ಕರ್ನಾಟಕ

ಈಗ ನನಗೆ ಬಿಜೆಪಿ ಅಭ್ಯರ್ಥಿ ಅನ್ನುತ್ತಿದ್ದಾರೆ. ನಾಳೆ ಜೆಡಿಎಸ್ ಅಭ್ಯರ್ಥಿ ಅನ್ನಬಹುದು: ಸುಮಲತಾ ಅಂಬರೀಷ್​

Pinterest LinkedIn Tumblr


ಮಂಡ್ಯ: ನಾಳೆ ನಾನು ಜೆಡಿಎಸ್​ಗೆ ಸೇರುತ್ತೇನೆ ಎಂದರೂ ಅಚ್ಚರಿ ಇಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದರು.

ಮಂಡ್ಯದ ಶಂಕರನಗರ ಬಡಾವಣೆಯಲ್ಲಿನ ದಲಿತ ಸಂಘರ್ಷ ಸಮಿತಿ ಮುಖಂಡ ಗುರುಪ್ರಸಾದ್ ಕೆರಗೋಡು ಅವರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆರಂಭದಿಂದಲೂ ನಾನು ಕಾಂಗ್ರೆಸ್ ಸೇರಿತ್ತೇನೆ ಅಂದರು. ಈಗ ಬಿಜೆಪಿ ಅಭ್ಯರ್ಥಿ ಅನ್ನುತ್ತಿದ್ದಾರೆ. ನಾಳೆ ಜೆಡಿಎಸ್ ಅಭ್ಯರ್ಥಿ ಅನ್ನಬಹುದು. ನನ್ನ ಬಗ್ಗೆ ಹೇಳಲು ಯಾವ ವಿಷಯವೂ ಸಿಗದೆ ಆ ರೀತಿ ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ತಂತ್ರ, ಕುತಂತ್ರ ಎಲ್ಲ ಅವರದ್ದು, ನಮ್ಮದೇನಿದ್ದರು ಜನತಂತ್ರ ಎಂದು ತಿಳಿಸಿದರು.

ಅಕ್ರಮ ಹಣ ಎಲ್ಲಿದೆ ಎನ್ನುವ ಮಾಹಿತಿ ಸಿಗುತ್ತದೋ ಅಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಾರೆ. ನಮ್ಮ ಮನೆಗೆ ಬಂದು ದಾಳಿ ಮಾಡಿದರೆ ಕಾಫಿ ಕುಡಿದು ಹೋಗಬೇಕಷ್ಟೆ. ನಾನು ಗೆದ್ದ ಮೇಲೆ ಮಂಡ್ಯ ಕಡೆ ಬರುವುದಿಲ್ಲ ಎನ್ನುತ್ತಿದ್ದಾರೆ. ನಾನು ಮಂಡ್ಯ ಕಡೆ ಬರುವುದಿಲ್ಲ ಎಂದಿದ್ದರೆ ನಾನ್ಯಾಕೆ ಚುನಾವಣೆಗೆ ನಿಲ್ಲುತ್ತಿದ್ದೆ. ಮನೆಯಲ್ಲೇ ನೆಮ್ಮದಿಯಾಗಿ ಇರುತ್ತಿದ್ದೆ. ಬಿಜೆಪಿ ನನಗೆ ಯಾವುದೇ ಷರತ್ತು ಹಾಕದೆ ಬೆಂಬಲಿಸಿದೆ. ಅವರು ಯಾವ ಲಾಜಿಕ್ ಇಟ್ಟುಕೊಂಡು ಮಾತನಾಡತ್ತಾರೊ ಗೊತ್ತಿಲ್ಲ. ಚುನಾವಣೆಗೆ ಕಡಿಮೆ ಸಮಯ ಇರುವುದರಿಂದ ನಾನು ಹಬ್ಬದ ದಿನವೂ ಪ್ರಚಾರ ಮಾಡುತ್ತಿದ್ದೇನೆ ಎಂದರು.

ಸುಮಲತಾ ಕಾಲುನೋವು: ಸತತ ಪ್ರಚಾರದ ಹಿನ್ನೆಲೆಯಲ್ಲಿ ಸುಮಲತಾರಿಗೆ ಕಾಲು ನೋವು ಸಮಸ್ಯೆ ಕಾಣಿಸಿಕೊಂಡಿತು. ಆ ಹಿನ್ನೆಲೆಯಲ್ಲಿ ಗುರುಪ್ರಸಾದ್ ಕರೆಗೋಡು ಮನೆಗೆ ಡಾ. ನಂದೀಶ್ ಆಗಮಿಸಿ ಚಿಕಿತ್ಸೆ ನೀಡಿದರು. ಕೆಲಕಾಲ ಅಲ್ಲಿಯೇ ಕೆಲಕಾಲ ವಿಶ್ರಾಂತಿ ಪಡೆದು, ನಂತರ ಪ್ರಚಾರ ಮುಂದುವರಿಸಿದರು.

ಮಂಡ್ಯದ ತಾಲೂಕಿನ ಹೊಳಲು ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಪ್ರಚಾರ ಮಾಡಿದರು. ರೈತ ಸಂಘದ ನಾಯಕಿ ಸುನೀತಾ ಪುಟ್ಟಣ್ಣಯ್ಯ ಸಾಥ್ ನೀಡಿದರು. ರೈತಸಂಘ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಬೆಂಬಲ ವ್ಯಕ್ತಪಡಿಸುತ್ತಿದ್ದು, ಹೋದಲ್ಲೆಲ್ಲಾ ಪುಷ್ಪ ವೃಷ್ಠಿ ಸುರಿದು ಸ್ವಾಗತಿಸುತ್ತಿದ್ದಾರೆ.

Comments are closed.