ಕರ್ನಾಟಕ

ಚುನಾವಣೆ ಸಂದರ್ಭದಲ್ಲಿ ಪ್ರಥಮ ಬಾರಿ ಬಿಜೆಪಿಗೆ ಐಟಿ ಶಾಕ್

Pinterest LinkedIn Tumblr


ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಕುರುಡು ಕಾಂಚಾಣ ಹರಿದಾಡುತ್ತಿದೆ ಎಂಬ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಕ್ರಮಕ್ಕೆ ಬ್ರೇಕ್ ಹಾಕಲು ಬಳ್ಳಾರಿಯಲ್ಲಿ ಐಟಿ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ನಗರದ ನಕ್ಷತ್ರ ಹೋಟೆಲ್ ನಲ್ಲಿ ತಂಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ರೂಮ್‍ಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪುತ್ರನ ಆಪ್ತರು ಹಾಗೂ ಕಾಂಗ್ರೆಸ್ ಮುಖಂಡರು ವಾಸವಾಗಿದ್ದ ರೂಮ್‍ಗಳ ಮೇಲೆ ದಾಳಿ ನಡೆಸಿದ ಐಟಿ ಹಾಗೂ ಚುನಾವಣಾಧಿಕಾರಿಗಳು ಕೋಣೆಗಳನ್ನ ತಡಕಾಡಿ ಕೆಲ ದಾಖಲೆ ಸೇರಿದಂತೆ ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. 6 ಐಟಿ ಅಧಿಕಾರಿಗಳ ನೇತೃತ್ವದ ತಂಡ ಸೇರಿದಂತೆ ಚುನಾವಣಾಧಿಕಾರಿಗಳು ಬಿಜೆಪಿ ಮುಖಂಡರ ರೂಂಗಳ ಮೇಲೆ ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಹೋಟೆಲ್ ಪ್ರವೇಶಿಸಿ ಪ್ರಶ್ನೆ ಮಾಡಲು ಮುಂದಾದರು.

ಈ ವೇಳೆ ಐಟಿ ಅಧಿಕಾರಿಗಳು ಹೋಟೆಲ್ ಒಳಗೆ ಯಾರನ್ನೂ ಬಿಡದ ಪರಿಣಾಮ ದೇವೇಂದ್ರಪ್ಪ ವಾಪಾಸ್ ತೆರಳಿದರು. ಕಾಂಗ್ರೆಸ್ ನ ಮಾಜಿ ಶಾಸಕ, ಗಣಿ ಧಣಿ ಅನಿಲ್ ಲಾಡ್ ರೂಂನಲ್ಲಿದ್ದ ವೇಳೆ ಐಟಿ ಅಧಿಕಾರಿಗಳು ದಾಳಿ ನಡೆಸಿ ತಪಸಣೆ ನಡೆಸಲು ಮುಂದಾದರು. ಆದರೆ ಐಟಿ ಅಧಿಕಾರಿಗಳು ಕೋಣೆ ಪ್ರವೇಶಿಸುತ್ತಿದ್ದಂತೆ ಅನಿಲ್ ಲಾಡ್ ಬಾತ್ ರೂಂ ಸೇರಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಅನುಮಾನಗೊಂಡ ಐಟಿ ಅಧಿಕಾರಿಗಳು ಬಾತ್ ರೂಮ್ ಸಹ ಪರಿಶೀಲನೆ ನಡೆಸಿದರು ಎಂದು ಹೇಳಲಾಗುತ್ತಿದೆ.

ಹೋಟೆಲ್ ನಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ ಅನಿಲ್ ಲಾಡ್, ನಾನು ಈಗ ತಾನೆ ಬೆಂಗಳೂರಿನಿಂದ ಕಾರ್ಯಕರ್ತರ ಸಭೆಗಾಗಿ ಬಂದಿದ್ದೇನೆ. ಐಟಿ ಅಧಿಕಾರಿಗಳು ಬಂದಾಗ ನಾನು ಬಾತ್ ರೂಮ್ ನಲ್ಲಿದ್ದೆ, ನಮಗೆ ಹಣ ಇದೆ ಅಂತ ಮಾಹಿತಿ ಬಂದಿದೆ ಅಂತ ಅಧಿಕಾರಿಗಳು ಕೋಣೆಯನ್ನು ಪರಿಶೀಲನೆ ನಡೆಸಿದರು. ಐಟಿ ಅಧಿಕಾರಿಗಳು ನನಗೆ ನೋಟಿಸ್ ನೀಡಿ ವಿಚಾರಣೆಗೆ ಬರಬೇಕು ಎಂದು ತಿಳಿಸಿದ್ದಾರೆ. ದಾಳಿಯಲ್ಲಿ ಬೆಂಗಳೂರು ಮತ್ತು ಬಳ್ಳಾರಿಯ ಐಟಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ಹೇಳಿದರು.

Comments are closed.