ಕರ್ನಾಟಕ

ಶ್ರೀಲಂಕಾದಲ್ಲಿ ಇನ್ನೂ 87 ಸ್ಫೋಟಕಗಳು ಪತ್ತೆ; ಇನ್ನಷ್ಟು ದಾಳಿಗಳಾಗಬಹುದು: ಅಮೆರಿಕ ಎಚ್ಚರಿಕೆ

Pinterest LinkedIn Tumblr


ಬೆಂಗಳೂರು: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಿನ್ನೆ 8 ಸರಣಿ ಬಾಂಬ್ ಸ್ಫೋಟಗಳಿಂದ 290ಕ್ಕೂ ಹೆಚ್ಚು ಜನರು ಬಲಿಯಾದ ಘಟನೆ ನಡೆದ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಅಲ್ಲಿನ ಸರಕಾರ ಅಣಿಯಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗುವಂತೆ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಎಮರ್ಜೆನ್ಸಿ ಸ್ಥಿತಿ ಘೋಷಿಸಲಿದ್ದಾರೆ. ತುರ್ತು ಸ್ಥಿತಿ ಘೋಷಣೆಗೆ ಕಾನೂನಿನಲ್ಲಿ ತಿದ್ದುಪಡಿ ತರಲಾಗುತ್ತಿದೆ. ತುರ್ತು ಸ್ಥಿತಿ ಭಯೋತ್ಪಾದನೆ ನಿಗ್ರಹಕ್ಕಷ್ಟೇ ಸೀಮಿತವಾಗುತ್ತದೆ. ಜನರ ವಾಕ್​ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಸರಕಾರದ ಮಾಧ್ಯಮ ಘಟಕವು ಸ್ಪಷ್ಟಪಡಿಸಿದೆ.

ಇನ್ನೂ 87 ಸ್ಫೋಟಕಗಳು ಪತ್ತೆ:

ಕೊಲಂಬೋದ ಪ್ರಮುಖ ಬಸ್ ನಿಲ್ದಾಣವೊಂದರಲ್ಲಿ ಪೊಲೀಸರಿಗೆ 87 ಸ್ಫೋಟಕಗಳು ಪತ್ತೆಯಾಗಿದ್ದು, ಅವೆಲ್ಲವನ್ನೂ ನಿಷ್ಕ್ರಿಯಗೊಳಿಸಿದ್ದಾರೆ. ಉಗ್ರಗಾಮಿಗಳು ಈಗಿರುವುದಕ್ಕಿಂತ ತೀವ್ರ ಮಟ್ಟದಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿರುವುದು ಇದರಿಂದ ಸ್ಪಷ್ಟವಾಗಿದೆ. ಲಂಕಾ ಪೊಲೀಸರು ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಅಲ್ಲಿ ತುರ್ತು ಪರಿಸ್ಥಿತಿ ಹೇರಲಾಗುತ್ತಿದೆ.

ಇದೇ ವೇಳೆ, ನಿನ್ನೆ ಸ್ಫೋಟ ಸಂಭವಿಸಿದ ಚರ್ಚ್ ಸಮೀಪದ ವ್ಯಾನ್​ವೊಂದರಲ್ಲಿ ಮತ್ತೊಂದು ಸ್ಫೋಟವಾಗಿದೆ. ಭದ್ರತಾ ಪಡೆಗಳು ತಪಾಸಣೆ ನಡೆಸುವ ವೇಳೆ ಈ ಸ್ಫೋಟಕ ಪತ್ತೆಯಾಗಿತ್ತು. ಅದನ್ನು ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟವಾಗಿದೆ. ಅಧಿಕಾರಿಗಳ ಪ್ರಕಾರ, ಇದು ನಿಯಂತ್ರಿತ ಸ್ಫೋಟವಾಗಿದೆ. ಅಂದರೆ ಸುರಕ್ಷಿತ ವಿಧಾನದಲ್ಲಿ ಐಇಡಿ ಬಾಂಬನ್ನು ಸ್ಫೋಟಗೊಳ್ಳುವಂತೆ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಕೊಲಂಬೋದ್ ಫೋರ್ಟ್ ಪ್ರದೇಶದಲ್ಲಿ ಶಂಕಾಸ್ಪದ ಪಾರ್ಸೆಲ್ ವಸ್ತುವೊಂದು ಪತ್ತೆಯಾಗಿದ್ದು, ಭದ್ರತಾ ಪಡೆಗಳು ಆ ಸ್ಥಳದಿಂದ ಜನರನ್ನು ತೆರವುಗೊಳಿಸಿದ್ದಾರೆ. ಆ ವಸ್ತುವಿನ ಪರಿಶೀಲನೆ ನಡೆದಿದೆ.

ಮತ್ತೆ ಕರ್ಫ್ಯೂ ಜಾರಿ:

ಶ್ರೀಲಂಕಾದಲ್ಲಿ ನಿನ್ನೆ ರಾತ್ರಿಯಿಂದ ಇದ್ದ ನಿಷೇಧಾಜ್ಞೆಯನ್ನು ಇವತ್ತು ಬೆಳಗ್ಗೆ ತೆರವುಗೊಳಿಸಲಾಗಿತ್ತು. ಈಗ ಸಜೀವ ಬಾಂಬ್​ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕರ್ಫ್ಯೂ ಹೇರಲಾಗುತ್ತಿದೆ. ಇವತ್ತು ರಾತ್ರಿ 8ಗಂಟೆಯಿಂದ ಜಾರಿಯಾಗಲಿರುವ ನಿಷೇಧಾಜ್ಞೆ ಮಂಗಳವಾರ ಸಂಜೆ 4ರವರೆಗೂ ಇರಲಿದೆ.

ನ್ಯಾಷನಲ್ ತಾವ್​ಹೀದ್ ಜಮಾತ್ ಸಂಘಟನೆಯ ಕೈವಾಡ?

ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಸರಣಿ ಬಾಂಬ್ ಸ್ಫೋಟ ಘಟನೆಯಲ್ಲಿ ನ್ಯಾಷನಲ್ ತಾವ್​ಹೀದ್ ಜಮಾತ್ ಸಂಘಟನೆಯ ಕೈವಾಡ ಇದೆ ಎಂದು ಲಂಕಾ ಪೊಲೀಸರು ಶಂಕಿಸಿದ್ಧಾರೆ. ಘಟನೆ ಸಂಬಂಧ ಈಗಾಗಲೇ 24 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಆತ್ಮಾಹುತಿ ದಾಳಿ ಎಸಗಿದವರೆಲ್ಲರೂ ಲಂಕಾ ನಿವಾಸಿಗಳೇ ಎನ್ನಲಾಗಿದೆ. ಇತ್ತೀಚಿನ ವರ್ಷಗಳ ಹಿಂದಷ್ಟೇ ಜನ್ಮ ತಾಳಿದ ಎನ್​ಟಿಜೆ ಸಂಘಟನೆಯು ಜಾಗತಿಕ ಜಿಹಾದಿ ಸಮರದ ಗುರಿ ಹೊಂದಿದೆ ಎನ್ನಲಾಗಿದೆ. ಈ ಹಿಂದೆ ಲಂಕಾದಲ್ಲಿ ಬೌದ್ಧ ವಿಗ್ರಹಗಳನ್ನ ನಾಶ ಮಾಡಿದ್ದು ಇದೇ ಉಗ್ರ ಸಂಘಟನೆಯಾಗಿದೆ. ಈಗ ಕ್ರೈಸ್ತರು ಮತ್ತು ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಈ ಸಂಘಟನೆ ಯಾಕೆ ದಾಳಿ ನಡೆಸಿತೆಂಬುದು ಗೊತ್ತಾಗಿಲ್ಲ. ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳೊಂದಿಗೆ ಎನ್​ಟಿಜೆ ಹೊಂದಿರುವ ಸಂಬಂಧದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಭಾರತದಲ್ಲೂ ಹೈ ಅಲರ್ಟ್:

ಲಂಕಾದಲ್ಲಿ ದಾಳಿಯ ಸಂಚು ರೂಪಿಸಿದ ವ್ಯಕ್ತಿಗಳು ಸಮುದ್ರದ ಮೂಲಕ ಭಾರತದ ಕರಾವಳಿ ಭಾಗವನ್ನು ತಲುಪುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಸುಳಿವು ನೀಡಿವೆ. ಈ ಹಿನ್ನೆಲೆಯಲ್ಲಿ ಭಾರತದ ಕರಾವಳಿ ಭಾಗದೊಳಗೆ ಇವರು ನುಸುಳುವ ಸಾಧ್ಯತೆ ಇರುವುದರಿಂದ ಭಾರತೀಯ ಕರಾವಳಿ ಕಾವಲು ಪಡೆ ಹೈ ಅಲರ್ಟ್​ನಲ್ಲಿದೆ. ಉಗ್ರರನ್ನು ಸಮುದ್ರದಲ್ಲೇ ಇದಿರುಗೊಂಡು ಸದೆ ಬಡಿಯಲು ಭಾರತೀಯ ನೌಕಾ ಪಡೆಗಳು ಕಾಯುತ್ತಿವೆ.

ಇನ್ನಷ್ಟು ದಾಳಿಗಳ ಸಾಧ್ಯತೆ: ಅಮೆರಿಕ ಎಚ್ಚರಿಕೆ

ಶ್ರೀಲಂಕಾದಲ್ಲಿ ಇನ್ನಷ್ಟು ದಾಳಿಗಳನ್ನ ಸಂಯೋಜಿಸಲು ಉಗ್ರ ಸಂಘಟನೆಗಳು ಸಂಚು ರೂಪಿಸುತ್ತಿವೆ. ಜನನಿಬಿಡ ಪ್ರದೇಶಗಳಾದ ಪ್ರವಾಸಿಗರ ಸ್ಥಳಗಳು, ಬಸ್ ನಿಲ್ದಾಣ, ಶಾಪಿಂಗ್ ಮಾಲ್, ಹೋಟೆಲ್, ಪೂಜಾ ಮಂದಿರ, ಏರ್​ಪೋರ್ಟ್ ಮೊದಲಾದೆಡೆ ಅನಿರೀಕ್ಷಿತ ರೀತಿಯಲ್ಲಿ ಉಗ್ರರು ದಾಳಿ ಎಸಗುವ ಸಾಧ್ಯತೆ ಇದೆ ಎಂದು ಅಮೆರಿಕ ಸರಕಾರದ ವಿದೇಶಾಂಗ ಇಲಾಖೆ ಎಚ್ಚರಿಸಿದೆ.

Comments are closed.