಳ, ಪುದುಚೆರಿಯ ಕಡೆ ಪ್ರವಾಸ ಹೋಗುವವರು ಮತ್ತು ಅಲ್ಲಿಯ ಜನರ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ. ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗ, ಕೇರಳದ ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂನಲ್ಲಿ ಏ. 29ರಿಂದ ಮೇ 1ರವರೆಗೆ ಗಾಳಿಸಹಿತ ಮಳೆಯಾಗಲಿದೆ ಎನ್ನಲಾಗಿದೆ. ಹೀಗಾಗಿ, ಕಡಲತಡಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

Comments are closed.