ಕರ್ನಾಟಕ

ತನ್ನನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿರುವ ಪ್ರಧಾನಿ ಮೋದಿ ಬಗ್ಗೆ ಸುಮಲತಾ ಹೇಳಿದ್ದೇನು..?

Pinterest LinkedIn Tumblr

ಮಂಡ್ಯ: ಮೈಸೂರಿನಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಹೊಗಳಿ ಅವರ ಪತ್ನಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಿ ಎಂದು ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮನವಿ ಮಾಡಿಕೊಂಡಿದ್ದಕ್ಕೆ ಸುಮಲತಾ ಅಂಬರೀಶ್ ಧನ್ಯವಾದ ಸಲ್ಲಿಸಿದ್ದಾರೆ.

ಅಂಬರೀಶ್ ಮತ್ತು ಸುಮಲತಾ ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಸೇವೆ ಮಾಡಿದ್ದರು. ಹೀಗಾಗಿ ಸುಮಲತಾರನ್ನು ಆಶೀರ್ವದಿಸಿ ಎಂದು ಪ್ರಧಾನಿ ಮೋದಿ ಸುಮಲತಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದರು.

ಪ್ರಧಾನಿ ಮೋದಿ ಹೇಳಿಕೆ ಬಗ್ಗೆ ಪಾಂಡವಪುರದಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್ ‘ಪ್ರಧಾನಿ ನಮ್ಮ ಬಗ್ಗೆ ಹೇಳಿದ ಒಳ್ಳೆ ಮಾತುಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಇದು ಅಂಬರೀಶ್ ಗೆ ಸಿಕ್ಕ ಗೌರವ. ನನಗೆ ಹೇಳೋಕೆ ಪದಗಳೇ ಸಾಲಲ್ಲ. ಹೃದಯ ತುಂಬಿ ಕೃತಜ್ಞತೆ ಹೇಳುತ್ತಿದ್ದೇನೆ ಎಂದಿದ್ದಾರೆ.

ಪ್ರಧಾನಿ ನೆನಪಿಸಿಕೊಳ್ಳುವುದು ಎಂದರೆ ಹೆಮ್ಮೆಯ ವಿಚಾರ. ಇದು ಅಂಬರೀಷ್‌ ಅವರ ಸಾಧನೆಯನ್ನು ಎತ್ತಿ ತೋರಿಸುತ್ತದೆ. ಇದು ನಮ್ಮ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬುತ್ತದೆ, ಅದು ನಮಗೆ ವರದಾನವಾಗುತ್ತದೆ ಎಂದು ಹೇಳಿದರು.

ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ. ಒಂದು ವೇಳೆ ಸುಮಲತಾ ಗೆದ್ದರೆ ಬಿಜೆಪಿ ಸೇರಬಹುದು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ಅವೆಲ್ಲ ಕೇವಲ ಸುಳ್ಳು ವದಂತಿಯಷ್ಟೆ, ನಾನು ಬಿಜೆಪಿ ಸೇರುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ.

Comments are closed.