ಕರ್ನಾಟಕ

ಜೆಡಿಎಸ್​ ಭದ್ರಕೋಟೆ ಹಾಸನದಲ್ಲಿ ಕಮಲ ಅರಳಲು ಇವೆ ಹಲವು ಅಡೆ-ತಡೆ!

Pinterest LinkedIn Tumblr


ಜೆಡಿಎಸ್​ ಭದ್ರಕೋಟೆಯಾಗಿರುವ ಹಾಸನದಲ್ಲಿ ಈ ಬಾರಿ ದಳಕ್ಕೆ ಬಿಜೆಪಿ ಭಾರೀ ಪೈಪೋಟಿ ನೀಡುತ್ತಿದೆ. ಅದಕ್ಕೆ ಕಾರಣ, ಕಾಂಗ್ರೆಸ್​ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿದ್ದ ಎ.ಮಂಜು ಈಗ ಕಮಲ ಹಿಡಿದು ಮೈತ್ರಿ ಅಭ್ಯರ್ಥಿ ವಿರುದ್ಧ ಚುನಾವಣಾ ಅಖಾಡಕ್ಕೆ ದುಮುಕಿರುವುದು. ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಎ. ಮಂಜು ಶಾಸಕರಾಗಿದ್ದಾಗ, ದೇವೇಗೌಡರ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿಯಾಗಿ ಲೋಕಸಭಾ ಅಂಕಣಕ್ಕೆ ಜಿಗಿದು, ದೇವೇಗೌಡರಿಗೆ ಪ್ರಬಲ ಸ್ಪರ್ಧೆಯನ್ನೇ ಒಡ್ಡಿದ್ದರು.

ಆದರೆ, ಈ ಬಾರಿ ಕಾಂಗ್ರೆಸ್-ಜೆಡಿಎಸ್​ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಹಾಸನದಲ್ಲಿ ಮಂಜು ಅವರಿಗೆ ಅಸ್ತಿತ್ವದ ಪ್ರಶ್ನೆ ಎದುರಾಯಿತು. ಮೊದಲಿನಿಂದಲೂ ಎಚ್.ಡಿ. ರೇವಣ್ಣ ವಿರುದ್ಧ ಆರೋಪಗಳನ್ನೇ ಮಾಡಿಕೊಂಡು ಬರುತ್ತಿದ್ದ ಮಂಜು, ಮೈತ್ರಿಯ ನಂತರದಲ್ಲೂ ಅದನ್ನು ಮುಂದುವರೆಸಿದ್ದರು. ಮೈತ್ರಿ ಸರ್ಕಾರದಲ್ಲಿ ಹಾಸನದಲ್ಲಿ ರೇವಣ್ಣ ಎದುರು ಉಳಿಯುವುದು ಕಷ್ಟಸಾಧ್ಯ ಎಂಬುದನ್ನು ತಿಳಿದಿದ್ದ ಮಂಜು ಪಕ್ಷದಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ದರು. ಲೋಕಸಭೆಯಲ್ಲಿ ದೇವೇಗೌಡರು ಯಾವಾಗ ಹಾಸನದಿಂದ ಸ್ಪರ್ಧಿಸದೆ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಧಾರೆ ಎರೆದರೋ ಆಗಲೇ ಮಂಜು ಬಿಜೆಪಿ ಅಭ್ಯರ್ಥಿ ಎಂಬುದು ಖಾತ್ರಿಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಯಿತು.

ಒಂದು ವೇಳೆ ಈ ಕ್ಷೇತ್ರದಿಂದ ದೇವೇಗೌಡರೇ ಮರುಸ್ಪರ್ಧೆ ಮಾಡಿದ್ದರೆ ಜೆಡಿಎಸ್​ ಗೆಲುವು ನಿರಾಯಾಸವಾಗಿರುತ್ತಿತ್ತು. ಆದರೆ, ಈಗ ಗೌಡರು ತಮ್ಮ ತವರು ಕ್ಷೇತ್ರದಿಂದ ಮೊಮ್ಮಗನನ್ನು ನಿಲ್ಲಿಸುವ ಮೂಲಕ ಹಾಸನದಲ್ಲೂ ಕದನ ಪೈಪೋಟಿ ಹೆಚ್ಚುವಂತೆ ಮಾಡಿದರು. ಈಗಲೂ ವಿಜಯ ಮಾಲೆ ಯಾರ ಕೊರಳನ್ನು ಅಲಂಕರಿಸಲಿದೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆಯೇ ಹೊರತು ಸ್ಪಷ್ಟವಾಗಿ ನಿರೀಕ್ಷೆ ಮಾಡುವುದು ಸುಲಭ ಸಾಧ್ಯವಾಗಿಲ್ಲ.

ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರ, ದೇವೇಗೌಡ ಕುಟುಂಬದ ಕರ್ಮಭೂಮಿಯಾಗಿರುವ ಹಾಸನದಲ್ಲಿ ಈ ಬಾರಿ ಕಮಲ ಅರಳಿದರೆ ಅದು ಅಚ್ಚರಿಯ ವಿಷಯವೇ ಸರಿ. ಏಕೆಂದರೆ ಪ್ರತಿ ಚುನಾವಣೆಯಲ್ಲಿ ಪ್ರಬಲ ಎದುರಾಳಿಗಳಾಗುತ್ತಿದ್ದ ಕಾಂಗ್ರೆಸ್​-ಜೆಡಿಎಸ್​ ಈ ಬಾರಿ ಮೈತ್ರಿಯಾಗಿವೆ. ಇನ್ನು ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಸ್ಥಿತಿ ಇದೆ.

ಲೋಕಸಭಾ ವ್ಯಾಪ್ತಿಯಲ್ಲಿ ಏಳು ತಾಲೂಕುಗಳನ್ನು ಸೇರಿದಂತೆ ಚಿಕ್ಕಮಗಳೂರಿನ ಕಡೂರು ಬರಲಿದೆ. ಇಲ್ಲಿ ಬಿಜೆಪಿ ಶಾಸಕರಿದ್ದರೂ ಕುರುಬ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಎರಡು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಇರುವುದರಿಂದ ಕುರುಬ ಮತದಾರರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಗುರುವಾರ ಮೈತ್ರಿ ಅಭ್ಯರ್ಥಿ ಪರ ಜಂಟಿ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅವರು “ಎ. ಮಂಜು ಕಳ್ಳ ಎತ್ತು. ಅವನಿಗೆ ಒಂದೇ ಒಂದು ಮತ ಹಾಕಬೇಡಿ,” ಎಂದು ಭಾಷಣ ಮಾಡಿರುವುದು ಕುರುಬ ಮತಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಹೀಗಾಗಿ ಈ ಸಮುದಾಯದ ಮತಗಳಲ್ಲಿ ಬಹುಪಾಲು ಮೈತ್ರಿ ಅಭ್ಯರ್ಥಿ ಪಾಲಾಗುವುದು ನಿಶ್ಚಿತ.

ಇನ್ನು ರೇವಣ್ಣ, ಹಾಸನದಲ್ಲಿ ಅಧಿಕಾರ ಇರಲಿ, ಇಲ್ಲದಿರಲಿ ಕಿಂಗ್​ ಮೇಕರ್​ ರೀತಿಯೇ ಇರುತ್ತಾರೆ. ಇಂತಹವರಿಗೆ ಟೆಂಡರ್​ ಸಿಗಬೇಕು ಎಂದರೆ, ಮುಲಾಜಿಲ್ಲದೆ ಅವರಿಗೆ ಟೆಂಡರ್ ಸಿಗುತ್ತದೆ. ಹೀಗೆ ಇಡೀ ಜಿಲ್ಲೆಯಲ್ಲಿ ಆಯಾ ಸ್ಥಳೀಯ ಮಟ್ಟದಲ್ಲಿ ತಮ್ಮದೇ ಗುತ್ತಿಗೆದಾರರನ್ನು ರೇವಣ್ಣ ಹೊಂದಿದ್ದಾರೆ. ದೇವೇಗೌಡರು ಕುಟುಂಬ ರಾಜಕಾರಣಕ್ಕೆ ಒತ್ತು, ನೀಡಿ, ಮೊಮ್ಮಕ್ಕಳನ್ನು ಬೆಳೆಸುತ್ತಿದ್ದಾರೆ ಎಂಬ ಅಸಮಾಧಾನ ಜೆಡಿಎಸ್​ನಲ್ಲಿ ಹಲವರಿಗೆ ಇದ್ದರೂ, ಬೂತ್​ ಮಟ್ಟದಲ್ಲಿ ಎಷ್ಟು ಮತಗಳು ತಮಗೆ ಬಿದ್ದಿವೆ ಎಂಬ ಲೆಕ್ಕಾಚಾರ ಸಿಗುವುದರಿಂದ ಸ್ಥಳೀಯ ಗುತ್ತಿಗೆದಾರರು ರೇವಣ್ಣ ಭಯದಲ್ಲಿ ಜೆಡಿಎಸ್​ ಪರವಾಗಿ ತಮ್ಮ ಬೂತ್​ನಲ್ಲಿ ಹೆಚ್ಚು ಮತ ಬೀಳುವಂತೆ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಕಡಿಮೆ ಮತ ಬಿದ್ದರೆ ಆ ಬೂತ್​ ವ್ಯಾಪ್ತಿಯ ಗುತ್ತಿಗೆದಾರರನೆಲ್ಲಾ ಕರೆಯಿಸಿ, ಹಿಗ್ಗಾಮುಗ್ಗಾ ಝಾಡಿಸುವುದು ಖಚಿತ ಎಂದು ಹಾಸನದ ಸ್ಥಳೀಯರೊಬ್ಬರು ನ್ಯೂಸ್​ 18 ಕನ್ನಡಕ್ಕೆ ತಿಳಿಸುತ್ತಾರೆ.

ಇನ್ನೂ ಇತ್ತೀಚೆಗೆ ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಹಾಗೂ ಕಾರ್ಯಕರ್ತರೊಬ್ಬರು ಮಾತನಾಡಿದ್ದು ಎನ್ನಲಾದ ಆಡಿಯೋ ಒಂದು ವೈರಲ್​ ಆಗಿದ್ದು, ಇದರಲ್ಲಿ ಮಾತನಾಡಿದ ಪ್ರಕಾರ, ಮಂಜುಗೆ ಗೆಲುವು ಕಷ್ಟ. ಗೆದ್ದರೂ ಅವರು ಬಿಜೆಪಿಯಲ್ಲಿ ಇರುವುದಿಲ್ಲ. ಈಗಾಗಲೇ ಎರಡು ಬಾರಿ ಪಕ್ಷ ಬಿಟ್ಟು ಹೋದವರು ಮತ್ತೆ ಪಕ್ಷದಲ್ಲಿ ಮುಂದುವರೆಯುತ್ತಾರೆ ಎಂದು ಹೇಳುವುದು ಕಷ್ಟ ಎಂಬ ಮಾತುಕತೆ ನಡೆದಿದೆ.

ಇನ್ನು ಎ. ಮಂಜು ಗೆಲುವಿನ ನಿರೀಕ್ಷೆಯಲ್ಲಿ ಕ್ಷೇತ್ರದಲ್ಲಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಾ ಬಿಜೆಪಿ ನಾಯಕರಂತೆ ಅವರೂ ಕೂಡ ಮತ್ತೊಮ್ಮೆ ಮೋದಿ ಪ್ರಧಾನಿ ಎಂಬ ವಾಕ್ಯದೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ (ಹಾಸನ, ಕಡೂರು) ಗೆಲುವು ಸಾಧಿಸಿ, ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್​ಅನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ, ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಶಾಸಕನ ಆಯ್ಕೆಗೆ ಮತ ಚಲಾಯಿಸದಂತೆ ಇಲ್ಲಿನ ಜನರು ಸಂಸದರ ಆಯ್ಕೆಯಲ್ಲಿ ಮತ ಚಲಾಯಿಸುವುದಿಲ್ಲ ಎಂಬುದು ವಾಸ್ತವ. ವ್ಯಕ್ತಿಯ ವೈಯಕ್ತಿಕ ವರ್ಚಸ್ಸು ಕೂಡ ಇಲ್ಲಿ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ವೈಯಕ್ತಿಕವಾಗಿ ಎ.ಮಂಜು ಹಾಸನದಲ್ಲಿ ಉತ್ತಮ ವರ್ಚಸ್ಸು ಹೊಂದಿದ್ದಾರೆ. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ ಸೋತ ಮಂಜು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲಲಿದ್ದಾರಾ ಎಂಬುದನ್ನು ಕಾದು ನೋಡಬೇಕು. ಅಲ್ಲದೇ, ಬಿಜೆಪಿಯ ಎಲ್ಲ ಮತಗಳು ಮಂಜುವಿಗೆ ಬೀಳಲಿವೆಯೇ ಎಂಬುದೂ ಯಕ್ಷ ಪ್ರಶ್ನೆಯಾಗಿದೆ. ಏಕೆಂದರೆ ಮಂಜು, ಮಂತ್ರಿಯಾಗಿದ್ದಾಗ ಬಿಜೆಪಿಯ ಹಲವು ನಾಯಕರ ವಿರುದ್ಧ ವೈರತ್ವ ಕಟ್ಟಿಕೊಂಡಿದ್ದಾರೆ. ಈಗ ಪಕ್ಷ ಬದಲಿಸಿದ ತಕ್ಷಣಕ್ಕೆ ಬಿಜೆಪಿಯ ಕೆಲ ಕಾರ್ಯಕರ್ತರ ಮುನಿಸು ಕಡಿಮೆಯಾಗುತ್ತದೆಯೇ ಎಂಬದನ್ನು ಕಾದುನೋಡಬೇಕಿದೆ.

ಯಾವ ಸಮುದಾಯದವರು ಎಷ್ಟಿದ್ದಾರೆ?

ಒಕ್ಕಲಿಗರು – 4.50 ಲಕ್ಷ
ಲಿಂಗಾಯತ- 3 ಲಕ್ಷ
ಕುರುಬರು – 2 ಲಕ್ಷ
ಎಸ್​ಸಿ/ಎಸ್ಟಿ – 3 ಲಕ್ಷ
ಮುಸ್ಲಿಂ – 1 ಲಕ್ಷ
ಇತರರು – 1 ಲಕ್ಷ

ಕಳೆದ ಚುನಾವಣೆಯಲ್ಲಿದ್ದ ಮತದಾರರು

ಒಟ್ಟು ಮತದಾರರು – 15,61,336
ಪುರುಷರು – 7,89,668
ಮಹಿಳೆಯರು – 7,71,668

ಕಳೆದ ಜನಗಣತಿ ಪ್ರಕಾರ ಹಾಸನದಲ್ಲಿ 20,16,896 ಮಂದಿ ಇದ್ದು, ಶೇ.78.50ರಷ್ಟು ಜನರು ಗ್ರಾಮೀಣ ಭಾಗದಲ್ಲಿ ಇದ್ದಾರೆ. ಉಳಿದ 21.50% ಮಂದಿ ನಗರ ಪ್ರದೇಶದಲ್ಲಿ ವಾಸವಾಗಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇ.19.69 ಎಸ್​ಸಿ, ಶೇ.1.84 ಎಸ್​ಟಿ ಇದ್ದಾರೆ.

ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶ್ರವಣಬೆಳಗೊಳ, ಅರಸೀಕೆರೆ, ಬೇಲೂರು, ಹಾಸನ, ಹೊಳೆನರಸೀಪುರ, ಅರಕಲಗೂಡು, ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಕಡೂರು ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಕ್ಷೇತ್ರ ವಿಂಗಡಣೆಗೂ ಮೊದಲು ಈ ಲೋಕಸಭಾ ವ್ಯಾಪ್ತಿಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇದ್ದರೂ ಚಿಕ್ಕಮಗಳೂರಿನ ಕಡೂರು ಈ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದರಿಂದ ಕುರುಬ ಸಮುದಾಯದ ಮತಸಂಖ್ಯೆ ಹೆಚ್ಚಾಗಿದೆ. ಒಕ್ಕಲಿಗ, ಲಿಂಗಾಯತ, ಕುರುಬ, ಎಸ್​ಸಿ, ಎಸ್​ಟಿ ಕ್ರಮವಾಗಿ ಇದ್ದಾರೆ.

ರಮೇಶ್ ಹಂಡ್ರಂಗಿ

Comments are closed.