ಬೆಂಗಳೂರು: ಮಹಿಳೆಯರನ್ನು ಅಪಮಾನ ಮಾಡುವ ರೀತಿಯಲ್ಲಿ ಬಿಜೆಪಿ ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಮಹಿಳಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ದೂರು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಓಟು ಹಾಕದೇ ಇರುವುದು ತಾಯಿ ಗಂಡ್ರು ಎಂದು ಎಂದು ಶಾಸಕ ಸಿ.ಟಿ ರವಿ ವಿವಾದತ್ಮಕ ಹೇಳಿಕೆ ನೀಡಿದ್ದರು.ಶಾಸಕ ಸಿಟಿ ರವಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಇಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಅವರ ನೇತೃತ್ವದಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದರು.
ದೂರಿನ ಪ್ರತಿ
“ಮೋದಿ ವಿರೋಧಿಸುವವರು ತಾಯಿ ಗಂಡರು… ಯಾರಾದರೂ ಜಾತಿಗೆ ಕಾರಣಕ್ಕೆ, ಧರ್ಮದ ಕಾರಣಕ್ಕೆ ಮತ ಹಾಕದೇ ಹೋದರೆ ಉಂಡ ಮನೆಗೆ ದ್ರೋಹ ಬಗೆದಂತೆ…” ಎಂದು ಸಿಟಿ ರವಿ ಹೇಳಿದ್ದಾರೆ. ಈ ಹೇಳಿಕೆಯನ್ನು ರಾಜ್ಯದ ಪ್ರಮುಖ ಮಾಧ್ಯಮಗಳು ಹಾಗೂ ತನ್ನ ಟ್ವೀಟರ್ ಖಾತೆಯಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟಿಸಿವೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದೂ ಮಹಿಳಾ ವಿರೋಧಿ ಹೇಳಿಕೆ ನೀಡಿ ಸ್ತ್ರಿಯರ ಘನತೆಗೆ ಧಕ್ಕೆ ತಂದಿರುವ ಶಾಸಕ ಸಿಟಿ ರವಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ಆಗ್ರಹಿಸಿದೆ.