ಕರ್ನಾಟಕ

ಎಂತಹ ಕಷ್ಟದಲ್ಲಿ ಸರ್ಕಾರ ನಡೆಸುತ್ತಿದ್ದೇನೆ ನಿಮಗೆ ಗೊತ್ತಿಲ್ಲ: ಜಂಟಿ ಸಮಾವೇಶದಲ್ಲಿ ಕುಮಾರಸ್ವಾಮಿ

Pinterest LinkedIn Tumblr


ಮೈಸೂರು: “ನಾನು ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ. ನಾನು 120 ಸೀಟ್ ಗೆದ್ದಿದ್ರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದೆ. ಈಗ ಎಂಥಾ ಕಷ್ಟದಲ್ಲಿ ಸರ್ಕಾರ ನಡೆಸ್ತಿದ್ದೇನೆ ನಿಮಗೆ ಗೊತ್ತಿಲ್ಲ,” ಎಂದು ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿ ತಮ್ಮ ದುಃಖವನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.

ಕೆ.ಆರ್​ ಪೇಟೆಯಲ್ಲಿ ಜೆಡಿಎಸ್​, ಕಾಂಗ್ರೆಸ್ ಜಂಟಿ​ ಸಮಾವೇಶದಲ್ಲಿ ಮಾತನಾಡಿದ ಅವರು, “ರೈತರು ಆತ್ಮಹತ್ಯೆ ಮಾಡಿಕೊಂಡಾಗ ಜಾತಿ, ಧರ್ಮ ನೋಡದೇ ಅವರ ಮನೆಗೆ ಹೋಗಿ ನಾನು ಸಾಂತ್ವನ ಹೇಳಿದೆ. 200 ಕುಟುಂಬಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ತಾಯಂದಿರ ಕಷ್ಟ ಕೇಳೋಕೆ ಯಾರಾದ್ರೂ ಬಂದಿದ್ರಾ,” ಎಂದು ಪ್ರಶ್ನಿಸಿದರು.

“ಪಕ್ಷೇತರ ಅಭ್ಯರ್ಥಿ ಕಣ್ಣಲ್ಲಿ ನೀರು ಹಾಕಿ ಡ್ರಾಮಾ ಶುರು ಮಾಡಿದ್ದಾರೆ. ಆದರೆ, ನಿಜವಾಗಿ ಕಣ್ಣೀರು ಹಾಕುತ್ತಿರುವವರು ನಾನು, ನಮ್ಮ ತಂದೆ. ಜನರ ಸಮಸ್ಯೆ ನೋಡಿ ಕಣ್ಣಲ್ಲಿ ನೀರು ಬರುತ್ತಿದೆ.” ಎಂದರು.

ಮೊದಲ ಬಾರಿ ನಾನು ಸಿಎಂ ಆದಾಗ, ಡಾ. ರಾಜಕುಮಾರ್ ನಿಧನರಾದಾಗ ನಮ್ಮ ಗಮನಕ್ಕೆ ತರದೆ ಮಾಧ್ಯಮಕ್ಕೆ ವಿಷಯ ತಿಳಿಸಿದರು. ಅಂದು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳಲಾಗಲಿಲ್ಲ. ಹೀಗಾಗಿ ಅಂತ್ಯಕ್ರಿಯೆಯ ವೇಳೆ ಹಲವು ಗೊಂದಲವಾಯಿತು ಎಂದು ಅವರು, ಅಂಬರೀಷ್ ಅವರನ್ನು ಮೊದಲು ಸಂಸದರನ್ನಾಗಿ ಮಾಡಿದ್ದು ಜನತಾ ಪಕ್ಷ. ನಂತರ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ. ಅವರು ನನಗೆ ಏನು ಸಹಾಯ ಮಾಡಿದ್ದಾರೆ ಈಗ ಮಾತನಾಡುವುದು ಬೇಡ. ಅಂಬರೀಷ್ ನಿಧನರಾದಾಗ ನನಗೆ ನನ್ನ ಮಗ ತಿಳಿಸಿದ. ಆಸ್ಪತ್ರೆಗೆ ಹೋದಾಗ ಅಲ್ಲಿ ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಅವರು ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. ಆ ತಾಯಿಗೆ ಕೇಳುತ್ತೇನೆ. ಆ ಸಣ್ಣ ಸೌಜನ್ಯವಾದರೂ ಅವರಿಗೆ ಇದೆಯಾ ಎಂದು ಸುಮಲತಾ ವಿರುದ್ಧ ಆಕ್ರೋಶ ಹೊರಹಾಕಿದರು.

ಅಂಬರೀಷ್​ ಅಂತಿಮ ದರ್ಶನಕ್ಕಾಗಿ ಮಧ್ಯ ರಾತ್ರಿಯಲ್ಲಿ ಒಂದು ರೂಂ ಶುಚಿಗೊಳಿಸಿ ಅವರು ಬಾಳಿದ ಮನೆಯಲ್ಲಿ ವ್ಯವಸ್ಥೆ ಮಾಡಿದೆ. ದೇಶದ ಇತಿಹಾಸದಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಸೇನೆಯ ವಿಮಾನ ಕೊಡುವುದಿಲ್ಲ. ಆದರೆ ಅಂದು ಈ ಅಭಿಮಾನಿಗಳು ಕೇಳಿಕೊಂಡರು ಎಂದು ಆ ವ್ಯವಸ್ಥೆ ಮಾಡಿದೆ. ನಾನು ಒಬ್ಬ ಮುಖ್ಯಮಂತ್ರಿ ಆಗಿ ಅಲ್ಲಿ ಕೂರಲಿಲ್ಲ, ಅಂತಹ ದರ್ದು ಇರಲಿಲ್ಲ ಎಂದು ಚಾಟಿ ಬೀಸಿದರು

ಈಗ ಅವ್ಯಾದೋ ಸಿನೆಮಾದವರು ಬಂದು ಮಂಡ್ಯದಲ್ಲಿ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ. ಯಶ್, ನಮ್ಮ ಪಕ್ಷವನ್ನು ಕಳ್ಳರ ಪಕ್ಷ ಎನ್ನುತ್ತಾರೆ. ನನಗೆ ಕೆಟ್ಟ ಹೆಸರು ಬರುತ್ತೆ ಎಂದು ನನ್ನ ಕಾರ್ಯಕರ್ತರು ಸುಮ್ಮನಿದ್ದಾರೆ ಎಂದು ಯಶ್​, ದರ್ಶನ್​ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಅಂಬರೀಶ್ ಪಾರ್ಥೀವ ಶರೀರವನ್ನ ಮಂಡ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದು ನಾನು ಮೊದಲು ತಿಳಿಸಿದೆ. ಮಗನೊಂದಿಗೆ ಚರ್ಚಿಸಿ ಬೇಡ ಎಂದ ಮಹಾನ್ ತಾಯಿ ಇವತ್ತು ಕಣ್ಣೀರಾಕಿ ಜನರ ಮುಂದೆ ಬಂದಿದ್ದಾರೆ. ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿದ್ದೆ ಆದರೆ ಈಗ ತಿಳಿಸುತ್ತಿದ್ದೇನೆ ಎಂದು ಅಂದು ನಡೆದ ಘಟನೆಯ ಸತ್ಯ ಬಿಚ್ಚಿಟ್ಟರು.

Comments are closed.