![](https://www.kannadigaworld.com/wp-content/uploads/2019/03/reva-588x450.jpg)
ಹಾಸನ: ಹಾಸನ ಚುನಾವಣಾ ಅಧಿಕಾರಿಗಳು ಸಚಿವ ಎಚ್.ಡಿ. ರೇವಣ್ಣ ಬೆಂಗಾವಲು ಪಡೆ ವಾಹನವನ್ನು ತಪಾಸಣೆ ಮಾಡಿ ಲೆಕ್ಕಕ್ಕೆ ಬಾರದ ಸುಮಾರು 1.2 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.
ವಿಕಾಸ್ ಎಂಬುವವರು ನೀಡಿದ ದೂರಿನ ಮೇರೆಗೆ ತಡರಾತ್ರಿ 12.45ಕ್ಕೆ ಹಾಸನ ಜಿಲ್ಲೆ ಹೊಳೆನರಸೀಪುರದ ಸಚಿವ ರೇವಣ್ಣ ಮನೆ ಪಕ್ಕದಲ್ಲಿರುವ ಚನ್ನಾಂಬಿಕಾ ಚಿತ್ರ ಮಂದಿರದ ಮುಂಭಾಗ ನಿಂತಿದ್ದ ಅವರ ಬೆಂಗಾವಲು ಪಡೆಯ ವಾಹನವನ್ನು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಅನಧೀಕೃತ ಹಣವನ್ನು ಜಪ್ತಿ ಮಾಡಿದ್ದಾರೆ ಅಲ್ಲದೆ ಪ್ರಕರಣದ ಸಂಬಂಧ ಬೆಂಗಾವಲು ಪಡೆ ವಾಹನ ಚಾಲಕ ಚಂದ್ರಯ್ಯ ಹಾಗೂ ರವಿ ಎಂಬುವವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಬುಧವಾರ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ವ್ಯಾಪಕವಾಗಿ ಮತಕ್ಕಾಗಿ ಹಣ ಹಂಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಅನುಮಾನಾಸ್ಪದ ಕಡೆಗಳಲ್ಲಿ ದಾಳಿ ನಡೆಸುತ್ತಿದ್ದು, ಅಪಾರ ಪ್ರಮಾಣದ ಹಣವನ್ನು ಈಗಾಗಲೆ ಜಪ್ತಿ ಮಾಡಿದ್ದಾರೆ.
ಆದರೆ, ಮೈತ್ರಿ ಸರ್ಕಾರದ ಸಚಿವ ಎಚ್.ಡಿ. ರೇವಣ್ಣ ಅವರ ಬೆಂಗಾವಲು ವಾಹನದಲ್ಲೇ ಹಣ ಜಪ್ತಿ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ರೇವಣ್ಣ ಉತ್ತರಕ್ಕೆ ಎ.ಮಂಜು ಆಗ್ರಹ : ಸಚಿವ ಎಚ್.ಡಿ. ರೇವಣ್ಣ ಅವರ ಬೆಂಗಾವಲು ಪಡೆ ವಾಹನದಲ್ಲಿ ಸುಮಾರು 1.2 ಲಕ್ಷ ಹಣ ಜಪ್ತಿ ಮಾಡಿರುವ ಕುರಿತು ಸಚಿವ ರೇವಣ್ಣ ಉತ್ತರ ಕೊಡಬೇಕು ಎಂದು ಮಾಜಿ ಸಚಿವ, ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಆಗ್ರಹಿಸಿದ್ದಾರೆ.
ಬುಧವಾರ ಬೆಳಗ್ಗೆ ಈ ಕುರಿತು ಹೇಳಿಕೆ ನೀಡಿರುವ ಎ. ಮಂಜು. “ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆ ಗೆಲ್ಲುತ್ತೇನೆ ಎಂಬ ಸಂಪ್ರದಾಯ ಸರಿಯಲ್ಲ. ಈ ಹಿಂದೆ ರೇವಣ್ಣ ಡೈರಿಯ ಸೂಪರಿಂಡೆಂಟ್ ಹಾಗೂ ಸಿಬ್ಬಂದಿಗಳನ್ನು ಬಳಸಿಕೊಂಡು ಹಣ ಹಂಚುತ್ತಿದ್ದರು. ಈಗಲೂ ಅಂತಹದ್ದೆ ಕೆಲಸಕ್ಕೆ ಮುಂದಾಗಿದ್ದಾರೆ. ನಾವು ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಕುರಿತು ತನಿಖೆ ನಡೆಯಬೇಕು ಹಾಗೂ ರೇವಣ್ಣ ಇದಕ್ಕೆ ಉತ್ತರ ನೀಡಬೇಕು ಎಂದು” ಆಗ್ರಹಿಸಿದ್ದಾರೆ.
Comments are closed.