ಕರ್ನಾಟಕ

ಮಂಡ್ಯದಲ್ಲಿ ನನ್ನ ಮೊಮ್ಮಗನನ್ನು​ ಸೋಲಿಸಲು ಕೆಲವರು ಪಣ ತೊಟ್ಟಿದ್ದಾರೆ: ದೇವೇಗೌಡ

Pinterest LinkedIn Tumblr


ಮಂಡ್ಯ: ನಿಖಿಲ್​ ಸೋಲಿಸುವ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಮಾಡಲು ಮಂಡ್ಯದಲ್ಲಿ ಪಕ್ಷಾತೀತವಾಗಿ ಕೆಲವರು ಪಣ ತೊಟ್ಟಿದ್ದಾರೆ. ಮಂಡ್ಯದಲ್ಲಿ ಕೆಲ ಕಾಂಗ್ರೆಸ್​ನಾಯಕರು ಈಗಾಗಲೇ ಬಹಳ ದೂರ ಹೋಗಿದ್ದಾರೆ. ಸಿದ್ದರಾಮಯ್ಯ ಅವರೇ ಖುದ್ದು ಬಂದರೂ ಫಲಕಾರಿಯಾಗುವುದಿಲ್ಲ ಎನ್ನುವ ಹಂತಕ್ಕೆ ಸ್ಥಿತಿ ತಲುಪಿದೆ ಎಂದು ಜೆಡಿಎಸ್​ ವರಿಷ್ಠ ಎಚ್​. ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಕಾಂಗ್ರೆಸ್​ ನಾಯಕರು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸದಿರುವ ಕುರಿತು ಮಾತನಾಡಿದ ಅವರು, ನನ್ನ ಗೆಲುವಿಗೆ ಪರಮೇಶ್ವರ್​ ಹಾಗೂ ನಿಖಿಲ್​ ಗೆಲುವಿಗೆ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಇರುವ ಭಿನ್ನಮತ ಶಮನಕ್ಕೆ ಇಬ್ಬರೂ ಮುಂದಾಗಿದ್ದಾರೆ. ಆದರೆ, ಸಿದ್ದರಾಮಯ್ಯ ಹೋದರೂ ಮಂಡ್ಯದಲ್ಲಿ ಯಾವುದೇ ಪ್ರಯೋಜನವಿಲ್ಲ. ಆ ರೀತಿಯ ಪರಿಸ್ಥಿತಿ ಮಂಡ್ಯದಲ್ಲಿ ಏರ್ಪಟ್ಟಿದೆ. ಅಲ್ಲಿ ಬಂಡಾಯ ಶಮನವಾಗುವ ಲಕ್ಷಣಗಳಿಲ್ಲ ಎಂದರು.

ನಮ್ಮ ವಿರುದ್ಧ ಪಣತೊಟ್ಟವರ ಮನೆ ಬಾಗಿಲಿಗೆ ನಾವು ಹೋಗಲ್ಲ. ನನ್ನ ಜೊತೆ ಬಂಧು ಬಾಂಧವರಾದ ನೀವಿದ್ದೀರಿ. ನಿಮ್ಮನ್ನು ಬಿಟ್ಟು ನಾನು ಯಾರ ಬಳಿ ಹೋಗ್ಲಿ? ಯಾರ ಬಳಿ ಹೋಗುವುದು ಎಂದು ನಾನು ನಿಮ್ಮ ಹತ್ತಿರವೇ ಕೇಳುತ್ತೇನೆ. ಇದಕ್ಕಾಗಿ ನಮ್ಮ ಪಕ್ಷದ ಯುವಕರು ಪಣ ತೊಡಬೇಕು. ಅತ್ಯಂತ ಹೆಚ್ಚಿನ ಬಹುಮತದಿಂದ ನಿಖಿಲ್ ಗೆಲ್ಲಿಸಬೇಕು ಎಂದು ಕೆ.ಆರ್. ಪೇಟೆಯಲ್ಲಿ ಮಾಜಿ ಪ್ರಧಾನಿ ಮನವಿ ಮಾಡಿದರು.

ಸಿನಿಮಾ ನಟರಿಗೆ ಜನರನ್ನು ಆಕರ್ಷಣೆ ಮಾಡುವ ಶಕ್ತಿ ಇದೆ. ಹಾಗೆಂದು ಸಿನೆಮಾ ನಟರ ಅಬ್ಬರದಿಂದ ಜನ ನಮ್ಮ ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ. ನಾನು ಪ್ರಧಾನಿಯಾಗಿದ್ದಾಗ ತುಂಬಾ ನೋವುಂಡಿದ್ದೇನೆ. ನಾನು ಕಳೆದ 22 ವರ್ಷದಿಂದ ಕಾಂಗ್ರೆಸ್ ಬಗ್ಗೆಯಾಗಲೀ, ಸೋನಿಯಾ, ರಾಹುಲ್ ವಿರುದ್ದವಾಗಲೀ ಮಾತನಾಡಿಲ್ಲ. ಯಾವುದೇ ಕಾರಣಕ್ಕೂ ಎದುರಾಳಿಗಳ ನಿಂದನೆ ಮಾಡಬೇಡಿ ಎಂದು ಕೋರಿಕೊಂಡರು.

ಅವತ್ತು ಕುಮಾರಣ್ಣ ಬಂದು ನಾನು ತಪ್ಪು ಮಾಡಿದೆ ಎಂದ. ಆಗ ನಾನು ತಪ್ಪು ಮಾಡಿದ್ರು ಪರವಾಗಿಲ್ಲ ಹೋಗಿ ಜನಕ್ಕೆ ಒಳ್ಳೆದು ಮಾಡು ಅಂದೆ. ಅಂದು ಪಕ್ಷ ಉಳಿವಿಗಾಗಿ ಕುಮಾರಸ್ವಾಮಿ ಬೇರೆಯವರ ಜೊತೆ ಹೋಗಿ ಪಕ್ಷ ಉಳಿಸಿಕೊಂಡ ಎಂದು ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Comments are closed.