ಕರ್ನಾಟಕ

ಸುಮಲತಾಗೆ ಹೆಚ್ಚಿನ ಭದ್ರತೆ ನೀಡಲು ಚುನಾವಣಾ ಆಯೋಗದಿಂದ ಪತ್ರ

Pinterest LinkedIn Tumblr


ಬೆಂಗಳೂರು: ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಅವರಿಗೆ ಹೆಚ್ಚಿನ ಭದ್ರತೆ ಕಲ್ಪಿಸುವಂತೆ ರಾಜ್ಯ ಚುನಾವಣಾ ಆಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಚುನಾವಣೆಯ ಪ್ರಚಾರ ವೇಳೆಯಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ ನಾವು ಜವಾಬ್ದಾರರಲ್ಲ ಎಂಬ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, ಸಿಎಂ ಅವರ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಈ ಕುರಿತು ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.

ಇದರ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಹೆಚ್ಚಿನ ಭದ್ರತೆ ನೀಡಿ, ಅವರ ಸುರಕ್ಷತೆಗೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಆಯೋಗದ ಕಚೇರಿಯಿಂದ ಪತ್ರ ಬರೆಯಲಾಗಿದೆ. ಅಲ್ಲದೇ 24 ಗಂಟೆಗಳ ಅವಧಿಯಲ್ಲಿ ಈ ಬಗ್ಗೆ ಎಲ್ಲಾ ಸೂಕ್ತ ಕ್ರಮ ಕೈಗೊಂಡು ನಮಗೆ ತಿಳಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇಂದು ಸುಮಲತಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಕುಮಾರಸ್ವಾಮಿ ಅವರು, ಸಿಆರ್ ಪಿಎಫ್ ಒಂದೇ ಅಲ್ಲ. ಬೇಕಿದ್ದರೆ ಅಮೆರಿಕ ಅಧ್ಯಕ್ಷರಿಗೆ ಹೇಳಿ ಅಲ್ಲಿಯ ಕಮಾಂಡೋ ಗಳನ್ನು ಕೂಡ ಮೋದಿ ಅವರು ಏರ್ಪಾಡು ಮಾಡಿ ಕಳುಹಿಸಿ ಕೊಡುವುದು ಸೂಕ್ತ ಎಂದು ಸಿಎಂ ಎಚ್‍ಡಿಕೆ ಲೇವಡಿ ಮಾಡಿದ್ದರು. ಅಲ್ಲದೇ ಸಚಿವ ಡಿಸಿ ತಮ್ಮಣ್ಣ ಪ್ರತಿಕ್ರಿಯೆ ನೀಡಿ ನಮ್ಮ ಪಕ್ಷದಲ್ಲಿ ಭಯೋತ್ಪಾದಕರು ಇಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ. ಮಂಡ್ಯದಲ್ಲಿ ವಾತಾವರಣ ಉತ್ತಮವಾಗಿದೆ ಎಂದಿದ್ದರು.

Comments are closed.