ಕರ್ನಾಟಕ

ಗುರು-ಶಿಷ್ಯರ ಪ್ರಚಾರಕ್ಕೆ ರೆಬೆಲ್‌ ನಾಯಕರ ಗೈರು

Pinterest LinkedIn Tumblr

ಮಂಡ್ಯ: ಲೋಕಸಭೆ ಚುನಾವಣೆಯ ಮಂಡ್ಯ ಕ್ಷೇತ್ರದ ರಣರಂಗದಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಪ್ರಚಾರ ರ್ಯಾಲಿಗೆ ಕಾಂಗ್ರೆಸ್‌ ಪಕ್ಷದ ರೆಬೆಲ್‌ ನಾಯಕರು ಗೈರು ಹಾಜ ರಾಗುವ ಮೂಲಕ ಜೆಡಿಎಸ್‌ ಅಭ್ಯರ್ಥಿಗೆ ನಮ್ಮ ಬೆಂಬಲ ವಿಲ್ಲ ಎನ್ನುವ ಸಂದೇಶ ರವಾನಿಸಿದರು.

ರೆಬೆಲ್‌ ನಾಯಕರ ಕ್ಷೇತ್ರಗಳನ್ನೇ ಟಾರ್ಗೆಟ್‌ ಮಾಡಿಕೊಂಡ ಜೆಡಿಎಸ್‌ ನಾಯಕರು, ಮಾಜಿ ಸಚಿವರಾದ ನರೇಂದ್ರ ಸ್ವಾಮಿ ಪ್ರಭಾವವಿರುವ ಮಳವಳ್ಳಿ ಮತ್ತು ಚಲುವರಾಯಸ್ವಾಮಿ ಪ್ರಾಬಲ್ಯದ ನಾಗಮಂಗಲ ವಿಧಾನ ಸಭಾ ಕ್ಷೇತ್ರಗಳನ್ನೇ ಪ್ರಮುಖವಾಗಿ ಪ್ರಚಾರ ಸಭೆಗೆ ಆಯ್ಕೆ ಮಾಡಿಕೊಂಡಿದ್ದರು. ನರೇಂದ್ರಸ್ವಾಮಿ, ಚಲುವ ರಾಯ ಸ್ವಾಮಿ ಸಹಿತ ಕಾಂಗ್ರೆಸ್‌ನ ಮಾಜಿ ಶಾಸಕರು ಯಾರೂ ಸಭೆಗೆ ಆಗಮಿಸಲಿಲ್ಲ.

ಸಿದ್ದರಾಮಯ್ಯ ಅವರೂ ಪ್ರಚಾರ ಭಾಷಣದಲ್ಲೆಲ್ಲೂ ಸಭೆಗೆ ಬಾರದ, ಮೈತ್ರಿ ಧರ್ಮ ಪಾಲಿಸದ ಅತೃಪ್ತ ಶಾಸಕ ರನ್ನು ಟೀಕಿಸುವ ಗೋಜಿಗೆ ಹೋಗಲಿಲ್ಲ. ಪಕ್ಷೇತರ ಅಭ್ಯರ್ಥಿಯನ್ನು ಗುರಿಯಾಗಿಟ್ಟುಕೊಂಡು ಮಾತನಾಡುವುದಕ್ಕೂ ಮುಂದಾಗಲಿಲ್ಲ. ಬಿಜೆಪಿಯನ್ನು ಟೀಕಿಸುವುದಕ್ಕಷ್ಟೇ ತಮ್ಮ ಭಾಷಣವನ್ನು ಸೀಮಿತಗೊಳಿಸಿದರು.

ಸುಳ್ಳು ಸುದ್ದಿ: ಸಿದ್ದು
ಪಕ್ಷೇತರ ಅಭ್ಯರ್ಥಿಯನ್ನು ಸಿದ್ದರಾಮಯ್ಯ ಬೆಂಬಲಿಸುತ್ತಾರೆಂದು ಸುಳ್ಳು ಸುದ್ದಿಗಳು ಹರಡುತ್ತಿವೆ. ನಾನೇ ಹೇಳುತ್ತಿದ್ದೇನೆ ನಿಖೀಲ್‌ಗೆ ಮತ ನೀಡಿ ಗೆಲ್ಲಿಸ ಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ಜತೆಗೆ ಸುಮಲತಾ ಅವರ ಹೆಸರೆತ್ತದೆ, ಮೈತ್ರಿ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡಿದ್ದು, ಅವರಿಗೆ ಮತ ಹಾಕಬೇಡಿ ಎಂದೂ ಮತದಾರರಿಗೆ ಹೇಳಿದರು.

ಟೀಕೆಗಳಿಂದ ನಷ್ಟ
ಶ್ರೀರಂಗಪಟ್ಟಣ ಕ್ಷೇತ್ರದ ಪ್ರಚಾರ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರನ್ನು ಟೀಕಿಸಿದ್ದರು. ಈ ಟೀಕೆ ಬಂಡಿಸಿದ್ದೇಗೌಡ ಬೆಂಬಲಿಗರನ್ನು ರೊಚ್ಚಿ ಗೇಳುವಂತೆ ಮಾಡಿತ್ತು. ಅವರೆಲ್ಲರೂ ಜೆಡಿಎಸ್‌ ಪಕ್ಷವನ್ನು ಬೆಂಬಲಿ ಸುವುದಿಲ್ಲವೆಂದು ಬಹಿರಂಗವಾಗಿಯೇ ಸಿಡಿದೆದ್ದರು. ನಾಗಮಂಗಲದಲ್ಲಿ ಪ್ರಚಾರ ನಡೆಸಿದಾಗಲೆಲ್ಲ ಮಾಜಿ ಪ್ರಧಾನಿ ದೇವೇಗೌಡ ಅವರು ಮಾಜಿ ಶಾಸಕ ಚಲುವರಾಯಸ್ವಾಮಿಯನ್ನು ಗುರಿಯಾಗಿಸಿ ಕೊಂಡು ಟೀಕಾಪ್ರಹಾರ ನಡೆಸುತ್ತಿದ್ದರು. ಆದರೆ ಶುಕ್ರವಾರ ನಡೆದ ಸಭೆ ಯಲ್ಲಿ ಮಾಜಿ ಶಾಸಕರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ.

ಸಂಸದ ಶಿವರಾಮೇಗೌಡರು ಮಾಜಿ ಶಾಸಕ ಚಲುವರಾಯಸ್ವಾಮಿ ಎಲ್ಲಿದ್ದರೂ ನಮ್ಮವರೇ ಎಂದು ಹೇಳಿದರೆ, ಡೆಡ್‌ಹಾರ್ಸ್‌ ಎಂದು ವಾಗ್ಧಾಳಿ ನಡೆಸಿದ್ದ ಸಚಿವ ಪುಟ್ಟರಾಜು ಅವರೂ ಕೂಡ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದರಲ್ಲದೆ, ಮಾಜಿ ಶಾಸಕರ ಬಗ್ಗೆ ಮೃದು ಧೋರಣೆ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಆಡಳಿತಾತ್ಮಕ ಲೋಪಕ್ಕೆ ಮಂಡ್ಯ ಡಿಸಿ ವರ್ಗ
ಬೆಂಗಳೂರು: “ಆಡಳಿತಾತ್ಮಕ ಲೋಪದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ವರ್ಗಾವಣೆ ಮಾಡಲಾಗಿದೆ ಹೊರತು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಅಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸ್ಪಷ್ಟಪಡಿಸಿದರು.

ಶುಕ್ರವಾರ ಉದಯವಾಣಿ ಕಚೇರಿಗೆ ಭೇಟಿ ನೀಡಿ ಸಂವಾದದಲ್ಲಿ ಭಾಗವಹಿಸಿದ ಅವರು, “ನಾಮಪತ್ರವನ್ನು ಒಮ್ಮೆ ಚುನಾವಣಾಧಿಕಾರಿ ಅನುಮೋದನೆಗೊಳಿಸಿದರೆ ಅದು ಅಂತಿಮ. ಅನಂತರ ಅದನ್ನು ನ್ಯಾಯಾ ಲಯದಲ್ಲಿ ಮಾತ್ರ ಪ್ರಶ್ನೆ ಮಾಡಲು ಅವಕಾಶ ಇರುತ್ತದೆ. ಆದರೆ ಇದರ ಹೊರತಾಗಿಯೂ ಆಡಳಿತಾತ್ಮಕ ಲೋಪಗಳೂ ಆಗಿರುತ್ತವೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವರ್ಗಾವಣೆಯಂತಹ ಕ್ರಮ ಕೈಗೊಳ್ಳಲಾಗುತ್ತದೆ. ಹಾಗಾಗಿ ಒಂದಕ್ಕೊಂದು ತಳಕು ಹಾಕಲು ಬರುವುದಿಲ್ಲ’ ಎಂದರು.

ಒಂದು ಪ್ರಕ್ರಿಯೆಯಲ್ಲಿ ಎಲ್ಲವನ್ನೂ ಸರಿದೂಗಿಸಬೇಕಾಗುತ್ತದೆ. ಅದರಲ್ಲಿ ಈ ವರ್ಗಾವಣೆ ಕೂಡ ಒಂದು ಎಂದು ತಿಳಿಸಿದರು.

Comments are closed.