ಕರ್ನಾಟಕ

ನಿಖಿಲ್ ಗೆಲುವು ಅಷ್ಟು ಸುಲಭವಲ್ಲ: ದೇವೇಗೌಡ

Pinterest LinkedIn Tumblr


ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಗೆಲುವು ಸುಲಭದ ಮಾತಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಸಮ್ಮಿಶ್ರ ಸರ್ಕಾರದ ಮೈತ್ರಿ ಪಕ್ಷದ ನಾಯಕರು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಅತ್ತ ಬಿಜೆಪಿ ಕೂಡ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೇ ಸುಮಲತಾ ಅವರ ಗೆಲುವಿಗೆ ಪ್ರಯತ್ನಿಸುತ್ತಿದೆ. ಹೀಗಾಗಿ ನಿಖಿಲ್ ಕುಮಾರ ಸ್ವಾಮಿಗೆ ಗೆಲುವು ಸುಲಭವಲ್ಲ ಎಂದು ಅವರು ಹೇಳಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ಪೇಟೆಯಲ್ಲಿ ಸರಣಿ ಸಮಾವೇಶಗಳನ್ನು ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನ ಅನೇಕ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅಪ್ಪಿಕೊಳ್ಳಲು ಬಯಸಿದ್ದಾರೆ. ಸ್ಥಿತಿ ತಾರಕಕ್ಕೇರಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕೂಡ ಸಮಸ್ಯೆ ಪರಿಹರಿಸಲು ವಿಫಲವಾಗಿದ್ದಾರೆ ಎಂದರು.
ಕಾಂಗ್ರೆಸ್ ನ ಅನೇಕ ನಾಯಕರು ಪ್ರಚಾರ ಅಭಿಯಾನದಿಂದ ದೂರ ಉಳಿದಿದ್ದಾರೆ. ನಾವು ಅವರ ಮನೆಗೆ ಹೋಗುವುದಿಲ್ಲ. ಆದರೆ, ಈ ಕ್ಷೇತ್ರದ ಜನರ ಹತ್ತಿರ ಹೋಗುತ್ತೇವೆ. ಅವರೇ ನಮ್ಮ ಕುಟುಂಬ ಹಾಗೂ ಸ್ನೇಹಿತರಾಗಿದ್ದಾರೆ ಎಂದು ದೇವೇಗೌಡ ನುಡಿದರು.
ಚಿತ್ರರಂಗದ ಖ್ಯಾತ ನಟರಾದ ದರ್ಶನ್ ಹಾಗೂ ಯಶ್ ಬೆಂಬಲ ಪಡೆದ ಪಕ್ಷೇತರ ಅಭ್ಯರ್ಥಿ ಸುಮಲತಾ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಜಕುಮಾರ್ ಅವರಿಗಿಂತ ದೊಡ್ಡ ನಟ ಬೇರೆ ಯಾರೂ ಇಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಿಕ್ಕಮಗಳೂರು ಕ್ಷೇತ್ರ ಗೆಲ್ಲುವುದಕ್ಕೂ ಮುನ್ನ ಅದೇ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ರಾಜಕುಮಾರ್ ಅವರನ್ನು ಆಹ್ವಾನಿಸಿದ್ದೆವು. ಆದರೆ, ಅದಕ್ಕೆ ರಾಜಕುಮಾರ್ ನಿರಾಕರಿಸಿದ್ದರು. ಮಂಡ್ಯದ ಜನರು ಅನೇಕ ಬಾರಿ ನಟರನ್ನು ಗೆಲ್ಲಿಸಿದ್ದಾರೆ. ಆದರೆ, ಮಂಡ್ಯದ ಜನರಿಗೆ ಇದರಿಂದ ಏಷ್ಟು ಲಾಭವಾಗಿದೆ ದೇವೇಗೌಡ ಪ್ರಶ್ನಿಸಿದರು.
ಇದಕ್ಕೂ ಮುನ್ನ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ನಾನು ಪ್ರಧಾನಿ ಹುದ್ದೆಯನ್ನು ಕಳೆದುಕೊಂಡರು ಕೂಡ ಕಾಂಗ್ರೆಸ್ ಬಗ್ಗೆ ಇರುವ ಗೌರವ ಕಡಿಮೆಯಾಗಿಲ್ಲ. ಆದರೆ, ಸದ್ಯದ ಬೆಳವಣಿಗೆ ನೋಡಿ ತುಂಬಾ ದುಖಃವಾಗುತ್ತಿದೆ ಎಂದರು.
ನಿಖಿಲ್ ಕುಮಾರ್ ಸ್ವಾಮಿಯನ್ನು ಕಣಕ್ಕಿಳಿಸುವ ಉದ್ದೇಶ ಹೊಂದಿರಲಿಲ್ಲ. ಆದರೆ, ಜಿಲ್ಲೆಯ ಎಲ್ಲಾ ಎಂಟು ವಿಧಾನ ಸಭಾ ಕ್ಷೇತ್ರಗಳ ಶಾಸಕರ ಒತ್ತಾಯದ ಮೇರೆಗೆ ಆತನನ್ನು ಚುನಾವಣೆಗೆ ನಿಲ್ಲಿಸಿದ್ದೇನೆ. ಕುಮಾರ ಸ್ವಾಮಿಯ ವಿರೋಧಿಗಳು ನಿಖಿಲ್ ವಿರುದ್ಧ ಗುಂಪಾಗಿದ್ದಾರೆ. ಆದರೆ, ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದು ದೇವೇಗೌಡ ಹೇಳಿದರು.
ಇದೇ ವೇಳೆ ಮಂಡ್ಯ ತಾಲೂಕಿನ ಇಂದವಲು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಹಿರಂಗ ಬೆಂಬಲ ಸೂಚಿಸಿದರು. ಸುಮಲತಾ ಅವರ ಗೆಲುವಿಗೆ ನಾವು ಕಾಂಗ್ರೆಸ್ ಧ್ವಜ ಹಾರಿಸುವುದಾಗಿ ಗ್ರಾಮಸ್ಥರು ಘೋಷಿಸಿದರು.

Comments are closed.