ಕರ್ನಾಟಕ

ಗೋವಾ ವಲಯಕ್ಕೆ ಸೇರಿದ ಐಟಿ ಅಧಿಕಾರಿಗಳಿಂದ ರಾಜ್ಯದ ಕೆಲ ಪ್ರದೇಶದಲ್ಲಿ ದಾಳಿ: ಯಾರ ನಿವಾಸದಲ್ಲಿ ಎಷ್ಟು ಕೋಟಿ ಸಿಕ್ಕಿದೆ?

Pinterest LinkedIn Tumblr


ಬೆಂಗಳೂರು: ಚುನಾವಣಾ ವೆಚ್ಚದ ಮೇಲ್ವಿಚಾರಣೆ ಭಾಗವಾಗಿ ಕರ್ನಾಟಕ, ಗೋವಾ ವಲಯಕ್ಕೆ ಸೇರಿದ ಐಟಿ ಅಧಿಕಾರಿಗಳು ಕರ್ನಾಟಕದ ಕೆಲ ಪ್ರದೇಶಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಇಲಾಖೆ ಸ್ಪಷ್ಟಪಡಿಸಿದೆ.

ಐಟಿ ಹೇಳಿಕೆಯಲ್ಲಿ ಏನಿದೆ?
ಏ.10 ರಂದು ಪಣಜಿ ಮತ್ತು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಗೋವಾ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಉಡುಪಿ ಪ್ರದೇಶದಲ್ಲಿ ಮಟ್ಕಾ, ಆರ್ಥಿಕ ವ್ಯವಹಾರ, ಗೋಡಂಬಿ ವ್ಯವಹಾರ ಸೇರಿದಂತೆ ಇತರೇ ಆರ್ಥಿಕ ವ್ಯವಹಾರಗಳನ್ನು ನಡೆಸುವ ಕೆಲ ಉದ್ಯಮಿಗಳ ಮೇಲೆ ದಾಳಿ ನಡೆಸಲಾಗಿದೆ. ಗೋವಾದಲ್ಲಿ ನಡೆದ ದಾಳಿಯಲ್ಲಿ ಮಟ್ಕಾ ಹಾಗೂ ಗೋಡಂಬಿ ವ್ಯವಹಾರ ನಡೆಸುವ ಉದ್ಯಮಿ ನಿವಾಸ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಸುಮಾರು 33 ಲಕ್ಷ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿದೆ.

ಬೆಳಗಾವಿಯ ಚಿಕ್ಕೋಡಿ, ಗೋಕಾಕ್, ನಿಪ್ಪಾಣಿ ಪ್ರದೇಶಗಳಲ್ಲಿ ಸಿವಿಲ್ ಗುತ್ತಿಗೆದಾರರು ಹಾಗೂ ಮದ್ಯಪಾನಕ್ಕೆ ಸಂಬಂಧಿಸಿದ ಉದ್ಯಮ ನಡೆಸುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ದಾಖಲೆ ಇಲ್ಲದೇ ನೌಕರರ ಹೆಸರಿನಲ್ಲಿ ಇರುವ ಎಫ್‍ಡಿ ಹಾಗೂ ನಕಲಿ ಬಿಲ್ಲಿಂಗ್ ಮೂಲಕ ನಗದು ಪಡೆದಿರುವ ದಾಖಲೆಗಳು ಲಭ್ಯವಾಗಿದೆ. ಅಲ್ಲದೇ ಪಿಡಬ್ಲ್ಯೂಡಿ ಎಂಜಿನಿಯರ್ ಗಳಿಗೆ ನೀಡಲಾಗಿರುವ ಹಣ ಬಗ್ಗೆ ಮಾಹಿತಿ ಲಭಿಸಿದೆ. ಅಂದಾಜು 62 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಹುಬ್ಬಳ್ಳಿ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ 6 ಪಿಡಬ್ಲ್ಯೂಡಿ ಗುತ್ತಿಗೆದಾರರು, ಒಬ್ಬ ಪಿಡಬ್ಲೂಡಿ ಅಧಿಕಾರಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಕ್ರಮ ಹಣ ಪಾವತಿ, ನಕಲಿ ಬಿಲ್ಲಿಂಗ್ ಮೂಲಕ ಅಪಾರ ಮೊತ್ತದ ಹಣ ಪಡೆದಿರುವ ಸಾಕ್ಷಿಗಳು ಲಭ್ಯವಾಗಿದೆ. ಇದನ್ನು ಹೊರತು ಪಡಿಸಿ ಲಭ್ಯವಾಗಿರುವ ಇತರೇ ದಾಖಲೆಗಳ ಅನ್ವಯ 40.50 ಕೋಟಿ ಆದಾಯ ಹಣ, 1.29 ಕೋಟಿ ರೂ. ದಾಖಲೆ ರಹಿತ ಹಣ ಮತ್ತು 3.9 ಕೋಟಿ ರೂ. ಮೌಲ್ಯದ ಚಿನ್ನ (10.30 ಕೆಜಿ ಚಿನ್ನಾಭರಣ, 2.22 ಕೆಜಿ ಚಿನ್ನದ ಗಟ್ಟಿ) ಸೇರಿದೆ.

ಉಡುಪಿಯಲ್ಲಿ ನಡೆದ ದಾಳಿಯಲ್ಲಿ ಸಾರಿಗೆ ಬಸ್ ಉದ್ಯಮ ನಡೆಸುವ ವ್ಯಕ್ತಿಗೆ ಸೇರಿದ ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ದಾಖಲೆ ಇಲ್ಲದ 10 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಸಾರಿಗೆ ಉದ್ಯಮದಲ್ಲಿ ಬಂದ ಆದಾಯದ ಬಗ್ಗೆ ಸರಿಯಾದ ಲೆಕ್ಕ ತೋರಿಸದ ದಾಖಲೆಗಳು ಹಾಗೂ ಹಲವು ಕಡೆ ಹೂಡಿಕೆ ಮಾಡಿರುವ ಸಾಕ್ಷಿ ಪತ್ರಗಳು ಲಭ್ಯವಾಗಿದೆ.

ಏ.11 ರಂದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್, ಇವೆಂಟ್ ಮ್ಯಾನೇಜ್‍ಮೆಂಟ್, ಕೋಳಿ ಸಾಕಾಣಿಕೆ ಸೇರಿದಂತೆ ವಿವಿಧ ಉದ್ಯಮಗಳು ನಡೆಸುವ ಮೂವರು ಉದ್ಯಮಿಗಳ ಮೇಲೆ ದಾಳಿ ನಡೆದಿದೆ. ಈ ವೇಳೆ ದಾಖಲೆ ಇಲ್ಲದ 85 ಲಕ್ಷ ರೂ. ಹಣ, 13.5 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ ಅಕ್ರಮ ಹಣ ಸಂದಾಯ ಆಗಿರುವ ಬಗ್ಗೆಯೂ ದಾಖಲೆಗಳು ಸಿಕ್ಕಿದೆ.

ಗೋವಾ, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರು, ಉಡುಪಿಯಲ್ಲಿ ನಡೆದ ದಾಳಿಯಲ್ಲಿ ಒಟ್ಟು 3.19 ಕೋಟಿ ರೂ. ಹಣ ಮತ್ತು 3.9 ಕೋಟಿ ರೂ. ಮೌಲ್ಯದ 12.5 ಕೆಜಿ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಈ ಎಲ್ಲಾ ದಾಳಿಗಳು ಸಂಸ್ಥೆಗೆ ಲಭಿಸಿದ ಖಚಿತ ಮಾಹಿತಿ ಹಾಗೂ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಯಾವುದೇ ರಾಜಕೀಯ ಮುಖಂಡ, ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿ, ಸಂಸದ, ಶಾಸಕರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Comments are closed.