ಕರ್ನಾಟಕ

ರಮೇಶ್ ಜಾರಕಿಹೊಳಿ ಬಂಡಾಯ – ಪಕ್ಷಕ್ಕೆ ಯಾರನ್ನು ಆಹ್ವಾನಿಸಿಲ್ಲ: ಯಡಿಯೂರಪ್ಪ ಸ್ಪಷ್ಟನೆ

Pinterest LinkedIn Tumblr


ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಧಿಕ ಸ್ಥಾನದಲ್ಲಿ ಗೆಲುವು ಪಡೆಯಲಿದ್ದು, ಈ ಬಾರಿ 22 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರಿಗೆ ಪಕ್ಷಕ್ಕೆ ಆಹ್ವಾನ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಯಾರನ್ನೂ ಆಮಂತ್ರಣ ಮಾಡಿಲ್ಲ. ಈ ರೀತಿಯ ಗೊಂದಲದಲ್ಲಿ ನಾವು ಯಾವುದೇ ಕಾರಣಕ್ಕೂ ಕೈ ಹಾಕಿಲ್ಲ. ಸದ್ಯ ನಮ್ಮ ಗಮನ ಏನಿದ್ದರೂ ಎರಡು ಉಪಚುನಾವಣೆ ಕ್ಷೇತ್ರಗಳಲ್ಲಿ ಗೆಲುವು ಪಡೆಯುವತ್ತ ಇದೆ. ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ಸೇರಿ, ಅಭ್ಯರ್ಥಿ ಆಯ್ಕೆ ಮಾಡುವ ಹಾಗೂ ಗೆಲುವಿಗೆ ಶ್ರಮ ವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಮೇ 23ರ ಬಳಿಕ ಬದಲಾವಣೆಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಾವು 22 ಸ್ಥಾನ ಗೆದ್ದ ಮೇಲೆ ಏನೇನು ಪರಿಣಾಮಗಳು ಆಗುತ್ತೇವೆ ಎಂಬುವುದನ್ನು ಕಾದು ನೋಡಿ. ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಮುಖಂಡರ ಸಭೆ ನಡೆಸಿದ್ದು, ಕನಿಷ್ಠ ಒಂದೂವರೆ ಲಕ್ಷ ಅಂತರದಲ್ಲಿ ರಾಘವೇಂದ್ರ ಅವರು ಗೆದ್ದು ಸಂಸತ್ ಪ್ರವೇಶ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಣ ಹಂಚಿ ಚುನಾವಣೆ ಗೆಲ್ಲಬಹುದು ಎನ್ನುವವರಿಗೆ ಶಿವಮೊಗ್ಗ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ರೇವಣ್ಣ, ದೇವೇಗೌಡ, ಕುಮಾರಸ್ವಾಮಿ ಹಾಗೂ ಡಿಕೆಶಿವಕುಮಾರ್ ಎಲ್ಲರೂ ಬಂದರು. ಅಪ್ಪಾಜಿಗೌಡರಿಗೆ ಸೇರಿದ ಹಣ ಕೂಡ ಸಿಕ್ತು. ಆದರೆ ರಾಘವೇಂದ್ರ ಅವರ ಗೆಲುವು ನಿಶ್ಚಿತ. ರಾಜ್ಯದಲ್ಲಿ ಬಿಜೆಪಿ ಕಲಬುರಗಿ, ಕೋಲಾರ, ಮಂಡ್ಯ ಕ್ಷೇತ್ರದಲ್ಲೂ ಗೆಲುವು ಪಡೆಯಲಿದೆ. ಬಹುತೇಕ ಕಾಂಗ್ರೆಸ್ ನಾಯಕರು ಮನೆಗೆ ಹೋಗುತ್ತಾರೆ ಎಂದು ತಿಳಿಸಿದರು.

Comments are closed.