ಕರ್ನಾಟಕ

ಪತಿಯ ವರ್ಚಸ್ಸು ಮೀರಿ ಬೆಳೆದ ಬಾಗಲಕೋಟೆಯ ಸ್ಟೈಲಿಶ್​​ ರಾಣಿ ವೀಣಾ ಕಾಶಪ್ಪನವರ್​

Pinterest LinkedIn Tumblr


ಬಾಗಲಕೋಟೆ: “ರಾಜಕೀಯ ಎಂದರೆ ನನಗೆ ಆಗದು. ಮಾವ ಎಸ್​.ಆರ್.​ ಕಾಶಪ್ಪನವರ್​​ ಸಚಿವರಾಗಿ, ಶಾಸಕರಾಗಿ ರಾಜ್ಯದಲ್ಲಿ ಹೆಸರು ಮಾಡಿದರೂ ರಾಜಕೀಯದೆಡೆಗಿನ ಪ್ರೀತಿ ಅಷ್ಟಕಷ್ಟೆಯಿತ್ತು. ಗಂಡ ವೈದ್ಯ​ನಾಗಿದ್ದು, ರಾಜಕೀಯಕ್ಕೆ ಹೋಗುವುದಿಲ್ಲ ಎಂದಿದ್ದರು. ಇದರಿಂದಾಗಿಯೇ ನಾನು ಅವರನ್ನು ಮದುವೆಯಾದೆ. ಗೃಹಿಣಿಯಾಗಿ ಎರಡು ಮಕ್ಕಳ ಜಗತ್ತಿನಲ್ಲಿ ಬದುಕುತ್ತಿದ್ದ ನನ್ನ ಜೀವನ ಬದಲಾಗಿದ್ದು ಆ ಒಂದು ಕ್ಷಣ…” -ಇದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ವೀಣಾ ಕಾಶಪ್ಪನವರು ಈ ಹಿಂದೆ ಖಾಸಗಿ ಮಾಧ್ಯಮದಲ್ಲಿ ಹೇಳಿದ ಮಾತು.

ಸಾಮಾನ್ಯ ಗೃಹಿಣಿಯಾಗಿದ್ದ ವೀಣಾ ಕಾಶಪ್ಪನವರು, ರಾಜಕೀಯ ಇಷ್ಟಇಲ್ಲ ಎನ್ನುತ್ತಲೇ, ಈಗ ರಾಜ್ಯ ರಾಜಕೀಯದಲ್ಲಿ ತನ್ನದೇ ವರ್ಚಸ್ಸು ಹೊಂದಿರುವ ನಾಯಕಿ ಈಗ, ರಾಷ್ಟ್ರ ರಾಜಕೀಯಕ್ಕೆ ಪ್ರವೇಶ ಮಾಡಲು ಸಿದ್ದರಾಗಿದ್ದಾರೆ.

ಸಾಮಾನ್ಯ ಉದ್ಯಮಿ ಕುಟುಂಬದಲ್ಲಿ ಬೆಳೆದ ವೀಣಾ ರಾಜಕೀಯದಲ್ಲಿ ಆದಾಗಲೇ ಹೆಸರು ಮಾಡಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್​.ಆರ್.​ ಕಾಶಪ್ಪನವರ್ ಅವರ ಕುಟುಂಬಕ್ಕೆ ಸೊಸೆಯಾಗಿ ಬಂದವರು. ವಿಜಯಾನಂದ ಕಾಶಪ್ಪನವರ್ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ರಾಜಕೀಯ ಜಂಜಾಟಗಳಿಂದ ದೂರ ಉಳಿದವರು. ಆದರೆ, 2002ರಲ್ಲಿ ಎಸ್.ಆರ್. ಕಾಶಪ್ಪನವರ್​ ಕಾರು ಅಪಘಾತದಿಂದ ನಿಧನವಾದ ನಂತರ ಅವರ ಪತ್ನಿ ಗೌರಮ್ಮ ಮತ್ತು ಮಗ ಇಬ್ಬರೂ ಅನಿವಾರ್ಯವಾಗಿ ರಾಜಕೀಯಕ್ಕೆ ಬರಬೇಕಾಯಿತು. ಮಗ ವಿಜಯಾನಂದ ಕಾಶಪ್ಪನವರ್ ಶಾಸಕರಾಗಿ ಆಯ್ಕೆ ಕೂಡ ಆದರು. ​ವಿಜಯಾನಂದರವರು ಶಾಸಕರಾಗಿದ್ದಾಗ ಜಿಲ್ಲಾ ಪಂಚಾಯತ್​ ಅಧ್ಯಕ್ಷ ಸ್ಥಾನದ ಮೂಲಕ ವೀಣಾ ಕಾಶಪ್ಪನವರ್​ ಅವರನ್ನೂ ರಾಜಕೀಯಕ್ಕೆ ಕರೆ ತಂದರು.

ಮಾವ, ಗಂಡನ ವರ್ಚಸ್ಸು ಮೀರಿ ಬೆಳೆದ ವೀಣಾ

ಅನೀರಿಕ್ಷಿತವಾಗಿ ರಾಜಕೀಯಕ್ಕೆ ಬಂದರೂ ತಮ್ಮ ಹುದ್ದೆಗೆ ನ್ಯಾಯ ಒದಗಿಸಿ, ಮಾವ ಗಂಡನ ವರ್ಚಸ್ಸು ಮೀರಿ ಬೆಳೆದವರು ವೀಣಾ ಕಾಶಪ್ಪನವರು. ಕೇವಲ ರಬ್ಬರ್​ ಸ್ಟಾಂಪ್​ ಆಗದೇ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟರು. ಅವರು ಮಾಡಿದ ಜನಪ್ರಿಯ ಕಾರ್ಯಗಳು ಈಗ ಲೋಕಸಭಾ ಟಿಕೆಟ್​ ಪಡೆಯುವಲ್ಲಿ ಯಶಸ್ವಿಯಾಗಲು ಕಾರಣವಾಗಿದೆ.

ಪದವೀಧರೆಯಾಗಿ ಬೆಂಗಳೂರಿನ ಜೀವನಕ್ಕೆ ಒಗ್ಗಿದ್ದ ವೀಣಾ 2016 ಮೇ 7ರಂದು ಜಿಲ್ಲಾ ಪಂಚಾಯತ್​ ಅಧ್ಯಕ್ಷೆಯಾಗುತ್ತಿದ್ದಂತೆ ಮಾಡಿದ ಮೊದಲ ಕೆಲಸ ಬಾಗಲಕೋಟೆಗೆ ಸ್ಥಳಾಂತರ. ಅಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸಿದ ವೀಣಾ, ಗ್ರಾಮ ವಾಸ್ತವ್ಯ ನಡೆಸಿ ಜನಪ್ರಿಯರಾದರು. ಹಳ್ಳಿಗರ ಬದುಕು ಬವಣೆ ಅರಿತು ಅವರಿಗೆ ಬಯಲು ಬಹಿರ್ದೆಸೆ ಕುರಿತು ಅರಿವು ಮೂಡಿಸಿದರು. ಮುಂಜಾನೆ ಸಮಯದಲ್ಲಿ ಬಯಲಿಗೆ ಹೋಗುತ್ತಿದ್ದ ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಮೂಡಿಸಿ ಸರ್ಕಾರದ ವತಿಯಿಂದ ಶೌಚಾಲಯ ಕಟ್ಟಿಸುವಲ್ಲಿ ಸಹಾಯ ಮಾಡಿದರು.

ಮೆದು ಮಾತಿನ ಮೂಲಕವೇ ಜಿಲ್ಲೆಯ ಜನರಿಗೆ ಹತ್ತಿರವಾಗಿದ್ದ ಇವರು ವಿಪಕ್ಷ ನಾಯಕರನ್ನೂ ತಮ್ಮ ಸೌಮ್ಯ ಸ್ವಭಾವದ ಮೂಲಕವೇ ಗೆದ್ದರು. ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ವೀಣಾ ಕಾಶಪ್ಪನವರು ಅಧಿಕಾರಿಗಳ ಪಾಲಿಗೆ ಖಡಕ್​ ನಾಯಕಿಯಾದರು.

ಸ್ಟೈಲಿಶ್​ ನಾಯಕಿ

ವೀಣಾ ಜನನಾಯಕಿ ಜೊತೆ ಜಿಲ್ಲೆಯ ಅಭಿಮಾನಿಗಳಲ್ಲಿ ಸ್ಟೈಲಿಶ್​, ಸ್ಟಾರ್​ ನಾಯಕಿ ಎಂದೇ ಗುರುತಿಸಿಕೊಂಡವರು. ಇಳಕಲ್​ ಸೀರೆ ಎಂದರೆ ಅಜ್ಜಿಗಳಿಗೆ ಮಾತ್ರ ಎನ್ನುತ್ತಿದ್ದ ಯುವತಿಯರ ಮುಂದೆ ಅದನ್ನೇ ಟ್ರೆಂಡ್​ ಆಗಿ ರೂಪಿಸಿದ ಇವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಯಾವುದೇ ಕಾರ್ಯಕ್ರಮವಿರಲಿ ಅಚ್ಚುಕಟ್ಟಾಗಿ ಅಲಂಕಾರಗೊಂಡು ಜನರ ಮಧ್ಯೆ ಎದ್ದು ಕಾಣುವಂತೆ ಇರುವ ಇವರು ಯಾವುದೇ ಸ್ಟಾರ್​ ನಟಿಯರಿಗಿಂತ ಕಡಿಮೆ ಇಲ್ಲ ಎಂಬಂತೆ ಜಿಲ್ಲೆಯಲ್ಲಿ ಫೇಮಸ್ಸಾಗಿದ್ದಾರೆ.

ಸಿದ್ದರಾಮಯ್ಯ ಆಶೀರ್ವಾದ:

ಕೇವಲ ಜಿಲ್ಲಾ ಪಂಚಾಯತ್​ ಆಗಿದ್ದ ವೀಣಾ ಕಾಶಪ್ಪನವರು ಲೋಕಸಭೆ ಟಿಕೆಟ್​ ಪಡೆಯುವಷ್ಟು ಬೆಳೆಯಲು ಕಾರಣವಾಗಿದ್ದು ಅವರ ವರ್ಚಸ್ಸು. ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಪಿಸಿ ಗದ್ದಿಗೌಡರ್​ ವಿರುದ್ಧ ಕೈ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಯಾಗಿ ಕಂಡು ಬಂದವರು ವೀಣಾ. ಈ ಹಿಂದೆ ವೀಣಾ ಕೂಡ ತನಗೆ ರಾಜ್ಯ ರಾಜಕೀಯಕ್ಕಿಂತ ರಾಷ್ಟ್ರ ರಾಜಕಾರಣದಲ್ಲಿ ಒಲವು. ಅದೇ ತನ್ನ ಗುರಿ ಎಂದಿದ್ದರು. ಇದಕ್ಕಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಕೂಡ ಮಾಡಿದ್ದರು.

ಕಾಶಪ್ಪನವರ್ ಕುಟುಂಬಕ್ಕೆ ಮೊದಲಿನಿಂದಲೂ ಕಾಂಗ್ರೆಸ್​ ಪಕ್ಷದ ಒಂದು ಬಣ ವಿರೋಧಿಸಿಕೊಂಡೇ ಬಂದಿತ್ತು. ಎಸ್​.ಆರ್​. ಪಾಟೀಲ್​ ಸೇರಿದಂತೆ ಹಲವರು ಅಪಸ್ವರ ಎತ್ತಿದ್ದರು. ಆದರೆ, ಬದಾಮಿ ಶಾಸಕರಾಗಿರುವ ಸಿದ್ದರಾಮಯ್ಯ ಅವರು ಈ ಬಾರಿ ಕ್ಷೇತ್ರವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಕೂಗುಗಳನ್ನು ಹತ್ತಿಕ್ಕಿ ಒಟ್ಟಾಗಿ ವೀಣಾ ಪರ ಕೆಲಸ ಮಾಡುವಂತೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಈ ಭಾಗದಲ್ಲಿ ಈ ಹಿಂದೆ ಎಸ್​ಆರ್​ ಕಾಶಪ್ಪನವರ್ ಅವರು ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರಬಲಗೊಳಿಸಿದವರು. ಪಂಚಮ ಪೀಠಗಳ ಬಾಂಧವ್ಯವನ್ನು ಉತ್ತಮಗೊಳಿಸಿದ್ದು ಕಾಶಪ್ಪನವರ್ ಕುಟುಂಬ. ಈ ಹಿನ್ನೆಲೆಯಲ್ಲಿ ಜಾತಿ ಲೆಕ್ಕಾಚಾರ ಕೂಡ ಅವರಿಗೆ ಕೈ ಹಿಡಿಯುವ ಸಾಧ್ಯತೆ ಇದೆ. ಇನ್ನುಳಿದಂತೆ ಪ್ರಬಲವಾಗಿರುವ ಜಾತಿ ಎಂದರೆ ಅದು ಕುರುಬರು. ಈಗಾಗಲೇ ಇಲ್ಲಿ ಸಿದ್ದರಾಮಯ್ಯ ಪ್ರಬಲ ನಾಯಕರಾಗಿದ್ದು ಆ ಮತಗಳು ವೀಣಾ ಗೆಲುವಿಗೆ ಸಹಾಯಕವಾಗುವ ಸಾಧ್ಯತೆ ಇದೆ.

Comments are closed.