ಬೆಂಗಳೂರು: ಮೊದಲ ಹಂತದ ಮತದಾನಕ್ಕೆ ಇನ್ನೂ ಒಂದುವಾರ ಬಾಕಿಯಿದ್ದರೂ ದೂರದ ಕಡಿದಾದ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಇಂದೇ ಗೌಪ್ಯ ಮತದಾನ ಮಾಡಿದ್ದಾರೆ. ಹೀಗೆ ಮತದಾನ ಮಾಡಿದವರಲ್ಲಿ ಓರ್ವ ಯೋಧ ಮಂಡ್ಯ ಸುಮಲತಾ ಅವರಿಗೆ ವೋಟು ಹಾಕಿದ್ದ ಫೋಟೋ ವೈರಲ್ ಆಗಿದ್ದು, ಅದನ್ನು ಸುಮಲತಾ ಅಂಬರೀಷ್ ಕೂಡ ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಆರ್.ನಾಯಕ್ ಎಂಬುವರು, ತಾವು ಸುಮಲತಾ ಮೇಡಂಗೆ ಯುಗಾದಿ ಹಬ್ಬದ ದಿನ ಮೊದಲ ಮತ ಹಾಕುವ ಮೂಲಕ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದೇನೆ. ಅವರು ಒಳ್ಳೇ ಲೀಡಿಂಗ್ನಿಂದ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇದೆ. ಮಂಡ್ಯ ಅಭಿವೃದ್ಧಿ ಹೊಂದಬೇಕು ಎಂದರೆ ಸುಮಲತಾ ಮೇಡಂಗೆ ಸಪೋರ್ಟ್ ಮಾಡಿ ಗೆಲ್ಲಿಸಬೇಕು. ಅಂಬರೀಷಣ್ಣ ನಮ್ಮ ಮಂಡ್ಯಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ. ಸುಮಲತಾ ಮೇಡಂ ಅವರನ್ನು ಗೆಲ್ಲಿಸುವ ಮೂಲಕ ಮಂಡ್ಯದವರ ಸ್ವಾಭಿಮಾನ ತೋರಿಸಿ, ಜೈಹಿಂದ್ ಎಂದು ಹೇಳಿದ್ದಾರೆ.
ಅಲ್ಲದೆ ತಾವೊಬ್ಬ ಸಿಆರ್ಪಿಎಫ್ ಯೋಧ ಎಂದೂ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಜತೆ ತಾವು ಸುಮಲತಾ ಅವರಿಗೆ ವೋಟು ಹಾಕುತ್ತಿರುವ ಫೋಟೋವನ್ನೂ ಶೇರ್ ಮಾಡಿದ್ದಾರೆ .
ಇದೇ ಪೋಸ್ಟ್ನ್ನು ಸುಮಲತಾ ಅಂಬರೀಷ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೆ, ಸಹೋದರ ನಾಯಕ್ ಅವರ ಪ್ರೀತಿಗೆ ನಾನು ಆಭಾರಿ. ನಿಮ್ಮಂಥವರ ಪ್ರೀತಿಯೇ ನನ್ನನ್ನು ಹೋರಾಟದ ದಾರಿಯಲ್ಲಿ ನಡೆಯಲು ಶಕ್ತಿ ನೀಡುತ್ತಿದೆ. ನಿಮ್ಮ ಪ್ರೇರಣಾದಾಯಕ ಪತ್ರ ಮತ್ತು ನೀವು ನನಗೆ ಸಲ್ಲಿಸಿರುವ ಗೌರವಕ್ಕೆ ಕೃತಜ್ಞಳು. ನಿಮ್ಮ ಹಾರೈಕೆಯನ್ನು ಮಂಡ್ಯದ ಜನ ಖಂಡಿತವಾಗಿಯೂ ಈಡೇರಿಸುತ್ತಾರೆ ಎಂದು ಹೇಳಿದ್ದಾರೆ.
ನೀವು ನಿಮ್ಮ ಅಂಬರೀಷಣ್ಣನ ಮೇಲೆ ಇಟ್ಟ ಗೌರವಕ್ಕೆ ಧಕ್ಕೆ ಬಾರದಂತೆ ಮಂಡ್ಯದಲ್ಲಿ ಬದಲಾವಣೆ ಮಾಡುತ್ತೇನೆ ಎಂದಿದ್ದಾರೆ.
Comments are closed.