ಕರ್ನಾಟಕ

ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ ರಾಹುಲ್ ದ್ರಾವಿಡ್’ಗೆ ಈ ಬಾರಿ ಮತದಾನದ ಹಕ್ಕಿಲ್ಲ !

Pinterest LinkedIn Tumblr

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಾಟಕ ಚುನಾವಣಾ ಆಯೋಗದ ರಾಯಭಾರಿಯಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ ರಾಹುಲ್ ದ್ರಾವಿಡ್ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಇದು ಇತ್ತೀಚಿನ ದಿನಗಳಲ್ಲೇ ಅತಿದೊಡ್ಡ ವ್ಯಂಗ್ಯವಾಗಿದೆ.

ಬೆಂಗಳೂರಿನಲ್ಲಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ದ್ರಾವಿಡ್‌ ಈ ಬಾರಿ ಮತ ಹಾಕಲು ಸಾಧ್ಯವಿಲ್ಲ. ಯಾಕೆಂದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಆಶ್ಚರ್ಯವಾದರೂ ಇದು ಸತ್ಯ. ಹೀಗಾಗಿ, ಮಾಜಿ ಕ್ರಿಕೆಟಿಗ ದ್ರಾವಿಡ್ ಜತೆಗೆ ಅವರ ಕುಟುಂಬ ಸಹ ಮತದಾನದ ಹಕ್ಕಿನಿಂದ ವಂಚಿತವಾಗಿದೆ.

ಇಂದಿರಾನಗರ 12ನೇ ಮುಖ್ಯರಸ್ತೆಯಲ್ಲಿ ವಾಸ ಮಾಡುತ್ತಿದ್ದ ದ್ರಾವಿಡ್ ಇದುವರೆಗೆ ಎಲ್ಲ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುತ್ತಿದ್ದರು. ಈ ಹಿನ್ನೆಲೆ ಅವರನ್ನು ಚುನಾವಣಾ ಆಯೋಗ ರಾಯಭಾರಿಯನ್ನಾಗಿ ಮಾಡಿಕೊಂಡಿತ್ತು. ಆದರೆ, ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ತೆಗೆದುಹಾಕಲಾಗಿದ್ದು, ಮರು ಸೇರ್ಪಡೆಗೊಳಿಸಲು ( ಫಾರ್ಮ್ 6) ಅವರು ವಿಫಲರಾಗಿದ್ದಾರೆ. ಇದಕ್ಕೆ ಸ್ವತ: ದ್ರಾವಿಡ್ ಕಾರಣ ಎಂದು ವರದಿಗಳು ತಿಳಿಸಿವೆ. ಇನ್ನು, ”ಈ ಬಾರಿ ದ್ರಾವಿಡ್ ಮತ ಹಾಕಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಕೇಳಿ ನಮಗೆ ಶಾಕ್‌ ಆಗಿದೆ” ಎಂದು ಚುನಾವಣಾಧಿಕಾರಿಗಳೇ ಹೇಳಿಕೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 31ರಂದು ಮತದಾರರ ಪಟ್ಟಿಯಿಂದ ದ್ರಾವಿಡ್ ಹಾಗೂ ಪತ್ನಿ ವಿಜೇತಾ ಹೆಸರು ತೆಗೆಯುವಂತೆ ರಾಹುಲ್ ಸಹೋದರ ವಿಜಯ್ ಫಾರ್ಮ್ 7 ನೀಡಿದ್ದರು. ಇದರ ಪ್ರಕಾರ ದ್ರಾವಿಡ್ ಹಾಗೂ ವಿಜೇತಾ ಇಂದಿರಾನಗರದಿಂದ ಆರ್‌ಎಂವಿ ಎಕ್ಸ್‌ಟೆನ್ಷನ್‌ನಲ್ಲಿರುವ ಅಶ್ವಥ್‌ನಗರಕ್ಕೆ ಶಿಫ್ಟ್‌ ಆಗಿದ್ದಾರೆ ಎಂದು ತಿಳಿಸಿತ್ತು.

ಬಳಿಕ ಚುನಾವಣಾಧಿಕಾರಿಗಳು ಸಹ ಅದನ್ನು ಸ್ಪಷ್ಟಪಡಿಸಿ ದ್ರಾವಿಡ್ ಹಾಗೂ ವಿಜೇತಾ ಹೆಸರನ್ನು ತೆಗೆದುಹಾಕಿದ್ದರು. ಆದರೆ, ”ಹೆಸರು ತೆಗೆದುಹಾಕಿದ ಬಳಿಕ ಅವರು ಫಾರ್ಮ್ 6 ಹೊಸ ಅರ್ಜಿ ನೀಡಲಿಲ್ಲ. ಇದನ್ನು ನೀಡಿದ್ದರೆ ಅವರ ಹೆಸರು ಮರು ಸೇರ್ಪಡೆಗೊಳ್ಳುತ್ತಿತ್ತು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

Comments are closed.