ಕರ್ನಾಟಕ

ಮನ್​ ಕಿ ಬಾತ್​ನಿಂದ ಹೊಟ್ಟೆ ತುಂಬಲ್ಲ, ಉದ್ಯೋಗ ಸಿಗಲ್ಲ; ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಬಿಜೆಪಿ ಪ್ರಣಾಳಿಕೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯದಂತಿದೆ. 370ನೇ ವಿಧಿಯನ್ನು ರದ್ದು ಮಾಡುತ್ತೇವೆ ಎಂದು ಹೇಳುತ್ತಿದ್ದೀರ. ಜನಸಂಘ ಬಂದಾಗಿನಿಂದಲೂ ಇದನ್ನೇ ಹೇಳುತ್ತಿದ್ದೀರಿ. ಬಾಬ್ರಿ ಮಸೀದಿ ಕೆಡವಿ ರಾಮಮಂದಿರ ಕಟ್ತೀವಿ ಅಂತ ಹೇಳಿದಿರಿ. ವಾಜಪೇಯಿ 6 ವರ್ಷ, ನೀವು 5 ವರ್ಷ ಆಡಳಿತ ಮಾಡಿದಿರಿ, ಏನು ಮಾಡಿದ್ರಿ? ಊರೂರಿಂದ ತಂದ ಇಟ್ಟಿಗೆ, ಹಣ ಏನಾಯ್ತು? ಲೆಕ್ಕ ಕೊಡಬೇಕಲ್ವ ಮಿಸ್ಟರ್ ಮೋದಿ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೋದಿಗೆ 56 ಇಂಚು ಎದೆ ಇದೆಯಂತೆ, ಇನ್ಯಾರಿಗೂ 56 ಇಂಚು ಎದೆ ಇಲ್ವಾ? 56 ಇಂಚು ಎದೆ ಇದ್ದರೆ ಸಾಲದು, ಒಳ್ಳೆಯ ಹೃದಯ ಇರಬೇಕು. ಬಡವರಿಗೆ ಅನುಕೂಲ ಮಾಡುವ ಹೃದಯ ಇರಬೇಕು. ಬರಗಾಲ ಇದೆ, ಸಾಲಮನ್ನಾ ಮಾಡಿ ಎಂದು ಮೋದಿಯವರನ್ನು ಭೇಟಿ ಮಾಡಿ ಕೇಳಿಕೊಂಡೆ. ರೈತರಿಗೆ ಪರಿಹಾರ ನೀಡುವಂತೆ ಪರಿಪರಿಯಾಗಿ ಬೇಡಿಕೊಂಡೆ. ಕಾಲಿಗೆ ಬೀಳುವುದೊಂದೇ ಬಾಕಿಯಿತ್ತು. ಆದರೆ, ಮೋದಿ ಕರಗಲಿಲ್ಲ. ಶೆಟ್ಟರ್, ಶೋಭಾ ಕರಂದ್ಲಾಜೆ ಸೇರಿದಂತೆ ಯಾರೂ ತುಟಿಕ್ ಪಿಟಿಕ್ ಎನ್ನಲಿಲ್ಲ. ಈಗ ಎಲ್ಲರೂ ರೈತರ ಬಗ್ಗೆ ಭಾಷಣ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮೋಹನ್ ಭಾಗವತ್ ಮೀಸಲಾತಿ ಕೊಡಬಾರದು ಎನ್ನುತ್ತಾರೆ. ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿಯೊಬ್ಬ ಸಂವಿಧಾನವನ್ನು ಬದಲಾಯಿಸಬೇಕು ಅಂತಾನೆ. ಇಲ್ಲಿ ಯಾವೋನೋ ಅಭ್ಯರ್ಥಿಯಾಗಿರೋನು ಸಂವಿಧಾನ ಸುಟ್ಟು ಹಾಕಬೇಕು ಅಂತಾನೆ. ಜಗತ್ತಿನಲ್ಲಿ ಶ್ರೇಷ್ಠವಾಗಿರೋದೇ ನಮ್ಮ ಸಂವಿಧಾನ. ನಮ್ಮ ಸಂವಿಧಾನ ಉಳಿಯಬೇಕು, ಪ್ರಜಾತಂತ್ರ ಉಳಿಯಬೇಕು. ಸರ್ವಾಧಿಕಾರಿ ಮನೋಭಾವನೆ ಇರುವ ತತ್ವ ಬದಲಾಗಬೇಕು. ಸಂಸತ್​ನಲ್ಲಿ ಮಾತನಾಡದ ಮೋದಿ ರಾಜ್ಯಸಭೆಗೆ 5 ವರ್ಷದಲ್ಲಿ ಕೇವಲ 19 ಬಾರಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ವಿರುದ್ದ ನಿಂತಿರೋದು ಯಾರೋ ಅವನು? ಆತ ಸಂವಿಧಾನವನ್ನು ಸುಟ್ಟುಹಾಕಬೇಕು ಎಂದೆಲ್ಲಾ ಮಾತಾಡ್ತಾನೆ. ಆತನನ್ನು ಸೂರ್ಯ ಎನ್ನಬಾರದು, ಅಮಾವಾಸ್ಯೆ ಎನ್ನಬೇಕು ಎಂದು ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡದ ಮೋದಿ ಕೇವಲ ಮನ್ ಕಿ ಬಾತ್ ಮಾಡಿಕೊಂಡಿದ್ದಾರೆ. ಮನ್​ ಕಿ ಬಾತ್​ನಿಂದ ಬಡವರ ಹೊಟ್ಟೆ ತುಂಬುವುದಿಲ್ಲ, ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ರೈತರ ಬಗ್ಗೆ ಯಾವತ್ತೂ ಮೋದಿ ಮಾತನಾಡುವುದಿಲ್ಲ. ಅವರಿಗೆ ಆ ವಿಷಯ ಬೇಕಾಗಿಯೂ ಇಲ್ಲ. ಅವರೇನಿದ್ದರೂ ಉಳ್ಳವರ ಪರ ಎಂದು ಮೋದಿ ವಿರುದ್ದ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

Comments are closed.