ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಸಿನಿಮಾ ‘ಪಿಎಂ ನರೇಂದ್ರ ಮೋದಿ’ ಏಪ್ರಿಲ್ 11ರಂದು ತೆರೆಕಾಣಲಿದೆ ಎಂದು ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ತಿಳಿಸಿದ್ದಾರೆ.
ಈ ಸಿನಿಮಾ ಏ.5ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿ ಇನ್ನೂ ಸಿನಿಮಾದ ಪರಿಶೀಲನೆ ನಡೆಸುತ್ತಿರುವ ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಂದೀಪ್ ಸಿಂಗ್ ತಿಳಿಸಿದ್ದರು. ಈಗ ಟ್ವೀಟ್ ಮಾಡಿರುವ ಅವರು, ಸಿನಿಮಾ ಏ.11ರಂದು ತೆರೆಗೆ ಬರಲಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ಚುನಾವಣಾ ಆಯೋಗವೂ ವಿರೋಧ ವ್ಯಕ್ತಪಡಿಸಿತ್ತು. ಹಾಗೇ ಈ ಚಿತ್ರ ತೆರೆಗೆ ಬರಲು ಅವಕಾಶ ಮಾಡಿಕೊಡಬಾರದು ಎಂದು ದೆಹಲಿ, ಬಾಂಬೆ, ಮಧ್ಯಪ್ರದೇಶ, ಕರ್ನಾಟಕ ಹೈಕೋರ್ಟ್ಗಳಲ್ಲಿ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಎಲ್ಲ ಹೈಕೋರ್ಟ್ಗಳೂ ಅರ್ಜಿ ವಜಾಗೊಳಿಸಿದ್ದು ಸಿನಿಮಾ ಬಿಡುಗಡೆಗೆ ಅಸ್ತು ಎಂದಿವೆ.
ಒಮಂಗ್ ಕುಮಾರ್ ನಿರ್ದೇಶಿಸಿರುವ ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿದ್ದಾರೆ.
Comments are closed.