ಚಿಕ್ಕೋಡಿ: ಮೈತ್ರಿ ಸರ್ಕಾರಕ್ಕೆ ಮಂಡ್ಯ ಬಿಟ್ಟರೆ ಬೇರೆ ಜಿಲ್ಲೆಗಳು ಕಾಣುವುದೇ ಇಲ್ಲ. ಮಹದಾಯಿ ಬಗ್ಗೆ ಮಾತನಾಡುವ ಜೆಡಿಎಸ್ ಕಾಂಗ್ರೆಸ್ ನಾಯಕರು ಬಜೆಟ್ನಲ್ಲಿ ಮಹದಾಯಿ ಯೋಜನೆಗೆ ಒಂದು ನಯಾಪೈಸೆ ಹಣ ಮೀಸಲಿಟ್ಟಿಲ್ಲ ಎಂದು ಮಾಜಿ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಚಿಕ್ಕೋಡಿಯಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಮೈತ್ರಿ ಪಕ್ಷದ ನಾಯಕರ ವಿರುದ್ಧ ಪ್ರಶ್ನೆ ಮಾಡಿರುವ ಶೋಭಾ ಕರಾಂದ್ಲಾಜೆ, “ನೀವು ಚುನಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ಮನೆ ಮಾಡ್ತೀರಿ, ಇಲ್ಲಿನ ಜನರ ಜೊತೆಗೆ ಓಡಾಡ್ತೀರಿ. ಆದರೆ ಚುನಾವಣೆ ಬಳಿಕ ಏನ್ ಮಾಡಿದ್ದೀರಿ? ಚುನಾವಣೆಯ ನಂತರ ನಿಮ್ಮ ಕಣ್ಣಿಗೆ ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಗಳು ಕಾಣಿಸುವುದೇ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, “ಸಿದ್ದರಾಮಯ್ಯನವರೇ ನೀವು ಮಾತನಾಡಿದ ಭಾಷೆ ನಿಮಗೆ ಗೌರವ ತರುತ್ತಾ? ಒಬ್ಬ ಪ್ರಧಾನಿಯನ್ನು ಏಕವಚನದಲ್ಲಿ ಮಾತಾಡ್ತೀರಿ. ನಿಮಗೆ ಮೋದಿಯನ್ನು ಕಂಡರೆ ಭಯ. ಅದಕ್ಕೆ ಹಾಗೆ ಮಾತನಾಡುತ್ತಿದ್ದೀರಿ. ಜಾತಿ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಒಡೆದವರು, ಸ್ವಾರ್ಥಕ್ಕಾಗಿ ಧರ್ಮವನ್ನೇ ಒಡೆದವರು ನೀವು. ನಿಮ್ಮಂಥವರನ್ನು ನೋಡಿಯೇ ಪುರಂದರ ದಾಸರು ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ” ಎಂದು ಹೇಳಿರುವುದೆಂದು ಮಾತಿನಲ್ಲೇ ತಿವಿದರು.
ಶೋಭಾ ಪೆದ್ದಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿದ್ದ ಅವರು, “ಹೌದು ನಾನು ಪೆದ್ದಿ, ಏಕೆಂದರೆ ನಾವು ಜಾತಿ ಒಡೆದಿಲ್ಲ. ಧರ್ಮ ಒಡೆದಿಲ್ಲ ಹೀಗಾಗಿ ನಾವು ಪೆದ್ದರೆ ಎಂದರು. ಇನ್ನೂ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿದ ಅವರು, ಮೇ.23 ರಂದು ಫಲಿತಾಂಶ ಹೊರಬಿದ್ದ ನಂತರ ದೋಸ್ತಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.