ರಾಷ್ಟ್ರೀಯ

2017ರ ಪುಲ್ವಾಮಾ ದಾಳಿ: ಜೈಶೆ ಉಗ್ರ ಯುಎಇಯಿಂದ ಗಡೀಪಾರು

Pinterest LinkedIn Tumblr


ಹೊಸದಿಲ್ಲಿ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 2017ರಲ್ಲಿ ಸಿಆರ್‌ಪಿಎಫ್‌ ಶಿಬಿರದ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರ, ಜೈಷೆ ಉಗ್ರ ನಿಸಾರ್‌ ಅಹಮದ್‌ ತಂತ್ರಿ ಎಂಬಾತನನ್ನು ಯುಎಇ ಭಾರತಕ್ಕೆ ಗಡಿಪಾರು ಮಾಡಿದೆ.

ಈ ವರ್ಷದ ಫೆ.1ರಂದು ನಿಸಾರ್‌ ಅಹಮದ್‌ ಯುಎಇಗೆ ಪರಾರಿಯಾಗಿದ್ದ. ಮಾರ್ಚ್‌ 31ರಂದು ಯುಎಇಯಿಂದ ಗಡಿಪಾರಾಗಿ ಭಾರತಕ್ಕೆ ಕರೆ ತರಲಾಗಿದೆ. ಪಲಾಯನಗೈದ ಕೆಲವೇ ವಾರಗಳಲ್ಲಿ ಉಗ್ರನನ್ನು ಗಡಿಪಾರು ಮಾಡಿಸಿ ಬಂಧಿಸಲಾಗಿದೆ.

ಈತ ಪುಲ್ವಾಮಾದ ಲೇಥ್‌ಪೊರಾ ಎಂಬಲ್ಲಿ ನಡೆದ ದಾಳಿಯ ಸಂಚುಕೋರನಾಗಿದ್ದ. ಈತನನ್ನು ಗಡಿಪಾರು ಮಾಡುವಂತೆ ಕೇಂದ್ರ ಸರಕಾರವು ಯುಎಇಯನ್ನು ಕೋರಿತ್ತು. ಅಂದಿನ ದಾಳಿಯಲ್ಲಿ ಐವರು ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದರು.

ಭಾರತದ ಮನವಿಗೆ ಕೂಡಲೇ ಸ್ಪಂದಿಸಿದ ಯುಎಇ ಸರಕಾರ ಜೈಷೆ ಉಗ್ರನನ್ನು ವಶಕ್ಕೆ ತೆಗೆದುಕೊಂಡು ಗಡಿಪಾರು ಮಾಡಿದೆ. ಕಳೆದ ಕೆಲ ವರ್ಷಗಳಿಂದೀಚೆಗೆ ಪಶ್ಚಿಮ ಏಷ್ಯಾದ ರಾಷ್ಟ್ರಗಳು, ಅದರಲ್ಲೂ ಮುಖ್ಯವಾಗಿ ಸೌದಿ ಅರೇಬಿಯಾ ಮತ್ತು ಯುಎಇ ಭಾರತಕ್ಕೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಸಹಕಾರ ನೀಡುತ್ತಿರುವುದಕ್ಕೆ ಇದು ನಿದರ್ಶನವಾಗಿದೆ.

ನಿಸಾರ್‌ ಅಹಮದ್‌ನನ್ನು ದುಬೈನಿಂದ ಭಾನುವಾರ ವಿಶೇಷ ವಿಮಾನದಲ್ಲಿ ಕರೆ ತರಲಾಗಿದ್ದು, ದಿಲ್ಲಿ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಯಿತು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಕ್ಷಣ ದಳದ ಸಿಬ್ಬಂದಿ ಆತನ ಚಲನವಲನಗಳನ್ನು ಪತ್ತೆ ಹಚ್ಚಿತ್ತು. ಕೋರ್ಟ್‌ ಈತನನ್ನು ತನಿಖಾ ಸಂಸ್ಥೆಯ ವಶಕ್ಕೆ ಒಪ್ಪಿಸಿದೆ.

ಈ ಭಯೋತ್ಪಾದಕ ದಾಳಿಯಲ್ಲಿ ಉಗ್ರರಿಗೆ ಲಾಜಿಸ್ಟಿಕ್ಸ್‌ ನೆರವು ನೀಡಿದ್ದ ವ್ಯಕ್ತಿಯೊಬ್ಬನನ್ನು ತನಿಖಾ ಸಂಸ್ಥೆ ಎನ್‌ಐಎ ಕಳೆದ ಫೆಬ್ರವರಿಯಲ್ಲಿ ಹಿಂದೆ ಬಂಧಿಸಿತ್ತು. 2017ರ ಡಿಸೆಂಬರ್‌ನಲ್ಲಿ ಲೇಥ್‌ಪೊರಾದಲ್ಲಿನ ಸಿಆರ್‌ಪಿಎಫ್‌ನ 185ನೇ ಬೆಟಾಲಿಯನ್‌ ಶಿಬಿರದ ಮೇಲೆ ಬೆಳಗಿನ ಜಾವ 2 ಗಂಟೆಗೆ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ್ದರು. ಶ್ರೀನಗರದಿಂದ 30 ಕಿ.ಮೀ ದೂರದಲ್ಲಿ ಈ ಶಿಬಿರವಿತ್ತು.

ಈತ ನೂರ್‌ ಮಹಮ್ಮದ್‌ ಎಂಬ ಮತ್ತೊಬ್ಬ ಕುಖ್ಯಾತ ಜೈಷೆ ಉಗ್ರನ ಸೋದರ. ಕೇವಲ 3 ಅಡಿಗಿಂತ ಸ್ವಲ್ಪ ಎತ್ತರ ಇರುವ ಈತ ಡೆಡ್ಲಿ ಟೆರರ್‌ ಪ್ಲಾನರ್‌ ಆಗಿದ್ದ. ಯುವಕರನ್ನು ಜೈಷೆಗೆ ಸೆಳೆಯುವುದರಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದ.ದಿಲ್ಲಿ ಕೋರ್ಟ್‌ ನೂರ್‌ ಮಹಮದ್‌ನನ್ನು ‘ಮರ್ಚೆಂಟ್‌ ಆಫ್‌ ಡೆತ್‌’ (ಸಾವಿನ ವ್ಯಾಪಾರಿ) ಎಂದು ಕರೆದಿತ್ತು. 2017ರ ಭಯೋತ್ಪಾದಕ ದಾಳಿಗೆ ಕೆಲವು ದಿನಗಳ ಮುನ್ನ ಈತನನ್ನು ಭದ್ರತಾ ಪಡೆ ಹತ್ಯೆ ಮಾಡಿತ್ತು. ಉಗ್ರರ ದಮನ ಕಾರ್ಯಾಚರಣೆಯಲ್ಲಿ ಇದು ಮಹತ್ವದ ಯಶಸ್ಸು ಗಳಲ್ಲೊಂದು ಎಂದು ಪರಿಗಣಿಸಲಾಗಿತ್ತು.
……….

ವಿಧ್ವಂಸಕ ಸಂಚು

ವರದಿಗಳ ಪ್ರಕಾರ, ಈ ವರ್ಷ ಜನವರಿಯಲ್ಲಿ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ತೆಗೆದುಕೊಂಡ ದಾಳಿಯಲ್ಲಿ, ಉಗ್ರರು ಬಳಸಿದ್ದ ವಾಹನ ಮತ್ತು ಸ್ಫೋಟಕಗಳನ್ನು ವ್ಯವಸ್ಥೆ ಮಾಡಿದ್ದ ಮುದಾಸೀರ್‌ ಅಹ್ಮದ್‌ ಖಾನ್‌ ಎಂಬ 23 ವರ್ಷದ ಯುವಕನನ್ನು ನೂರ್‌ ಮಹಮ್ಮದ್‌ನೇ ಜೈಷೆಗೆ ಸೇರ್ಪಡೆಗೊಳಿಸಿದ್ದ.

Comments are closed.