ಕರ್ನಾಟಕ

ರಮೇಶ್​ ಜಾರಕಿಹೊಳಿಗೆ ಗೇಟ್​ಪಾಸ್​?: ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ ಸತೀಶ್​ ಜಾರಕಿಹೊಳಿ

Pinterest LinkedIn Tumblr


ಗೋಕಾಕ್: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಸಂಪುಟ ಸಭೆ ವಿಸ್ತರಣೆಯ ನಂತರ ಸಚಿವ ರಮೇಶ್ ಜಾರಕಿಹೊಳಿಯನ್ನು ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದರಿಂದ ಕಾಂಗ್ರೆಸ್​ ವಿರುದ್ಧ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಕಳೆದ ಕೆಲ ತಿಂಗಳಿನಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಚಿಂಚೊಳ್ಳಿ ಮಾಜಿ ಶಾಸಕ ಉಮೇಶ್ ಜಾಧವ್ ಸೇರಿದಂತೆ 4 ಶಾಸಕರ ಜೊತೆ ಮುಂಬೈ ತೆರಳಿ ಸರ್ಕಾರವನ್ನೇ ಬೀಳಿಸುವ ಬೆದರಿಕೆಯನ್ನೂ ಒಡ್ಡಿದ್ದರು.

ಆದರೆ, ಅಷ್ಟೊತ್ತಿಗಾಗಲೆ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಆಡಿಯೋ ಪ್ರಕರಣ ಸದ್ದು ಮಾಡಿದ ಪರಿಣಾಮ ರಮೇಶ್ ಸುಮ್ಮನಾಗಿದ್ದರು. ಆದರೆ, ಲೋಕಸಭಾ ಚುನಾವಣೆ ಗರಿಗೆದರಿರುವ ಈ ದಿನಗಳಲ್ಲಿ ರಮೇಶ್ ಮತ್ತೆ ರೆಬೆಲ್ ಆಗಿದ್ದಾರೆ.

ಈ ನಡುವೆ ಕಳೆದ ಕೆಲ ದಿನಗಳಿಂದ ಬೆಳಗಾವಿಯ ಚಿಕ್ಕೋಡಿ ನಿಪ್ಪಾಣಿ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಬಿಜೆಪಿ ಪರ ಕೆಲಸ ಮಾಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾದರೆ, ರಮೇಶ್ ನಡೆಯಿಂದ ಸಹೋದರ ಸತೀಶ್​ ಜಾರಕಿಹೊಳಿಗೂ ಪಕ್ಷ ಹಾಗೂ ಕ್ಷೇತ್ರದಲ್ಲಿ ಇರಿಸುಮುರಿಸು ಉಂಟಾಗಿರುವುದು ಸುಳ್ಳಲ್ಲ.

ಹೀಗಾಗಿ ಸಹೋದರನ ಪಕ್ಷ ವಿರೋಧಿ ಚಟುವಟಿಕೆ ಕುರಿತು ಗೋಕಾಕ್ ತಾಲೂಕಿನ ಕೊಳವಿ ಗ್ರಾಮದಲ್ಲಿ ಇಂದು ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ, “ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಶಿಸ್ತು ಕ್ರಮಕ್ಕೆ ಹೈಕಮಾಂಡ್​ಗೆ ಶಿಫಾರಸು ಮಾಡಲಾಗುವುದು ಅಲ್ಲದೆ ಗೋಕಾಕ್ ವಿಧಾನ ಸಭಾ ಕ್ಷೇತ್ರದಲ್ಲಿ ರಮೇಶ್​ಗೆ ಪರ್ಯಾಯವಾಗಿ ಲಖನ್ ಜಾರಕಿಹೊಳಿಯನ್ನು ಬೆಳೆಸಲಾಗುವುದು” ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ರೆಬೆಲ್ ಶಾಸಕ ರಮೇಶ್ ಪಕ್ಷದಲ್ಲಿ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Comments are closed.