ಕರ್ನಾಟಕ

ಧಾರವಾಡ ಟಿಕೆಟ್‌ ರೇಸ್‌ಗೆ ಹೊಸ ಪ್ರವೇಶ!: ವಿನಯ್‌ ಕುಲಕರ್ಣಿಗೆ ಢವ ಢವ!

Pinterest LinkedIn Tumblr


ಬೆಂಗಳೂರು: ತೀವ್ರ ಕಗ್ಗಂಟಾಗಿರುವ ಧಾರವಾಡ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆ ಬಹುಶಃ ಮಂಗಳವಾರ ಆಗುವ ಸಾಧ್ಯತೆ ಇದೆ.

ದಾವಣಗೆರೆ ಹಾಗೂ ಧಾರವಾಡ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಆಖೈರುಗೊಳಿಸಲು ಕಾಂಗ್ರೆಸ್‌ ಹೈಕಮಾಂಡ್‌ ಸೋಮವಾರ ರಾಜ್ಯ ನಾಯಕರ ವೈಯಕ್ತಿಕ ಅಭಿಪ್ರಾಯವನ್ನು ಸೋಮವಾರ ಸಂಗ್ರಹಿಸಿದೆ. ಬಹುತೇಕ ಮಂಗಳವಾರ ಹೆಸರು ಪ್ರಕಟಗೊಳ್ಳುವ ಸಾಧ್ಯತೆ ಇದೆ. ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇದ್ದು, ಧಾರವಾಡದಲ್ಲಿ ಪ್ರೊ| ಐ.ಜಿ. ಸನದಿ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಮಧ್ಯೆ ಇನ್ನೂ ಪೈಪೋಟಿ ನಡೆದಿದೆ.

ಧಾರವಾಡದಲ್ಲಿ ಸನದಿ?:

ಧಾರವಾಡದಲ್ಲಿ ಈಗ ಪುತ್ರ ಶಾಕೀರ್‌ ಸನದಿ ಬದಲು ಮಾಜಿ ಸಂಸದ ಪ್ರೊಐ.ಜಿ. ಸನದಿ ಅವರೇ ಟಿಕೆಟ್‌ ಕಸರತ್ತಿನ ಅಖಾಡಕ್ಕೆ ಧುಮುಕಿದ್ದಾರೆ. ಇಲ್ಲಿ ಸನದಿ ಅವರಿಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಪೈಪೋಟಿ ನೀಡುತ್ತಿದ್ದು, ಟಿಕೆಟ್‌ಗಾಗಿ ತೀವ್ರ ಲಾಬಿ ನಡೆಸಿದ್ದಾರೆ. ಈ ಕ್ಷೇತ್ರದ ಟಿಕೆಟ್‌ ಅನ್ನು ಮುಸ್ಲಿಮರಿಗೆ ನೀಡಬೇಕು ಎಂಬ ತೀವ್ರ ಒತ್ತಡವಿದೆ. ಒಂದು ವೇಳೆ ಈ ಕ್ಷೇತ್ರ ಮುಸ್ಲಿಮರಿಗೆ ನೀಡುವುದು ಎಂದು ನಿರ್ಧಾರವಾದರೆ ಆಗ ಐ.ಜಿ. ಸನದಿ ಅವರಿಗೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಶಾಮನೂರು ಬದಲು ದಾವಣಗೆರೆಗೆ ಮಂಜಪ್ಪ?:

ತೀವ್ರ ಕಗ್ಗಂಟು ಸೃಷ್ಟಿಸಿರುವ ದಾವಣಗೆರೆ ಲೋಕಸಭಾ ಕ್ಷೇತ್ರದ ವಿಚಾರದಲ್ಲಿ ಕಡೆಗೂ ಶಾಮನೂರು ಕುಟುಂಬದ ಮಾತಿಗೆ ಮನ್ನಣೆ ದೊರೆಯುವ ಸಾಧ್ಯತೆ ಹೆಚ್ಚಿದ್ದು, ಅಭ್ಯರ್ಥಿಯಾಗಿ ಕುರುಬ ಸಮುದಾಯದ ಮಂಜಪ್ಪ ಅವರು ಆಯ್ಕೆ ಸಂಭವ ಹೆಚ್ಚು ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಕಾಂಗ್ರೆಸ್‌ ನಾಯಕತ್ವ ಕಡೆ ಕ್ಷಣದವರೆಗೂ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಸ್ಪರ್ಧಿಸಬೇಕು. ಇದಾಗದ ಪಕ್ಷದಲ್ಲಿ ಮತ್ತೊಬ್ಬ ಲಿಂಗಾಯತ ಅಭ್ಯರ್ಥಿಯನ್ನು ಹುಡುಕಿ ಅವರಿಗೆ ಟಿಕೆಟ್‌ ನೀಡಲಾಗುವುದು ಎಂದೇ ಹೇಳಿತ್ತು. ಈ ದಿಸೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಸಹೋದರನ ಪುತ್ರರಾದ ತೇಜಸ್ವಿ ಪಟೇಲ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿತ್ತು.

ಇನ್ನು ಶಾಮನೂರು ಕುಟುಂಬವು, ‘ನಾವು ಸ್ಪರ್ಧಿಸುವುದಿಲ್ಲ. ನಮ್ಮ ಬದಲಾಗಿ ಕುರುಬ ಸಮಾಜದವರಾದ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜಪ್ಪ ಅವರಿಗೆ ಟಿಕೆಟ್‌ ನೀಡಬೇಕು’ ಎಂದು ಪಟ್ಟು ಹಿಡಿದಿದ್ದರು. ಕಡೆಗೂ ಶಾಮನೂರು ಕುಟುಂಬದ ಕೈ ಮೇಲಾಗಿದ್ದು, ಅವರು ಸೂಚಿಸಿರುವ ಮಂಜಪ್ಪ ಅವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Comments are closed.