ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳು ದೇಶಾದ್ಯಂತ ಸಾಕಷ್ಟು ತಳಮಳ ಸೃಷ್ಟಿಸಿದೆ. ದೇಶದ ಅತ್ಯುನ್ನತ ನ್ಯಾಯ ಸ್ಥಾನದಲ್ಲಿರುವವರ ಮೇಲೆ ಮೆತ್ತಿಕೊಂಡಿರುವ ಆತಂಕದ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಮುಖ್ಯನ್ಯಾಯಮೂರ್ತಿಯಿಂದ ತಮಗೆ ಲೈಂಗಿಕ ಕಿರುಕುಳವಾಗಿತ್ತು ಎಂದು ಸುಪ್ರೀಂಕೋರ್ಟ್ ಸಿಬ್ಬಂದಿಯೊಬ್ಬರು ಆರೋಪಿಸಿರುವುದು ಒಂದೆಡೆ ಇದೆ. ಇದರ ಬೆನ್ನಲ್ಲೇ ಮುಖ್ಯನ್ಯಾಯಮೂರ್ತಿಗಳಿಗೆ ಹಾಗೂ ದೇಶದ ನ್ಯಾಯವ್ಯವಸ್ಥೆಗೆ ಕಳಂಕ ತರಲು ಷಡ್ಯಂತ್ರ ನಡೆದಿದೆ ಎಂದು ವಕೀಲರೊಬ್ಬರು ಆರೋಪಿಸಿರುವುದು ಇನ್ನೊಂದೆಡೆ. ಈ ಎರಡು ತದ್ವಿರುದ್ಧ ಆರೋಪಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಎರಡು ಪ್ರಕರಣಗಳನ್ನು ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ.
ನ್ಯಾ| ಎ.ಕೆ. ಪಾಟ್ನಾಯಕ್ ನೇತೃತ್ವ:
ಮುಖ್ಯನ್ಯಾಯಮೂರ್ತಿ ವಿರುದ್ಧ ಷಡ್ಯಂತ್ರ ನಡೆರುವ ಪ್ರಕರಣದ ತನಿಖೆಗೆ ರಚಿಸಲಾಗಿರುವ ತಂಡದ ನೇತೃತ್ವವನ್ನು ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ. ಪಾಟ್ನಾಯಕ್ ಅವರಿಗೆ ವಹಿಸಲಾಗಿದೆ. ಸಿಬಿಐ, ಐಬಿ ಮತ್ತು ದಿಲ್ಲಿ ಪೊಲೀಸ್ ಮುಖ್ಯಸ್ಥರೆಲ್ಲರೂ ಈ ತನಿಖೆಯಲ್ಲಿ ನಿ. ನ್ಯಾ| ಎ.ಕೆ. ಪಾಟ್ನಾಯಕ್ ಅವರಿಗೆ ಸಹಕಾರ ನೀಡಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ತನಿಖೆ ಮುಗಿದ ನಂತರ ನ್ಯಾ| ಪಾಟ್ನಾಯಕ್ ಅವರು ತಮ್ಮ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ಗೆ ಸಲ್ಲಿಸಲಿದ್ದಾರೆ.
ಸಿಜೆಐ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಬಂದ ಬೆನ್ನಲ್ಲೇ ವಕೀಲ ಉತ್ಸವ್ ಬೇನ್ಸ್ ಎಂಬುವವರು ಆರೋಪದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ದೂರುದಾರೆಯು ದುರುದ್ದೇಶಪೂರ್ವಕವಾಗಿ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಹೇಳಿ, ಇದೆಲ್ಲವೂ ಒಂದು ಷಡ್ಯಂತ್ರವೆಂದು ಅಭಿಪ್ರಾಯಪಟ್ಟಿದ್ದರು.
ಆರೋಪ ಬಂದ ಕೂಡಲೇ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಕೂಡ ಅಚ್ಚರಿ ವ್ಯಕ್ತಪಡಿಸಿ, ಇದು ನ್ಯಾಯವ್ಯವಸ್ಥೆಯನ್ನು ಹಾಳುಗೆಡವುವ ಪ್ರಯತ್ನಗಳಾಗುತ್ತಿವೆ ಎಂದು ವಿಷಾದಿಸಿದ್ದರು.
ವಿಚಾರಣೆಯಿಂದ ಹಿಂದೆ ಸರಿದ ನ್ಯಾ| ಎನ್.ವಿ. ರಮಣ:
ಇದೇ ವೇಳೆ, ಸಿಜೆಐ ಮೇಲಿನ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ತ್ರಿಸದಸ್ಯ ಮಂಡಳಿಯಿಂದ ನ್ಯಾ| ಎನ್.ವಿ. ರಮಣ ಅವರು ಹಿಂದೆ ಸರಿದಿದ್ದಾರೆ. ಮುಖ್ಯನ್ಯಾಯಮೂರ್ತಿಗಳಿಗೆ ನ್ಯಾ| ರಮಣ ಅವರು ಕುಟುಂಬ ಸದಸ್ಯರೆನಿಸುವಷ್ಟರ ಮಟ್ಟದಲ್ಲಿ ಆಪ್ತರಾಗಿದ್ದಾರೆ. ಅವರ ಮನೆಗೆ ಆಗಾಗ ಭೇಟಿಯಾಗುತ್ತಿರುತ್ತಾರೆ. ಇವರು ವಿಚಾರಣೆಯ ತಂಡದಲ್ಲಿದ್ದರೆ ನ್ಯಾಯ ಸಿಕ್ಕುವುದಿಲ್ಲ ಎಂದು ದೂರುದಾರೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾ| ರಮಣ ಹಿಂದೆ ಸರಿಯುವ ನಿರ್ಧಾರ ಕೈಗೊಂಡರೆನ್ನಲಾಗಿದೆ.
ಹಾಗೆಯೇ, ಸುಪ್ರೀಂಕೋರ್ಟ್ ರಚಿಸಿರುವ ತನಿಖಾ ಸಮಿತಿಯಲ್ಲಿ ಮಹಿಳೆಯರು ಬಹುಸಂಖ್ಯೆಯಲ್ಲಿಲ್ಲ. ಹಾಗೂ ಹೊರಗಿನ ಸದಸ್ಯರೂ ಇಲ್ಲ. ಇದು ವಿಶಾಖಾ ಮಾರ್ಗದರ್ಶಿಗೆ ವಿರುದ್ಧವಾಗಿದೆ ಎಂದೂ ದೂರುದಾರೆ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖಾ ಸಮಿತಿಯನ್ನು ಇವತ್ತು ಸಂಜೆ ಪುನಾರಚನೆ ಮಾಡುವ ಸಾಧ್ಯತೆ ಇದೆ.