ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹುರಿಯಾಳಾಗಿರುವ ಡಾ. ಮಲ್ಲಿಕಾರ್ಜುನ ಖರ್ಗೆ ಒಟ್ಟು 14.85 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 2014 ರ ಆಸ್ತಿಪಾಸ್ತಿ ಘೋಷಣೆಗೆ ಹೋಲಿಸಿದರೆ ಒಟ್ಟಾರೆ 4.3 ಕೋಟಿ ರು ಮೊತ್ತದಷ್ಟು ಆಸ್ತಿ ಡಾ.ಖರ್ಗೆ ಹೆಚ್ಚಿಸಿಕೊಂಡಿದ್ದಾರೆ.
ಡಾ.ಖರ್ಗೆ ಗುರುವಾರ ಸಲ್ಲಿಸಿರುವ ನಾಮಪತ್ರದ ಜೊತೆಗೇ ತಮ್ಮ ಸ್ಥಿರ- ಚರಾಸ್ತಿಗಳ ಮಾಹಿತಿ ಭಾರತ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಖರ್ಗೆ ಹೆಸರಲ್ಲಿ 7. 68 ಕೋಟಿ ರು ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ (ಸ್ಥಿರಾಸ್ತಿ 6,31,92,614 ರು , ಚರಾಸ್ತಿ 1,36,10,568 ರು). ಇನ್ನು ಡಾ. ಖರ್ಗೆ ತಮ್ಮ ಧರ್ಮಪತ್ನಿ ರಾಧಾಬಾಯಿ ಹೆಸರಿನಲ್ಲಿ 7. 38 ಕೋಟಿ ರು ಚರ ಹಾಗೂ ಸ್ಥಿರಾಸ್ತಿ ಹೊಂದಿದ್ದಾರೆ.
ಸೋಜಿಗದ ಸಂಗತಿ ಎಂದರೆ ಸತತ 11 ಚುನಾವಣೆ ಎದುರಿಸಿ ರಾಜ್ಯ ಸರಕಾರದಲ್ಲಿ ಹಲವಾರು ಸಚಿವ ಸ್ಥಾನ ಹೊಂದಿದ್ದ ಡಾ. ಖರ್ಗೆ ಲೋಕಸಭೆ ಪ್ರವೇಸಿಸಿ ಕೇಂದ್ರ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಹೆದ್ದೆ ಅಲಂಕರಿಸಿರುವ ಡಾ. ಖರ್ಗೆ ಬಳಿ ಒಂದೂ ಮೋಟಾರು ವಾಹನಗಳಿಲ್ಲ. ಈ ಸಂಗತಿಯನ್ನು ಡಾ. ಖರ್ಗೆ ಆಯೋಗಕ್ಕೆ ಸಲ್ಲಿಸಿರುವ ಅಫಿದಾವಿತ್‍ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಡಾ. ಮಲ್ಲಿಕಾರ್ಜುನ ಖರ್ಗೆ 2014ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಒಟ್ಟಾರೆ ಆಸ್ತಿಪಾಸ್ತಿಯನ್ನು 10. 22 ಕೋಟಿ ರು ಮೊತ್ತದಷ್ಟು ಘೋಷಿಸಿಕೊಂಡಿದ್ದರು. ಕಳೆದ ಚುನಾವಣೆಗೂ ಈ ಚುನಾವಣೆಗೂ ಹೋಲಿಕೆ ಮಾಡಿದರೆ ಖರ್ಗೆ ಆಸ್ತಿಪಾಸ್ತಿಯಲ್ಲಿ 4. 63 ಕೋಟಿ ರು ಹೆಚ್ಚಳ ದಾಖಲಾಗಿದೆ.
Comments are closed.