ಕ್ರೀಡೆ

ಮಹಿಳೆಯರ ಕುರಿತು ಅಸಭ್ಯ ಹೇಳಿಕೆ; ಪಾಂಡ್ಯ ಹಾಗೂ ರಾಹುಲ್​ಗೆ ತಲಾ 20 ಲಕ್ಷ ದಂಡ ವಿಧಿಸಿ ತೀರ್ಪು

Pinterest LinkedIn Tumblr

ಮುಂಬೈ: ಕೆಲ ತಿಂಗಳ ಹಿಂದೆ ಕಾಫಿ ವಿತ್ ಕರಣ್ ಷೋನಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್​ಗೆ ಬಿಸಿಸಿಐ ಓಂಬುಡ್ಸ್​ಮನ್​ ಡಿ.ಕೆ. ಜೈನ್ ತಲಾ 20 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ವಿಶಿಷ್ಟವಾದ ತೀರ್ಪು ನೀಡಿರುವ ಓಂಬುಡ್ಸ್​ಮನ್​ ಇಬ್ಬರೂ ತಲಾ 10 ಲಕ್ಷ ಮೊತ್ತವನ್ನು ಪ್ಯಾರಾಮಿಲಿಟರಿ ಪೋರ್ಸ್​ನಲ್ಲಿ ಪ್ರಾಣತೆತ್ತ 10 ಸೈನಿಕರ ವಿಧವೆ ಪತ್ನಿಯರಿಗೆ ತಲಾ ಒಂದು ಲಕ್ಷ ನೀಡಬೇಕು ಹಾಗೂ ಅಂಧರ ಕ್ರಿಕೆಟ್ ಅಭಿವೃದ್ಧಿಗಾಗಿ ಅಂಧರ ಕ್ರಿಕೆಟ್ ಸಂಸ್ಥೆಯ ಹೆಸರಿನಲ್ಲಿ ಇಬ್ಬರೂ ತಲಾ 10 ಲಕ್ಷ ಠೇವಣಿ ಇಡಬೇಕು ಎಂದು ತೀರ್ಪು ನೀಡಿದ್ದಾರೆ.

ತೀರ್ಪು ನೀಡಿದ ಒಂದು ವಾರದ ಒಳಗಾಗಿ ಇಬ್ಬರೂ ಆಟಗಾರರು ದಂಡದ ಮೊತ್ತವನ್ನು ಪಾವತಿಸಬೇಕು. ಹಾಗೆ ಅವರು ಪಾವತಿಸದಿದ್ದಲ್ಲಿ ಅವರ ಪಂದ್ಯದ ಸಂಭಾವನೆ ಹಣದಿಂದ ದಂಡದಮೊತ್ತವನ್ನು ಕಳೆದು ಬಿಸಿಸಿಐ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆದ ಡಿ.ಕೆ. ಜೈನ್ ತೀರ್ಪು ನೀಡಿದ್ದಾರೆ.

ಅಲ್ಲದೆ ಇದೇ ಸಂದರ್ಭದಲ್ಲಿ ಇಬ್ಬರೂ ಆಟಗಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, “ಕ್ರಿಕೆಟ್ ಆಟಗಾರರು ಜನರಿಗೆ ಮಾದರಿಯಾಗಿರಬೇಕು. ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವ ಅನುಕರಣೀಯವಾಗಿರುತ್ತದೆ. ಹೀಗಾಗಿ ಸಮಾಜದಲ್ಲಿ ನಿಮ್ಮ ಘನತೆ ಹಾಗೂ ಜವಾಬ್ದಾರಿ ಏನು? ಎಂಬುದನ್ನು ತಿಳಿದು ನಡೆಯಿರಿ” ಎಂದು ತಾಕೀತು ಮಾಡಿದ್ದಾರೆ.

ಕ್ರಿಕೆಟರ್​ಗಳಾದ ಕೆ.ಎಲ್. ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಹಿಂದಿಯ ಖ್ಯಾತ ‘ಕಾಫಿ ವಿತ್ ಕರಣ್ ಶೋ’ ನಲ್ಲಿ ಭಾಗಿಯಾಗಿದ್ದರು, ಅಲ್ಲದೆ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡುವ ಮೂಲಕ ದೇಶದಾದ್ಯಂತ ಮಹಿಳಾವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಪರಿಣಾಮ ಇವರನ್ನು ಬಿಸಿಸಿಐ ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಯಿಂದ ಹಿಂದಕ್ಕೆ ಕರೆಸಿಕೊಂಡು ಪ್ರಕರಣವನ್ನು ಓಂಬುಡ್ಸ್ಮನ್ಗೆ ವಹಿಸಿತ್ತು.

ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ಇಬ್ಬರೂ ಕ್ಷಮೆಯಾಚಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾ ಸರಣಿಯಿಂದ ಹಿಂದೆ ಸರಿಯುವ ಮೂಲಕ 30 ಲಕ್ಷ ಆದಾಯವನ್ನು ಕಳೆದುಕೊಂಡಿದ್ದರು. ಪ್ರಸ್ತುತ ಇಬ್ಬರೂ ಆಟಗಾರರು ಐಪಿಎಲ್​ ಕ್ರಿಕೆಟ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದು, ವಿಶ್ವಕಪ್​ಗೆ ತಯಾರಿ ನಡೆಸುತ್ತಿದ್ದಾರೆ.

Comments are closed.