ಕರ್ನಾಟಕ

ಸುಮಲತಾ ಬೆನ್ನಿಗೆ ನಿಂತ ಮೈಸೂರು ರಾಜವಂಶಸ್ಥರು!

Pinterest LinkedIn Tumblr


ಬೆಂಗಳೂರು: “ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾರಿಗೆ ಮೈಸೂರು ರಾಜವಂಶಸ್ಥರು ಬೆಂಬಲ ಘೋಷಿಸಿದ್ದಾರೆ. ಅಂಬರೀಶ್​​ ಪತ್ನಿಯವರ ಹೋರಾಟಕ್ಕೆ ಒಳ್ಳೆಯದಾಗಲಿ. ಅಂಬರೀಶ ಅವರು ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜತೆಗೆ 35 ವರ್ಷಗಳ ಒಡನಾಟ ಇಟ್ಟುಕೊಂಡಿದ್ದರು. ಹೀಗಾಗಿ ನಾವು ಸುಮಲತಾರ ಬೆನ್ನಿಗೆ ಇದ್ದೇವೆ. ಚುನಾವಣೆ ಗೆದ್ದು ಬರಲಿ” ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾರೈಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್​​ವೊಂದರಲ್ಲಿ ಇಂದು ಸುದ್ದಿಗೋಷ್ಠಿ ಕರೆದಿದ್ದ ಯದುವೀರ್​​ ಅವರು, ಅಂಬರೀಶ್​​ ಅವರಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಅವರ ಹೋರಾಟಕ್ಕೆ ಒಳ್ಳೆಯದಾಗಲಿ. ಅರಮನೆ ಕಷ್ಟದ ಸಂದರ್ಭದಲ್ಲಿ ಅಬರೀಶ್​​ ನಮ್ಮ ಬೆನ್ನೆಲುಬಾಗಿ ನಿಂತಿದ್ದರು. ಹಾಗಾಗಿ ಇವರ ಸಹಾಯವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಕೊಂಡಾಡಿದರು.

ಮೈಸೂರು ರಾಜಮನೆತನ ಅಂಬರೀಶರಿಗೆ ಕೃತಜ್ಞರಾಗಿರುತ್ತೇವೆ. ನಾನು ಮಂಡ್ಯ ಕ್ಷೇತ್ರದ ಬಹಿರಂಗ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ, ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ. ರಾಜಕೀಯದಿಂದ ನಾನು ದೂರ ಇದ್ದೇನೆ. ಹಾಗಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ಮಂಡ್ಯದ ಜನತೆಗೆ ಎಲ್ಲವೂ ಗೊತ್ತಿದೆ. ಹೀಗಾಗಿ ಜನರೇ ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದರು.

ಮೊದಲಿನಿಂದಲೂ ಯದುವೀರ್ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆಯೂ ಕೂಡ ಯದುವೀರ್​​ ಬಿಜೆಪಿ ಸೇರುತ್ತಾರೆ ಎನ್ನುವ ಗುಮಾನಿ ಹಬ್ಬಿತ್ತು. ಇದಕ್ಕೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯದುವೀರ್ ಅವರನ್ನು ಭೇಟಿ ಮಾಡಿರುವುದು ಮತ್ತಷ್ಟು ಪುಷ್ಠಿ ನೀಡಿತ್ತು. ಬಳಿಕ ಈ ಗಾಳಿ ಸುದ್ದಿಗೆ ಕಿವಿಗೊಡಬೇಡಿ. ಯಾವುದೇ ಕಾರಣಕ್ಕೂ ನಾವು ರಾಜಕೀಯಕ್ಕೆ ಬರೋದಿಲ್ಲ ಎಂದು ಯದುವೀರ್​​ ಸ್ಪಷ್ಟನೆ ನೀಡಿದರು.

ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಕ್ಷೇತ್ರದಲ್ಲಿ ಸಿ.ಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬಿ ಪತ್ನಿ ಸುಮಲತಾ ಅಬ್ಬರದ ಪ್ರಚಾರ ಮಾಡುವ ಮೂಲಕ ಮತಬೇಟೆ ಆರಂಭಿಸಿದ್ದಾರೆ. ಕಾಂಗ್ರೆಸ್​​-ಜೆಡಿಎಸ್ ಪಕ್ಷದ ಮೈತ್ರಿ‌ ಅಭ್ಯರ್ಥಿಯಾಗಿ ಕಣದಲ್ಲಿರುವ ನಿಖಿಲ್ ಕಾರ್ಯಕರ್ತರ ಜತೆಗೆ ಪ್ರಚಾರ ಮಾಡುತ್ತಿದ್ದರೇ, ಪಕ್ಷೇತರ ಅಭ್ಯರ್ಥಿ ಸುಮಲತಾ ತನ್ನ ಪತಿ ಅಂಬರೀಶ್​​​​ ಅಭಿಮಾನಿಗಳು ಮತ್ತು ಕೈ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಸುಮಲತಾರಿಗೆ ವಿವಿಧ ಪಕ್ಷಗಳ ಮುಖಂಡರು ಬೆಂಬಲ ನೀಡುವ ಭರವಸೆ ನೀಡುತ್ತಿದ್ದಾರೆ. ಹಾಗಾಗಿ ಸಹಜವಾಗಿಯೇ ಜೆಡಿಎಸ್ ಪಾಳೆಯಲ್ಲಿ ದುಗುಡ ಹೆಚ್ಚಾಗಿದೆ.

ಕಾಂಗ್ರೆಸ್​​ ನಾಯಕರ ಜತೆಗೆ ನಟ ದರ್ಶನ್​ ಮತ್ತು ಯಶ್​​ ಕೂಡ ಸುಮಲತಾ ಬೆನ್ನಿಗೆ ನಿಂತಿದ್ಧಾರೆ. ತಮ್ಮ ಸ್ವಂತ ಬಲದಿಂದಲೇ ಜೆಡಿಎಸ್ ಅನ್ನು ಸೋಲಿಸಲು ಸುಮಲತಾ ಮುಂದಾಗಿದ್ದಾರೆ.

Comments are closed.