
ನವದೆಹಲಿ: “ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶದ ಬಡವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ಸಹಾಯಧನ ಮಾಡಲಿದ್ದೇವೆ. ‘ನ್ಯಾಯ ಯೋಜನೆ’ ಮೂಲಕ ಕಡುಬಡವರಿಗೆ ವಾರ್ಷಿಕ 72 ಸಾವಿರ ರೂಪಾಯಿ ಹಣ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಬಡವರು ನೆನಪಾಗುತ್ತಾರೆ” ಎಂದು ಒರಿಸ್ಸಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಒರಿಸ್ಸಾದ ಕಾಲಾಹಂಡಿ ಪ್ರದೇಶದ ಭವಾನಿಪಟ್ಟಣ ಜಿಲ್ಲೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ವಿಜಯ್ ಸಂಕಲ್ಪ್ ಸಮಾವೇಶ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಿದ್ದರು. ಇಲ್ಲಿ ವೇದಿಕೆ ಮೇಲೆ ಸಮಾವೇಶವನ್ನುದ್ದೇಶಿಸಿ ಮಾತಾಡಿದ ಪ್ರಧಾನಿ, ಚುನಾವಣೆಯ ಹೊತ್ತಲ್ಲಿ ಮಾತ್ರ ವಿಪಕ್ಷಗಳಿಗೆ ಬಡವರ ನೆನಪಾಗುತ್ತದೆ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ತನ್ನ ಪ್ರಣಾಳಿಕೆ ಬಿಡುಗಡೆ ವೇಳೆ ಬಡವರಿಗೆ ವಾರ್ಷಿಕ 72 ಸಾವಿರ ಸಹಾಯಧನ ಮಾಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ್ದಾರೆ.
ಹೀಗೆಯೇ ಮಾತು ಮುಂದುರೆಸಿದ ಪ್ರಧಾನಿ ಮೋದಿ, ಕೇಂದ್ರದಿಂದ ಒಂದು ರೂಪಾಯಿ ನೀಡಿದರೇ ಬಡವರಿಗೆ ಕೇವಲ 15 ಪೈಸೆ ತಲುಪುತ್ತದೆ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಈ ಹಿಂದೆಯೇ ಹೇಳಿದ್ದರು. ಬಳಿಕ ದಶಕಗಳ ಕಾಲ ಆಡಳಿತ ನಡೆಸಿದ್ದ ಕಾಂಗ್ರೆಸ್ ಕೂಡ ಇದನ್ನೇ ಒಪ್ಪಿಕೊಂಡಿತ್ತು. ಕಾಂಗ್ರೆಸ್ ಇಲ್ಲಿಯವರೆಗೂ ಒರಿಸ್ಸಾಗೆ ನೀಡಿರುವುದು ಕೇವಲ 1 ರೂಪಾಯಿ ಮಾತ್ರ. ಇಂತಹ ಸುಳ್ಳು ಭರವಸೆಗಳನ್ನು ನೀವು ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ಹಿಂದೆಯೇ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಈ ದೇಶದ ಬಡವರಿಗೆ ತಿಂಗಳಿಗೆ 6 ಸಾವಿರ ರೂ. ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಜೈಪುರದಲ್ಲಿ ಕಾಂಗ್ರೆಸ್ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಬಡವರಿಗೆ 6 ಸಾವಿರ ರೂ ತಿಂಗಳಿಗೆ ನೀಡುತ್ತೇವೆ. ಇದು ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ಕರೆದಿದ್ದಾರೆ.
ನಮಗೆ ಮತಹಾಕಿ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತನ್ನಿ. ನಮ್ಮ ಸರ್ಕಾರ ಬಂದಲ್ಲಿ ಖಂಡಿತ ಬಡವರ ಪರ ಕೆಲಸ ಮಾಡಲಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರಿಗೆ ಕೇವಲ ವರ್ಷಕ್ಕೆ 6 ಸಾವಿರ ರೂ ಕೊಡುವ ಮೂಲಕ ಅನ್ನದಾತರಿಗೆ ಅವಮಾನ ಮಾಡುತ್ತಿದೆ. ನಾವು ರೈತ ಸಮುದಾಯದ ಪರ ನಿಲ್ಲುತ್ತೇವೆ ಎಂದಿದ್ದರು.
ಇನ್ನು ದೇಶದ ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಿದ್ದೇವೆ. ಸಂಪೂರ್ಣ ಬಡತನ ನಿರ್ಮೂಲನೆ ನಮ್ಮ ಪಕ್ಷದ ಉದ್ದೇಶ. ಬಡತನ ತೊಡೆದು ಹಾಕಲು ಯೋಜನೆ ಹಾಕಿಕೊಂಡಿದ್ದೇವೆ. ಜಗತ್ತಿನ ಯಾವುದೇ ಸರ್ಕಾರವೂ ಇಂತಹ ಯೋಜನೆ ಜಾರಿ ಬಗ್ಗೆ ಯೋಚಿಸಿಲ್ಲ. ಹೀಗಾಗಿ ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಈ ಯೋಜನೆ ಜಾರಿಗೊಳಿಸುತ್ತೇವೆ ಎಂದು ರಾಹುಲ್ ಗಾಂಧಿಯವರು ವಿಶ್ವಾಸ ವ್ಯಕ್ತಪಡಿಸಿದ್ದರು.
Comments are closed.