ರಾಷ್ಟ್ರೀಯ

ಬಿಜೆಪಿಯಿಂದ ಮತ್ತೊಮ್ಮೆ ಬಹುಮತದ ಸರ್ಕಾರ ರಚನೆ; ಸಮೀಕ್ಷೆಗಳು

Pinterest LinkedIn Tumblr
Indian Prime Minister Narendra Modi 

ನವ ದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತದೊಂದಿಗೆ ಮತ್ತೊಮ್ಮೆ ಗದ್ದುಗೆ ಏರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ರಾಷ್ಟ್ರಾದ್ಯಂತ ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಈ ಸಮೀಕ್ಷೆಯ ಆಧಾರದಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ 2014ರ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಕ್ಷೇತ್ರಕ್ಕೆ ಸೀಮಿತವಾಗಿತ್ತು. ಆದರೆ, ಈ ಬಾರಿ ಕಾಂಗ್ರೆಸ್ ಕಳೆದ ಬಾರಿಗಿಂತ ಎರಡರಷ್ಟು ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಈ ಬಾರಿ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಪಕ್ಷೇತರರು ಸೇರಿದಂತೆ ಉಳಿದ ಪಕ್ಷಗಳು ಸುಮಾರು 129 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ 543 ಲೋಕಸಭಾ ಕ್ಷೇತ್ರಗಳಿದ್ದು ಯಾವುದೇ ಪಕ್ಷ ಅಧಿಕಾರದ ಗದ್ದುಗೆ ಏರಲು ಸರಳ ಬಹುಮತಕ್ಕೆ 272 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.

ಉತ್ತರಪ್ರದೇಶದಲ್ಲೂ ಬಿಜೆಪಿಗೆ ಮೇಲುಗೈ : 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 71ರಲ್ಲಿ ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿತ್ತು. ಪರಿಣಾಮ ಉತ್ತರ ಪ್ರದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಎಸ್​ಪಿ ಹಾಗೂ ಬಿಎಸ್​ಪಿ ಪಕ್ಷಗಳು ತಮ್ಮ ಅಸ್ಥಿತ್ವವನ್ನು ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ಗವು. ಇದೇ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಎರಡೂ ಪಕ್ಷಗಳು ಮೈತ್ರಿ ಸಾಧಿಸಿದ್ದು ಬಿಜೆಪಿಗೆ ಮಣ್ಣು ಮುಕ್ಕಿಸುವ ಮುನ್ಸೂಚನೆ ನೀಡಿದ್ದವು.

ಆದರೆ, ಇದಕ್ಕೆ ವ್ಯತಿರೀಕ್ತವಾದ ಸಮೀಕ್ಷೆಗಳು ಹೊರಬೀಳುತ್ತಿದ್ದು, ಬಿಎಸ್​ಪಿ-ಎಸ್​ಪಿ ಮೈತ್ರಿಯ ಹೊರತಾಗಿಯೂ ಬಿಜೆಪಿ ಉತ್ತರಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಮೈತ್ರಿ ಪಕ್ಷಗಳು ಕೇವಲ 36 ಸ್ಥಾನಗಳಿಗೆ ಸೀಮಿತವಾಗಲಿವೆ ಎಂದು ಸಮೀಕ್ಷೆಗಳು ವ್ಯಾಖ್ಯಾನಿಸುತ್ತಿವೆ.

ಬಿಹಾರದಲ್ಲಿ ಎನ್​ಡಿಎ ಮೈತ್ರಿ 40 ಸ್ಥಾನಗಳ ಪೈಕಿ 31ರಲ್ಲಿ ಗೆಲುವು ಸಾಧಿಸಲಿವೆ. ಕಾಂಗ್ರೆಸ್ ಹಾಗೂ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್​ಜೆಡಿ ಮೈತ್ರಿ ಕೇವಲ 9 ಸ್ಥಾನಗಳಿಗೆ ಸೀಮಿತವಾಗಲಿದೆ.

ಆಂಧ್ರಪ್ರದೇಶದಲ್ಲಿ ಜಗನ್​ಮೋಹನ್ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್ ಹಾಗೂ ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷಗಳು ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ.

ಆಂಧ್ರಪ್ರದೇಶದ 25 ಸ್ಥಾನಗಳ ಪೈಕಿ ವೈಎಸ್​ಆರ್ ಕಾಂಗ್ರೆಸ್ 21ರಲ್ಲಿ ಗೆಲುವು ಸಾಧಿಸಿದರೆ, ತೆಲಂಗಾಣದ 17 ಕ್ಷೇತ್ರಗಳ ಪೈಕಿ ತೆಲಂಗಾಣ ರಾಷ್ಟ್ರೀಯ ಸಮಿತಿ 14ರಲ್ಲಿ ಗೆಲುವು ಸಾಧಿಸಲಿದೆ. ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಕೇವಲ 4 ಸ್ಥಾನಗಳು ಮಾತ್ರ ಲಭ್ಯವಾಗಲಿದೆ ಎಂದು ಸಮೀಕ್ಷೆ ವರದಿಗಳು ತಿಳಿಸಿವೆ.

ಭಾರತೀಯ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯನ್ನು 7 ಹಂತಗಳಲ್ಲಿ ನಡೆಸಲು ನಿರ್ಧರಿಸಿದ್ದು ಮೊದಲ ಹಂತದ ಮತದಾನ ಏಪ್ರಿಲ್.11 ರಂದು ಆರಂಭವಾಗಲಿದ್ದು, ಮೇ.23 ರಂದು ಫಲಿತಾಂಶ ಹೊರಬರಲಿದೆ.

Comments are closed.