ಕರ್ನಾಟಕ

ಚಾಮರಾಜ ನಗರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವಿನ ಸ್ಟ್ರೈಟ್ ಫೈಟ್​ನಲ್ಲಿ ಗೆಲ್ಲೋರ್ಯಾರು?

Pinterest LinkedIn Tumblr


ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ನೇರ ಹಣಾಹಣಿ ನಡೆಯುವ ಕೆಲವೇ ಕೆಲವು ಪ್ರತಿಷ್ಠಿತ ಕಣಗಳ ಪೈಕಿ ಚಾಮರಾಜನಗರವೂ ಒಂದು. ರಾಜ್ಯದ ದಕ್ಷಿಣ ಗಡಿಯ ಕಟ್ಟ ಕಡೆಯ ಜಿಲ್ಲೆಯಾದ ಚಾಮರಾಜನಗರ ಭೌಗೋಳಿಕವಾಗಿ ಮಾತ್ರವಲ್ಲ ಅಭಿವೃದ್ಧಿ ದೃಷ್ಟಿಯಲ್ಲೂ ರಾಜ್ಯದ ತೀರಾ ಹಿಂದುಳಿದ ಜಿಲ್ಲೆ. ಬಿಜೆಪಿ ನಾಯಕ ವಿ. ಶ್ರೀನಿಪ್ರಸಾದ್ ಪ್ರಭಾವದಿಂದ ಕಳೆದ ಎರಡು ವರ್ಷದಿಂದ ಸುದ್ದಿಯಲ್ಲಿರುವ ಈ ಕ್ಷೇತ್ರ ಮತ್ತೆ ಸುದ್ದಿ ವಲಯದಲ್ಲಿ ಸದ್ದು ಮಾಡುತ್ತಿದೆ.

ಈ ಕ್ಷೇತ್ರದಿಂದ ಹಾಲಿ ಸಂಸದ ಕಾಂಗ್ರೆಸ್​ನ ಧ್ರುವನಾರಾಯಣ್ ಮೂರನೇ ಬಾರಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯ ವಿರುದ್ಧ ಬಂಡಾಯವೆದ್ದು ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿರುವ ಪ್ರಬಲ ದಲಿತ ನಾಯಕ ಹಾಗೂ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್​ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಲು ಮುಂದಾಗಿದ್ದಾರೆ.

ಇಬ್ಬರು ಪ್ರಬಲ ನಾಯಕರಿಂದಾಗಿ ಹೈವೋಲ್ಟೇಜ್ ಕಣವಾಗಿರುವ ಚಾಮರಾಜನಗರದಲ್ಲಿ ಇಬ್ಬರು ನಾಯಕರ ಕುರಿತು ಜನಾಭಿಪ್ರಾಯ ಏನಿದೆ? ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕೆಲಸಗಳೇನು? ಜನರ ಒಲವು ಯಾರ ಪರವಿದೆ? ಇಲ್ಲಿದೆ ಕಂಪ್ಲೀಟ್​ ಡೀಟೇಲ್.

2009 ಹಾಗೂ 2014ರ ಚುನಾವಣೆಯಲ್ಲಿ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಧೃವನಾರಾಯಣ್ ಗೆ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಶ್ರೀರಕ್ಷೆ.

ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದ್ದರು ಸಂಸದ ಧೃವನಾರಾಯಣ್ ತನ್ನ ಕಾರ್ಯವ್ಯಾಪ್ತಿಯಲ್ಲಿ ಶಕ್ತಿ ಮೀರಿ ಕ್ಷೇತ್ರಕ್ಕಾಗಿ ದುಡಿದಿದ್ದಾರೆ. ಕಳೆದ ಒಂದು ದಶಕದಲ್ಲಿ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬುಡಕಟ್ಟು ಜನರ ಮಕ್ಕಳಿಗಾಗಿ ಎರಡು ಏಕಲವ್ಯ ವಸತಿ ಶಾಲೆಯನ್ನು ತಂದಿದ್ದಾರೆ. ಸಾಮಾನ್ಯವಾಗಿ ಬುಡಕಟ್ಟು ಜನರಿರುವ ಕ್ಷೇತ್ರಗಳಿಗೆ ಕೇಂದ್ರ ಸರಕಾರ ಕೇವಲ ಒಂದು ಏಕಲವ್ಯ ವಸತಿ ಶಾಲೆಯನ್ನು ಮಾತ್ರ ಮಂಜೂರು ಮಾಡುತ್ತದೆ. ಆದರೆ ಧೃವನಾರಾಯಣ ತಮ್ಮ ಕ್ಷೇತ್ರಕ್ಕೆ ಎರಡು ಶಾಲೆಗಳನ್ನು ತಂದು ಬುಡಕಟ್ಟು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಶಿಕ್ಷಣ ಪಡೆಯಲು ನೆರವಾಗಿದ್ದಾರೆ.

ನಳಂದ ಬುದ್ಧ ವಿಶ್ವವಿದ್ಯಾಲಯ ಸ್ಥಾಪನೆಗೆ 10 ಕೋಟಿ ಹಣ ಹಾಗೂ 25 ಏಕರೆ ಭೂಮಿ ಕೊಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಚಾಮರಾಜನಗರ, ಗುಂಡ್ಲುಪೇಟೆ ತಾಲೂಕಿನ ಸುಮಾರು 198 ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ. ಚಾಮರಾಜನಗರದಿಂದ ತಿರುಪತಿಗೆ ಹೊಸ ರೈಲು ಮಾರ್ಗ ಹಾಗೂ ಕ್ಷೇತ್ರಕ್ಕೆ ಗೂಡ್ಸ್ ರೈಲು ತರುವಲ್ಲೂ ಅವರ ಪಾತ್ರ ಪ್ರ,ಮುಖವಾದದ್ದು.

ಲೋಕಸಭೆ ಕಲಾಪಗಳಿಗೆ ಹಾಜರಾಗುವ ಹಾಗೂ ಸಂಸದರ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾದ ಸಂಸದ ಧೃವನಾರಾಯಣ್ ಅವರಿಗೆ ಇದೇ ಕಾರಣಕ್ಕೆ ದೇಶದ 5ನೇ ಹಾಗೂ ರಾಜ್ಯದ ನಂ.1 ಉತ್ತದ ಸಂಸದೀಯಪಟು ಎಂದು ಬಿರುದು ನೀಡಿ ಗೌರವಿಸಲಾಗಿದೆ. ಅಲ್ಲದೆ ಕ್ಷೇತ್ರದ ಜನರ ನಡುವೆಯೂ ಅವರಿಗೆ ಒಳ್ಳೆಯ ಹೆಸರಿದೆ. ಆದರೂ ಕ್ಷೇತ್ರದಲ್ಲಿ ಅವರ ಗೆಲುವಿಗೆ ಪ್ರಮುಖ ವಿಘ್ನವೊಂದಿದೆ ಎಂಬುದೆ ವಿಚಿತ್ರ. ಆದರೂ ಸತ್ಯ.

ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಇದೇ ಕ್ಷೇತ್ರದಲ್ಲಿ 1980 ರಿಂದ 1991ರ ವರೆಗೆ ಕಾಂಗ್ರೆಸ್​ ಪಕ್ಷದಿಂದ ಸತತ 4 ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದವರು. ನಂತರ ವಿಧಾನಸಭೆಗೂ ಸ್ಪರ್ಧಿಸಿ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು. ಆದರೆ, ಸಚಿವ ಸ್ಥಾನದಿಂದ ಇವರನ್ನು ಕೆಳಗಿಳಿಸಿದ ಪರಿಣಾಮ ಸಿದ್ದರಾಮಯ್ಯ ಹಾಗೂ ಪಕ್ಷದ ವಿರುದ್ಧ ಮುನಿಸಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನೆಲೆಯನ್ನು ಶತಾಯಗತಾಯ ಬೇರು ಸಮೇತ ಕೀಳುವ ಸಂಕಲ್ಪ ಮಾಡಿರುವ ಶ್ರೀನಿವಾಸ ಪ್ರಸಾದ್ ಇದೀಗ ಉತ್ತಮ ಸಂಸದಪಟು ಎಂಬ ಗೌರವ ಪಡೆದಿರುವ ಧೃವನಾರಾಯಣ್ ವಿರುದ್ಧವೇ ಸ್ಪರ್ಧಿಸಿದ್ದಾರೆ. ಈ ಇಬ್ಬರೂ ನಾಯಕರಿಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದ್ದು, ಇದೇ ಕಾರಣಕ್ಕೆ ಚಾಮರಾಜನಗರ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಬದಲಾಗಿದೆ.

ಇಬ್ಬರಲ್ಲಿ ಗೆಲ್ಲೋ ಕುದುರೆ ಯಾರು?

ಹನೂರು, ಕೊಲ್ಲೆಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಟಿ.ನರಸೀಪುರ, ನಂಜನಗೂಡು, ಹೆಗ್ಗಡೆದೇವನಕೋಟೆ ಹಾಗೂ ವರುಣಾ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಚಾಮರಾಜನಗರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಇಲ್ಲಿನ 8 ಕ್ಷೇತ್ರಗಳ ಪೈಕಿ 4 ರಲ್ಲಿ ಕಾಂಗ್ರೆಸ್ ಹಾಗೂ 1 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇದಲ್ಲದೆ 2 ಕ್ಷೇತ್ರದಲ್ಲಿ ಬಿಜೆಪಿ ಹಾಗೂ 1 ಕ್ಷೇತ್ರದಲ್ಲಿ ಬಿಎಸ್​ಪಿ ಶಾಸಕ ಎನ್​. ಮಹೇಶ್ ಇದ್ದಾರೆ.

ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ಸಂಪೂರ್ಣ ಹಿಡಿತವಿದೆ. ಅಲ್ಲದೆ ಹಾಲಿ ಸಂಸದ ಧೃವ ನಾರಾಯಣ್ ಅವರಿಗೂ ಒಳ್ಳೆಯ ಹೆಸರಿದ್ದು ಬಹುತೇಕ ಎಲ್ಲಾ ಅಂಶಗಳು ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಜಾತಿ ಲೆಕ್ಕಾಚಾರ ಮಾತ್ರ ಇದಕ್ಕೆ ತದ್ವಿರುದ್ಧವಾಗಿದ್ದು ಹಾಲಿ ಸಂಸದರಿಗೆ ಕಂಟಕವಾಗುವ ಸೂಚನೆ ನೀಡಿದೆ.

ಚಾಮರಾಜ ನಗರದಲ್ಲಿ ಪರಿಶಿಷ್ಟ ಜಾತಿಯ ಸುಮಾರು 4 ಲಕ್ಷ ಮತದಾರರಿದ್ದಾರೆ. ಎಸ್​ಸಿ ಸಮುದಾಯದ ಮತ ಇಲ್ಲಿ ನಿರ್ಣಾಯಕ. ಇನ್ನೂಕಾಂಗ್ರೆಸ್ ಪಕ್ಷದ ಧೃವ ನಾರಾಯಣ್ ಹಾಗೂ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್ ಇಬ್ಬರೂ ದಲಿತ ಸಮುದಾಯಕ್ಕೆ ಸೇರಿದವರು. ಕಳೆದ ಚುನಾವಣೆಯಲ್ಲಿ ಧೃವ ನಾರಾಯಣ್ ದೊಡ್ಡ ಅಂತರದ ಗೆಲುವು ಸಾಧಿಸುವಲ್ಲಿ ಈ ಸಮುದಾಯದ ಮತ ದೊಡ್ಡ ಪಾತ್ರ ನಿರ್ವಹಿಸಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ.

ಧೃವ ನಾರಾಯಣ್ ಎಸ್​ಸಿ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯಾಗಿದ್ದರೂ ಸಹ ಇಲ್ಲಿನ ದಲಿತ ಸಮುದಾಯ ತಮ್ಮ ನಾಯಕ ಎಂದು ಒಪ್ಪಿಕೊಂಡಿರುವುದು ಬಿಜೆಪಿಯ ಶ್ರೀನಿವಾಸ ಪ್ರಸಾದ್ ಅವರನ್ನೇ. ಹೀಗಾಗಿ ಈ ಬಾರಿ ಬಹುತೇಕ ದಲಿತ ಮತಗಳು ಬಿಜೆಪಿ ಪರ ಚಲಾವಣೆಯಾಗಲಿವೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ದೆಸೆಯಿಂದ ಕ್ಷೇತ್ರದಲ್ಲಿರುವ ಸುಮಾರು 3.7 ಲಕ್ಷ ಲಿಂಗಾಯತ ಮತಗಳು ಬಿಜೆಪಿ ಪಾಲಾದರೆ ಶ್ರೀನಿವಾಸ ಪ್ರಸಾದ್ ಗೆಲುವು ಕಷ್ಟವಲ್ಲ.

ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರ್ಪಡೆಯಾಗುವವರೆಗೆ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಅಲ್ಲದೆ ಇಲ್ಲಿನ ನಿರ್ಣಾಯಕರಾದ ದಲಿತರು ಕಳೆದ 7 ದಶಕದಲ್ಲಿ ಎಂದಿಗೂ ಬಿಜೆಪಿ ಪರ ಮತ ಚಲಾಯಿಸಿದವರಲ್ಲ. ಆದರೆ, ಈ ಬಾರಿ ಕ್ಷೇತ್ರದಲ್ಲಿ ದಲಿತ ಮತಗಳು ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಹರಿದು ಹಂಚಿಹೋಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗುತ್ತಿದೆ. ಒಂದು ವೇಳೆ ಈ ವಿಶ್ಲೇಷಣೆ ಖಚಿತವಾದರೆ ಈ ಬಾರಿ ಕಾಂಗ್ರೆಸ್ ಸಂಕಷ್ಟ ಎದುರಿಸುವುದು ಸ್ಪಷ್ಟ.

ಆದರೆ, ರಾಜಕೀಯ ವಿಶ್ಲೇಷಣೆಗಳು ಸಮೀಕ್ಷೆಗಳು ಏನೇ ಹೇಳಿದರು. ದಿಗ್ಗಜ ನಾಯಕರು ಮುಖಾಮುಖಿಯಾಗುತ್ತಿರುವ ಚಾಮರಾಜನಗರ ಕ್ಷೇತ್ರ ಕೊನೆವರೆಗೂ ಗುಟ್ಟು ಬಿಟ್ಟುಕೊಡದ ಜಿಲ್ಲೆಯಾಗೆ ಉಳಿಯಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.