ಕರ್ನಾಟಕ

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನದಂದೇ ಹಾಸನ, ಮಂಡ್ಯ, ಬೆಂಗಳೂರಿನಲ್ಲಿ ಮತ್ತೆ ಐಟಿ ದಾಳಿ, ದೋಸ್ತಿ ನಾಯಕರಿಗೆ ಶಾಕ್!

Pinterest LinkedIn Tumblr

ಮಂಡ್ಯ/ಹಾಸನ/ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದ್ದು, ಮತದಾನಕ್ಕೆ ಕೇವಲ 48 ಗಂಟೆಗಳು ಬಾಕಿ ಇವೆ. ಇಂದು ಅಭ್ಯರ್ಥಿಗಳಿಂದ ಎಲ್ಲೆಡೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇದರ ನಡುವೆಯೇ ಮಂಡ್ಯ, ಹಾಸನ ಹಾಗೂ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪ್ರತಿಷ್ಠಿತ ಕಣವಾಗಿರುವ ಮಂಡ್ಯದಲ್ಲಿ ಈ ಬಾರಿ ಕುರುಡು ಕಾಂಚಾಣ ಕುಣಿಯಬಹುದೆಂಬುದನ್ನು ಮನದಟ್ಟು ಮಾಡಿಕೊಂಡಿರುವ ಐಟಿ ಇಲಾಖೆ ಕ್ಷೇತ್ರದ ಮೇಲೆ ತನ್ನ ಹದ್ದಿನ ಕಣ್ಣನ್ನು ನೆಟ್ಟಿದೆ. ಪದೇಪದೆ ಇಲ್ಲಿನ ಸಚಿವರ ಆಪ್ತರ ಹಾಗೂ ಗುತ್ತಿಗೆದಾರರ ಮನೆಗಳ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಸನದಲ್ಲೂ ಜೆಡಿಎಸ್​ ದಳಪತಿಗಳ ಕೋಟೆಗೆ ಮುತ್ತಿಗೆ ಹಾಕಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಜಮೀರ್​ ಅಹಮ್ಮದ್​ ಆಪ್ತರ ಮನೆಗೂ ಐಟಿ ಕಾವು ತಟ್ಟಿದೆ.

ಸಚಿವ ಪುಟ್ಟರಾಜು ಬೆಂಬಲಿಗನ ಮನೆ ಮೇಲೆ ದಾಳಿ
ಇಂದು ಕೂಡ ಸಚಿವ ಪುಟ್ಟರಾಜು ಬೆಂಬಲಿಗರಾದ ಜಿಪಂ ಸದಸ್ಯ ತಿಮ್ಮೇಗೌಡ ಎಂಬುವರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಪಾಂಡವಪುರ ಪಟ್ಟಣದಲ್ಲಿರುವ ಮನೆ ಮೇಲೆ ದಾಳಿ ನಡೆದಿದ್ದು, 8 ಅಧಿಕಾರಿಗಳ ತಂಡ ದಾಖಲೆ ಪರಿಶೀಲಿಸುತ್ತಿದೆ. ದಾಳಿ ವೇಳೆ ತಿಮ್ಮೇಗೌಡ ಮನೆಯಲ್ಲೇ ಇದ್ದರು ಎಂಬ ಮಾಹಿತಿ ಇದ್ದು, ಅವರ ಮೊದಲ ಪುತ್ರ ಚೇತನ್ ಎಂಬುವರಿಗೆ ಸೇರಿದ ಸಾಮಿಲ್ ಮತ್ತು ಅಂಗಡಿ ಹಾಗೂ 2ನೇ ಮಗ ಅನಿಲ್​ಗೆ ಸೇರಿದ ಪೆಟ್ರೊಲ್ ಬಂಕ್ ಮೇಲೆ ದಾಳಿ ನಡೆದಿದೆ.

ಸಚಿವ ಡಿ.ಸಿ.ತಮ್ಮಣ್ಣನ ಆಪ್ತನಿಗೂ ತಟ್ಟಿದ ಐಟಿ ಬಿಸಿ
ಮೊತ್ತೊಬ್ಬ ಮಂಡ್ಯ ಸಚಿವ ಡಿ.ಸಿ. ತಮ್ಮಣ್ಣನ ಬೆಂಬಲಿಗನಿಗೂ ಐಟಿ ಶಾಕ್ ಎದುರಾಗಿದೆ. ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಜೆಡಿಎಸ್ ಮುಖಂಡನ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ದಾಳಿಯಾಗಿದೆ. ಜಿಪಂ ಅಧ್ಯಕ್ಷೆ ನಾಗರತ್ನ ಪತಿ ಸಾದೊಳಲು ಸ್ವಾಮಿಗೆ ಸೇರಿದ ಕಂಪನಿಯಾಗಿದ್ದು, ಈತ ಸಿಎಂ ಹಾಗೂ ಸಚಿವ ತಮ್ಮಣ್ಣ ಆಪ್ತರಾಗಿದ್ದಾರೆ. ಸಾದೊಳಲು ಸ್ವಾಮಿ, ಮೈಸೂರು ವಲಯದ ಜೆಡಿಎಸ್ ವೀಕ್ಷಕರಾಗಿದ್ದಾರೆ. ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ದೇವೇಗೌಡರ ತಮ್ಮನ ಮಗನಿಗೂ ಐಟಿ ಏಟು
ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಹುಟ್ಟೂರಾದ ಹರದನಹಳ್ಳಿಗೂ ಪ್ರವೇಶಿಸಿದ ಐಟಿ ಅಧಿಕಾರಿಗಳು ದೇವೇಗೌಡರ ತಮ್ಮನ ಮಗ ಪಾಪಣ್ಣಿ ಎಂಬುವವರ ಮನೆ ಮೇಲೆ ದಾಳಿ ಮಾಡಿದ್ದಾರೆ. ಪಾಪಣ್ಣಿ, ಹಾಸನ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರಾಗಿದ್ದು, ಮೂರು ಇನ್ನೋವಾ ಕಾರಿನಲ್ಲಿ ಬಂದಿರುವ 15 ಜನರ ಅಧಿಕಾರಿಗಳ ತಂಡ ಬೆಳಿಗ್ಗೆ 7.15ಕ್ಕೆ ಪಾಪಣ್ಣಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಹಾಸನದ‌ ವಿದ್ಯಾನಗರದಲ್ಲಿರುವ ಗುತ್ತಿಗೆದಾರ ಇಂದ್ರೇಶ್ ಎಂಬುವವರ ಮನೆ ಮೇಲೂ ಐಟಿ ರೇಡ್ ಆಗಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.

ಸಚಿವ ಜಮೀರ್‌ ಆಪ್ತನಿಗೂ ಐಟಿ ಶಾಕ್​
ಸಚಿವ ಜಮೀರ್‌ ಅಹಮ್ಮದ್​ ಖಾನ್​ ಆಪ್ತರಾದ ಸೈಯದ್​ ಮುಜಾಹಿದ್ದೀನ್ ಹಾಗೂ ರೋಹನ್ ಎಂಬುವರ ಮನೆಗಳ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಫ್ರೇಜರ್​ಟೌನ್​ನಲ್ಲಿರುವ ಸೈಯದ್​ ನಿವಾಸ ಹಾಗೂ ಬೆಂಗಳೂರಿನ ಟ್ಯಾನರಿ ರಸ್ತೆಯಲ್ಲಿರುವ ರೋಹನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ಮುತ್ತಿಗೆ ಹಾಕಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ರೋಹನ್, ಗೌತಮ್‌ ಜ್ಯುವೆಲ್ಲರ್ಸ್​ನ ಮಾಲೀಕರಾಗಿದ್ದಾರೆ.

Comments are closed.