ರಾಷ್ಟ್ರೀಯ

ನಕ್ಸಲ್​ಪೀಡಿತ ಜನರ ಸೇವೆಯೇ ನನ್ನ ಗುರಿ’; ಯುಪಿಎಸ್​ಸಿ 12ನೇ ರ‍್ಯಾಂಕ್​ ಸಾಧಕಿಯ ಮನದಾಳ

Pinterest LinkedIn Tumblr


ಛತ್ತೀಸ್​​ಗಢ: ಛತ್ತೀಸ್​ಗಢದ ದಾಂತೇವಾಡ ಜಿಲ್ಲೆ ಇಡೀ ದೇಶದಲ್ಲೇ ಹೆಚ್ಚು ನಕ್ಸಲ್​ ಪೀಡಿತ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿದೆ. ಇದೇ ಜಿಲ್ಲೆಯಲ್ಲಿನ ಯುವತಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ 12ನೇ ರ‍್ಯಾಂಕ್​ ಪಡೆದು ಜನ ಸೇವೆಗೆ ಮುಂದಾಗಿದ್ದಾರೆ. ನಕ್ಸಲ್​ ಪೀಡಿತ ಪ್ರದೇಶದಲ್ಲಿನ ಅಮಾಯಕ ಜನರನ್ನು ರಕ್ಷಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ನಮ್ರತಾ ಜೈನ್​​ ದಾಂತೇವಾಡ ಜಿಲ್ಲೆಯ ಗೀದಂ ನಗರದ ನಿವಾಸಿ. 2016 ರಲ್ಲಿ ನಡೆದ ಯುಪಿಎಸ್​​ ಸಿ ಪರೀಕ್ಷೆಯಲ್ಲಿ 99 ನೇ ರ‍್ಯಾಂಕ್​ ಪಡೆದು, ಹೈದರಾಬಾದ್​ನ ವಲ್ಲಭಭಾಯ್​ ಪಟೇಲ್​ ನ್ಯಾಷನಲ್​ ಪೊಲೀಸ್​​ ಅಕಾಡೆಮಿಯಲ್ಲಿ ಐಪಿಎಸ್​ ತರಬೇತಿ ಪಡೆಯುತ್ತಿದ್ದಾರೆ.

‘ಜಿಲ್ಲಾಧಿಕಾರಿಯಾಗುವುದು ನನ್ನ ಜೀವನದ ಗುರಿಯಾಗಿತ್ತು. ನಾನು 8 ನೇ ತರಗತಿಯಲ್ಲಿ ಓದುತ್ತಿದ್ಧಾಗ, ಒಬ್ಬ ಮಹಿಳಾ ಅಧಿಕಾರಿ ನಮ್ಮ ಶಾಲೆಗೆ ಬಂದಿದ್ದರು. ಅವರು ಜಿಲ್ಲಾಧಿಕಾರಿ ಎಂಬುದು ನನಗೆ ತಿಳಿಯಿತು. ಅವರ ವ್ಯಕ್ತಿತ್ವದಿಂದ ನಾನು ಸ್ವಲ್ಪ ಪ್ರಭಾವಿತಳಾಗಿದ್ದೆ. ಅಲ್ಲಿಂದ ನಾನು ಜಿಲ್ಲಾಧಿಕಾರಿಯಾಗಬೇಕೆಂದು ನಿರ್ಧರಿಸಿದೆ’ ಎಂದು ನಮ್ರತಾ ಪಿಟಿಐಗೆ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ನಮ್ರತಾ ವಾಸಿಸುತ್ತಿದ್ದ ನಗರದಲ್ಲಿ ನಕ್ಸಲರು ಪೊಲೀಸ್​​ ಠಾಣೆಯ ಮೇಲೆ ದಾಳಿ ನಡೆಸಿದ್ದರು. ಈ ಘಟನೆ ನಮ್ರತಾ ಅವರಿಗೆ ನಾಗರೀಕ ಸೇವೆಗೆ ಸೇರುವಂತೆ ಪ್ರೇರೇಪಿಸಿತು. ಅಮಾಯಕ ಮತ್ತು ಬಡ ಜನರನ್ನು ರಕ್ಷಿಸಿ ನಕ್ಸಲ್​​ ಪೀಡಿತ ಪ್ರದೇಶವನ್ನು ಅಭಿವೃದ್ಧಿ ಮಾಡುವುದು ನಮ್ರತಾ ಅವರ ಧ್ಯೇಯವಾಯಿತು.

‘ನಾನು ಹುಟ್ಟಿ ಬಂದ ಪ್ರದೇಶ ಹೆಚ್ಚು ನಕ್ಸಲ್​ ಪೀಡಿತವಾಗಿದೆ. ಅಲ್ಲಿನ ಜನರು ಶಿಕ್ಷಣ ಮೊದಲಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ನಾನು ನನ್ನ ರಾಜ್ಯದ ಜನರ ಸೇವೆ ಮಾಡಲು ಬಯಸಿದ್ದೇನೆ’ ಎಂದು ನಮ್ರತಾ ಹೇಳಿದ್ದಾರೆ.

ದಾಂತೇವಾಡದಲ್ಲಿ ನಕ್ಸಲಿಸಂನ್ನು ಪತ್ತೆ ಹಚ್ಚಿದರೆ ಮಾತ್ರ ಜಿಲ್ಲೆಯನ್ನು ಸಂಪೂರ್ಣ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ನಮ್ರತಾ. ಇವರ ತಂದೆ ಒಬ್ಬ ಸ್ಥಳೀಯ ಉದ್ಯಮಿ. ತಾಯಿ ಗೃಹಿಣಿ. ಆಕೆಯ ತಮ್ಮ ಚಾರ್ಟೆಡ್​ ಅಕೌಂಟೆಂಟ್​ ಆಗುವ ಆಸೆ ಹೊಂದಿದ್ದಾನೆ. ನಮ್ರತಾ 10 ತರಗತಿಯವರೆಗೆ ದಾಂತೇವಾಡ ಜಿಲ್ಲೆಯಲ್ಲೇ ಓದಿದರು. ಬಳಿಕ ಛತ್ತೀಸ್​ಗಡದ ಭಿಲೈನಲ್ಲಿ ಇಂಜಿನಿಯರಿಂಗ್​​ ಮುಗಿಸಿದರು.

2018 ರ ಯುಪಿಎಸ್​​ಸಿ ಪರೀಕ್ಷೆಯ ಫಲಿತಾಂಶ ಏಪ್ರಿಲ್​ 5 ರಂದು ಘೋಷಣೆಯಾಗಿತ್ತು. ಒಟ್ಟು 759 ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 2018 ರ ಯುಪಿಎಸ್​​ಸಿ ಪರೀಕ್ಷೆಯಲ್ಲಿ ಕನಿಷ್ಕ್​​ ಕಟಾರಿಯಾ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಐಐಟಿ ಬಾಂಬೆಯಲ್ಲಿ ಬಿ.ಟೆಕ್​ ಮಾಡಿದ್ದಾರೆ.

ವರ್ಷಕ್ಕೊಮ್ಮೆ 3 ಹಂತಗಳಲ್ಲಿ ನಾಗರೀಕ ಸೇವಾ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ. ಪ್ರಿಲಿಮಿನರಿ, ಮುಖ್ಯ ಪರೀಕ್ಷೆ(ಮೇನ್ಸ್​​), ಇಂಟರ್​​ವ್ಯೂ- ಈ 3 ಹಂತಗಳಲ್ಲಿ ಪರೀಕ್ಷೆ ನಡೆಯುತ್ತದೆ. ಭಾರತೀಯ ನಾಗರೀಕ ಸೇವೆಗಳಾದ ಐಎಎಸ್​, ಐಪಿಎಸ್​​ ಮತ್ತು ಐಎಫ್​ಎಸ್, ಐಆರ್​ಎಸ್​​ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Comments are closed.