ಕರ್ನಾಟಕ

ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲೇ ಸೈಕೋ ಬೆಂಕಿರಾಜ ಬಂಧನ!

Pinterest LinkedIn Tumblr


ಬೆಂಗಳೂರು: ಶೂಟೌಟ್ ನಡೆಸಿ ಬಂಧಿಸಲಾಗಿದ್ದ ಕೊಲೆ ಆರೋಪಿ ಸೈಕೋ ಬೆಂಕಿರಾಜ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದ ಪರಾರಿಯಾದ ಒಂದು ಗಂಟೆಯಲ್ಲಿ ಮತ್ತೆ ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಟಿಎಂ ಕಾವಲುಗಾರನ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ಆರೋಪಿ ಸೈಕೋ ಬೆಂಕಿರಾಜ ಇಂದು ಬೆಳಗ್ಗೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಇತ್ತ ಆರೋಪಿ ತಪ್ಪಿಸಿಕೊಂಡಿದ್ದನ್ನು ತಿಳಿದ ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಆಸ್ಪತ್ರೆ ಪಕ್ಕದ ರಸ್ತೆಯಲ್ಲೇ ನಡೆದು ಹೋಗುತ್ತಿದ್ದ ಆತನನ್ನು ಮತ್ತೆ ಬಂಧಿಸಿಲಾಗಿದೆ.

ಮಾರ್ಚ್ 23ರ ಮುಂಜಾನೆ ಕುಮಾರಸ್ವಾಮಿ ಲೇಔಟ್ ಬಳಿಯ ಎಟಿಎಂ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನು ಕೊಲೆಗೈದಿದ್ದ ಆರೋಪಿ ಸೈಕೋ ಬೆಂಕಿ ರಾಜನನ್ನು ಮಾಚ್ 31 ರಂದು ಕೋಣನಕುಂಟೆ ಬಳಿಯಿರುವ ನಾರಾಯಣನಗರ ಬಳಿ ಗುಂಡು ಹಾರಿಸಿ ಬಂಧಿಸಲಾಗಿತ್ತು. ಆ ಬಳಿಕ ಚಿಕಿತ್ಸೆಗಾಗಿ ಆರೋಪಿಯನ್ನು ನಗರದ ಸಾಯಿ ರಾಮ್ ಆಸ್ಪತೆಗೆ ದಾಖಲಿಸಲಾಗಿತ್ತು. ಈ ವೇಳೆ ಆರೋಪಿ ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಎಚ್ಚೆತ್ತ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾ ಮಲೈ ಅವರು ಇಬ್ಬರು ಪೇದೆಗಳನ್ನು ಅಮಾನತು ಮಾಡಿದ್ದಾರೆ. ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಉತ್ತರಹಳ್ಳಿಯ ಮುಖ್ಯ ರಸ್ತೆಯಲ್ಲಿದ್ದ ಕರ್ಣಾಟಕ ಬ್ಯಾಂಕ್ ಎಟಿಎಂ ಕಾವಲುಗಾರ ಲಿಂಗಪ್ಪ ಮೇಲೆ ಕಲ್ಲು ಎತ್ತಿಹಾಕಿ ಸೈಕೋ ರಾಜ ಕೊಲೆ ಮಾಡಿದ್ದ. ಈ ವೇಳೆ ಲಿಂಗಪ್ಪ ಬಳಿ ಇದ್ದ 150 ರೂ. ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. ಗಾಂಜಾ ವ್ಯಸನಿಯಾಗಿದ್ದ ಈತ 10 ವರ್ಷಗಳ ಹಿಂದೆ ಸ್ವಂತ ತಂಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಈತ ಮತ್ತೆ ತನ್ನ ಕಾರ್ಯ ಮುಂದುವರಿಸಿ ಬಸವನಗಡಿಯ ಸೂಪರ್ ವೈಸರ್ ನನ್ನು ಕೊಲೆ ಮಾಡಿದ್ದ. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಹಣಕ್ಕಾಗಿ ಸಾಮಾನ್ಯ ಜನರ ಮೇಲೆ ಹಲ್ಲೆ ಮಾಡಿ ಸಿಕ್ಕಿದಷ್ಟು ಹಣವನ್ನು ದೋಚುತ್ತಿದ್ದ.

Comments are closed.