ಕರ್ನಾಟಕ

ಬೆಂಗಳೂರು ಉತ್ತರದಲ್ಲಿ ಸದಾನಂದರಿಗೆ ಟಕ್ಕರ್ ಕೊಡ್ತಾರ ಕೃಷ್ಣಭೈರೇಗೌಡ?

Pinterest LinkedIn Tumblr


ಹೊರ ಜಗತ್ತಿಗಷ್ಟೇ ಬೆಂಗಳೂರು ಐಟಿ ಸಿಟಿ, ಕ್ಲೀನ್-ಗ್ರೀನ್ ಸಿಟಿ. ಆದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದರೆ ಸಾಕು ಇದು ರಾಜಧಾನಿ ಬೆಂಗಳೂರಿನ ಲಕ್ಷಣವೇ ಎಂದು ನೀವೆ ಹುಬ್ಬೇರಿಸುತ್ತೀರಿ. ಏಕೆಂದರೆ ಅಷ್ಟೊಂದು ಸಮಸ್ಯೆಗಳನ್ನು ಹೊದ್ದು ಮಲಗಿದೆ ಈ ಕ್ಷೇತ್ರ. ಇನ್ನೂ ಕ್ಷೇತ್ರದ ಸಮಸ್ಯೆಗಳನ್ನು ಲೆಕ್ಕ ಮಾಡಿದರೆ ಅದೊಂದು ದೊಡ್ಡ ಪಟ್ಟಿಯೇ ಇದೆ.

ಬ್ಯಾಟರಾಯನಪುರ, ಯಶವಂತಪುರ, ಕೆ.ಆರ್.ಪುರಂ, ದಾಸರಹಳ್ಳಿ. ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ಹೆಬ್ಬಾಳ ಹಾಗೂ ಪುಲಿಕೇಶಿ ನಗರ ಸೇರಿದಂತೆ ಅರ್ಧ ಗ್ರಾಮೀಣ ಹಾಗೂ ಇನ್ನರ್ಧ ನಗರ ಭಾಗದ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಕ್ಷೇತ್ರದ ಬಹುದೊಡ್ಡ ಸಮಸ್ಯೆ ಎಂದರೆ ಕುಡಿಯುವ ನೀರಿನ ಸಮಸ್ಯೆ.

ನಗರ ಭಾಗದ ಕೆಲ ವಾರ್ಡ್​ಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿದೆಯಾದರೂ ನಗರದಿಂದ ಹೊರಗಿರುವ ಜನರಿಗೆ ಈಗಲೂ ಕುಡಿಯಲು ನೀರಿಲ್ಲ. ಬೆಂಗಳೂರಿಗೆ ಕಾವೇರಿಯಿಂದ ನೀರು ತಂದರು, ಇಲ್ಲಿನ ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ, ಹೆಬ್ಬಾಳ, ಪುಲಿಕೇಶಿ ನಗರಗಳಿಗೆ ಕಾವೇರಿ ಭಾಗ್ಯ ಈವರೆಗೆ ಲಭ್ಯವಾಗಿಲ್ಲ. ಈ ಭಾಗಕ್ಕೆ ಈಗಲೂ ಶೇ.60 ರಷ್ಟು ಟ್ಯಾಂಕ್ ನೀರೆ ಗತಿ ಎಂದರೆ ಪರಿಸ್ಥಿತಿಯನ್ನು ನೀವೆ ಊಹಿಸಿಕೊಳ್ಳಿ. ಇನ್ನೂ ರಸ್ತೆ ಹಾಗೂ ನಗರ ನೈರ್ಮಲ್ಯದ ಕುರಿತು ಮಾತನಾಡದೆ ಇರುವುದೇ ಲೇಸು. ಇಂತಿಪ್ಪ ಕ್ಷೇತ್ರದ ಹಾಲಿ ಸಂಸದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ.

ಜಾತಿ ಲೆಕ್ಕದೊಂದಿಗೆ ವಲಸೆ ಬಂದಿದ್ದ ಗೌಡರು : ಹೆಚ್ಚು ಗ್ರಾಮೀಣ ಭಾಗಗಳಿಂದಲೇ ಕೂಡಿರುವ ಬೆಂಗಳೂರು ಉತ್ತರದಲ್ಲಿರುವ 27.3 ಲಕ್ಷ ಮತದಾರರ ಪೈಕಿ 6 ಲಕ್ಷ ಮತಗಳನ್ನು ಹೊಂದಿರುವ ಒಕ್ಕಲಿಗ ಸಮುದಾಯವೇ ನಿರ್ಣಾಯಕ. 1951 ರಿಂದ 2004ರ ವರೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿತ್ತು. ಮಾಜಿ ಕೇಂದ್ರ ಸಚಿವ ದಿವಂಗತ ಜಾಫರ್ ಶರೀಫ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದ ಇಲ್ಲಿನ ಒಕ್ಕಲಿಗ ಸಮುದಾಯ ಶರೀಫರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿತ್ತು. ಪರಿಣಾಮ ಅವರು 7 ಬಾರಿ ಈ ಕ್ಷೇತ್ರವನ್ನು ಸಂಸತ್​ನಲ್ಲಿ ಪ್ರತಿನಿಧಿಸಿ ದಾಖಲೆ ಬರೆದರು.

ಆದರೆ, 2004ರ ಚುನಾವಣೆಯಲ್ಲಿ ಆಶ್ಚರ್ಯ ಎಂಬಂತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್​.ಟಿ. ಸಾಂಗ್ಲಿಯಾನ ಗೆಲುವಿನ ನಗೆ ಬೀರಿದ್ದರು. ಅದಾದ ನಂತರ 2009ರಲ್ಲಿ ಈ ಭಾಗದ ಬಹುಸಂಖ್ಯಾತ ಒಕ್ಕಲಿಗ ಹಾಗೂ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಒಕ್ಕಲಿಗ ಸಮುದಾಯದವರೇ ಆದ ಚಿಕ್ಕಮಗಳೂರು ಭಾಗದ ಹಿರಿಯ ಹಾಗೂ ಪ್ರಭಾವಿ ನಾಯಕ ಡಿ. ಬಿ. ಚಂದ್ರೇಗೌಡ ಅವರನ್ನು ಕಣಕ್ಕಿಳಿಸಿತ್ತು. (ಇವರು 1978 ರಲ್ಲಿ ಇಂದಿರಾಗಾಂಧಿಗಾಗಿ ಚಿಕ್ಕಮಗಳೂರು ಕ್ಷೇತ್ರ ಬಿಟ್ಟುಕೊಟ್ಟವರು ನಂತರ ಬಿಜೆಪಿ ಸೇರಿದ್ದರು) ಆ ಮೂಲಕ ಬಿಜೆಪಿ ಮೊದಲ ಬಾರಿಗೆ ಈ ಭಾಗದಲ್ಲಿ ಜಾತಿ ರಾಜಕಾರಣ ಸಮೀಕರಣಕ್ಕೆ ಅಂಕಿತ ಹಾಕಿತ್ತು ಹಾಗೂ ಅದರಲ್ಲಿ ಯಶಸ್ವಿಯಾಗಿತ್ತು.

2014ರಲ್ಲಿ ಚಂದ್ರೇಗೌಡರು ವಯೋ ಸಹಜ ಖಾಯಿಲೆಗೆ ತುತ್ತಾದ ಪರಿಣಾಮ ಉಡುಪಿ ಮೂಲದ ಮತ್ತದೇ ಒಕ್ಕಲಿಗ ಸಮುದಾಯದ ಡಿ.ವಿ. ಸದಾನಂದಗೌಡ ಸ್ಪರ್ಧೆ ಮಾಡಿದ್ದರು. ಮೋದಿ ಅಲೆಯ ನಡುವೆ ಗೆಲುವು ಸಾಧಿಸಿದ್ದರು. ಆದರೆ, 2019ರ ಚುನಾವಣೆಯಲ್ಲಿ ಗೌಡರ ಗೆಲುವು ಅಷ್ಟು ಸುಲಭವಲ್ಲ ಎನ್ನುತ್ತಿದೆ ಮತಗಟ್ಟೆ ಸಮೀಕ್ಷೆಗಳು.

ಗೌಡರಿಗೆ ಅಭಿವೃದ್ಧಿ ಕಂಟಕ : ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಕ್ಷೇತ್ರದ ಮತದಾರರ ಎದುರು ಸಾಕಷ್ಟು ಭರವಸೆಗಳನ್ನು ನೀಡಿದ್ದರು. ಆದರೆ, ವಾಸ್ತವದಲ್ಲಿ “ಚುನಾವಣೆಯ ನಂತರ ನಾವು ಅವರನ್ನು ಮತ್ತೆ ಕ್ಷೇತ್ರದಲ್ಲಿ ನೋಡೆ ಇಲ್ಲ, ಇನ್ನೂ ಮಾಡಿದ ಕೆಲಸದ ಬಗ್ಗೆ ಕೇಳಬೇಡಿ,” ಎಂದು ಆರೋಪಿಸುತ್ತಿದ್ದಾರೆ ಸ್ಥಳೀಯ ಮತದಾರು.

ಈ ನಡುವೆ ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದಾಗ್ಯೂ ಗೌಡರು ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿಲ್ಲ. ಅಲ್ಲದೆ ಕೇಂದ್ರ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಕೆಲಸ ನಿರ್ವಹಿಸಿಯೂ ಕೇಂದ್ರದಿಂದ ಕ್ಷೇತ್ರಕ್ಕೆ ಯಾವುದೇ ಅನುದಾನ ಹಾಗೂ ಯೋಜನೆಗಳನ್ನು ತಂದಿಲ್ಲ ಎಂಬುದು ಅವರ ಮೇಲಿನ ದೊಡ್ಡ ಆರೋಪ. ಈ ಆರೋಪಗಳು ಚುನಾವಣಾ ಸಂದರ್ಭದಲ್ಲಿ ಅವರಿಗೆ ಕಂಟಕವಾಗಿ ಕಾಡುವ ಸಾಧ್ಯತೆ ಇದೆ.

ಮೈತ್ರಿ ಪಕ್ಷದಿಂದ ಕೃಷ್ಣಭೈರೇಗೌಡ ಅಖಾಡಕ್ಕೆ : ದಿವಂಗತ ಜಾಫರ್ ಶರೀಫ್ ನಂತರ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ಅಂತಹ ಓರ್ವ ನಾಯಕನ್ನು ರೂಪಿಸಲೇ ಇಲ್ಲ. ಹೀಗಾಗಿ ಉತ್ತರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೈ ಪಕ್ಷಕ್ಕೆ ನಾಯಕ ನಿರ್ವಾತ ಸ್ಥಿತಿ ಇದೆ. ಜೆಡಿಎಸ್ ಸಹ ಇದಕ್ಕೆ ಹೊರತಲ್ಲ.

ಆದರೆ, ಒಕ್ಕಲಿಗ ಸಮುದಾಯದ ಮತಗಳೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಕೈ ಪಕ್ಷವೂ ಜಾತಿ ಸಮೀಕರಣಕ್ಕೆ ಮುಂದಾಗಲಿದೆ ಅಥವಾ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಸದಾನಂದ ಗೌಡರಿಗೆ ಟಾಂಗ್​ ನೀಡಲಿದ್ದಾರೆ ಎಂದೇ ರಾಜಕೀಯ ವಠಾರದಲ್ಲಿ ಮಾತುಗಳು ಓಡಾಡುತ್ತಿದ್ದವು. ದೇವೇಗೌಡ ಕಣಕ್ಕಿಳಿಯಲಿಲ್ಲ. ಆದರೆ, ಊಹೆಯಂತೆ ಕೊನೆಗೂ ಕಾಂಗ್ರೆಸ್ ಮೊದಲ ಬಾರಿಗೆ ಕ್ಷೇತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಯಾಗಿ ಕೃಷ್ಣ ಭೈರೇಗೌಡರ ಹೆಸರನ್ನೆ ಫೈನಲ್ ಮಾಡಿದೆ.

2002ರಲ್ಲಿ ಜನತಾದಳದ ಮೂಲಕ ರಾಜಕೀಯ ಪ್ರವೇಶಿಸಿ ನಂತರ ಕಾಂಗ್ರೆಸ್​ನಿಂದ 2003, 2007ರಲ್ಲಿ ಕ್ರಮವಾಗಿ ವೇಮಗಲ್ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕೃಷ್ಣಭೈರೇಗೌಡ 2008ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಕ್ಕೆ ವಲಸೆ ಬಂದು ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಪ್ರಸ್ತುತ ರಾಜ್ಯ ಸರಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಪ್ರಬಲ ಒಕ್ಕಲಿಗ ಅಭ್ಯರ್ಥಿ ಇಲ್ಲದ ಕಾರಣ ಪಕ್ಷ ಹಾಲಿ ಸಚಿವ ಕೃಷ್ಣಭೈರೇಗೌಡರನ್ನೇ ಚುನಾವಣೆಗೆ ನಿಲ್ಲಿಸಿದೆ.

ಗೆಲುವಿನ ಲೆಕ್ಕಾಚಾರ : ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, 2 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅಶ್ವತ್ಥ ನಾರಾಯಣ ಬಿಜೆಪಿ ಪ್ರತಿನಿಧಿಸುತ್ತಿರುವ ಏಕೈಕ ಕ್ಷೇತ್ರ.

ಮಲ್ಲೇಶ್ವರಂ ಬಿಜೆಪಿ ಪಾಲಿನ ಭದ್ರಕೋಟೆ ಅಲ್ಲದೆ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ. ಹೀಗಾಗಿ ಈ ಬಾರಿಯೂ ಈ ಕ್ಷೇತ್ರದಿಂದ ಬಿಜೆಪಿಗೆ ಅಧಿಕ ಮತಗಳು ಹರಿದುಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಕಳೆದ ಬಾರಿ ಸದಾನಂದ ಗೌಡರಿಗೆ ಹೆಚ್ಚು ಲೀಡ್​ ಕೊಟ್ಟ ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಕೆ.ಆರ್. ಪುರಂ, ಬ್ಯಾಟರಾಯನಪುರ ಹಾಗೂ ಹೆಬ್ಬಾಳದಿಂದ ಈ ಬಾರಿಯೂ ಅಂತಹದ್ದೇ ಫಲಿತಾಂಶ ನಿರೀಕ್ಷೆ ಮಾಡುವುದು ಅಸಾಧ್ಯ.

ಹೆಚ್ಚು ಒಕ್ಕಲಿಗರೇ ಇರುವ ಈ ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೆಲಸ ಮಾಡಿದರೆ ಸದಾನಂದ ಗೌಡರಿಗೆ ಸಂಕಷ್ಟ ಎದುರಾಗಲಿದೆ. ಇನ್ನೂ 4.5 ಲಕ್ಷ ಮುಸ್ಲಿಮರು ಹಾಗೂ 1.5 ಲಕ್ಷ ಕೈಸ್ತರು ಹಾಗೂ 2 ಲಕ್ಷ ದಲಿತ ಮತಗಳು ಈ ಭಾಗದಲ್ಲಿ ದಶಕಗಳ ಕಾಲ ಕಾಂಗ್ರೆಸ್ ಜೊತೆಗಿದೆ. ಇನ್ನೂ ಈ ಬಾರಿ ಕ್ಷೇತ್ರದಲ್ಲಿ ಸದಾನಂದ ಗೌಡ ವಿರೋಧಿ ಅಲೆ ವ್ಯಾಪಕವಾಗಿದ್ದು ಅವರು ಗೆಲ್ಲುವುದು ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಾರೆ ಒಕ್ಕಲಿಗ ಅಭ್ಯರ್ಥಿಗಳ ಮುಖಾಮುಖಿಯಿಂದಾಗಿ ಬೆಂಗಳೂರು ಉತ್ತರ ಕಾವೇರಿದ ಕಣವಾಗಿ ಬದಲಾಗಿದೆ. ಮತಗಟ್ಟೆ ಸಮೀಕ್ಷೆಗಳು ಮೈತ್ರಿ ಅಭ್ಯರ್ಥಿ ಪರ ಒಲವು ಹೊಂದಿದ್ದರು, ಯಾವುದೇ ಕ್ಷಣದಲ್ಲಿ ಮೋದಿ ಎಂಬ ಅಲೆ ಈ ಎಲ್ಲಾ ಸಮೀಕ್ಷೆಗಳನ್ನು ಸುಳ್ಳು ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

Comments are closed.