ಕರ್ನಾಟಕ

ರಾಹುಲ್ ಗಾಂಧಿ ನನ್ನ ವಿರುದ್ಧ ಮಾಡಿರುವ ಕಪ್ಪ ನೀಡಿದ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನ್ನ ವಿರುದ್ಧದ ಬಿಜೆಪಿ ಕೇಂದ್ರ ನಾಯಕರಿಗೆ 1800 ಕೋಟಿ ರುಪಾಯಿ ಕಪ್ಪ ನೀಡಿದ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸವಾಲು ಹಾಕಿದ್ದಾರೆ.

ಇಂದು ನಗರದಲ್ಲಿ ನಡೆದ ಕಾಂಗ್ರೆಸ್​-ಜೆಡಿಎಸ್​ ಜಂಟಿ ಸಮಾವೇಶದಲ್ಲಿ ರಾಹುಲ್ ​ಗಾಂಧಿ ಬಿ.ಎಸ್ ಯಡಿಯೂರಪ್ಪ ಅವರ 1800 ಕೋಟಿ ರು. ಡೈರಿ ವಿಚಾರ ಪ್ರಸ್ತಾಪಿಸಿದ್ದರು.

ಇದರ ಬೆನ್ನಲ್ಲೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್ ವೈ, 1800 ಕೋಟಿ ರು.ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಹೇಳಿದ್ದಾರೆ. ಆದರೆ ಮತ್ತೆ ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಕಳಂಕ ರಹಿತ ನಾಯಕಾರದ ಅರುಣ್​ ಜೇಟ್ಲಿ, ನಿತಿನ್​ ಗಡ್ಕರಿ, ರಾಜನಾಥ್​ ಸಿಂಗ್​ ಮತ್ತು ನನಗೆ ಅವಮಾನ ಮಾಡುತ್ತಿದ್ದಾರೆ. ಇಂಥ ಅವಹೇಳನ ಒಪ್ಪುವುದಿಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ಇಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರಾಷ್ಟ್ರದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ. ರಾಹುಲ್‌ ಗಾಂಧಿ ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ನೀಡುವ ಇಂತಹ ಅಸಂಬದ್ಧ ಹೇಳಿಕೆಗಳು ಅವರ ಘನತೆಗೆ ತಕ್ಕದ್ದಲ್ಲ. ರಾಹುಲ್‌ ಗಾಂಧಿ ಅವರು, ತಮ್ಮ ಹೇಳಿಕೆಗೆ ಬದ್ಧರಾಗಿ, ನಮ್ಮ ಮತ್ತು ನಮ್ಮ ನಾಯಕರ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಅವರ ಹುದ್ದೆಗೆ ರಾಜೀನಾಮೆ ನೀಡಬೇಕು. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಈ ಸವಾಲನ್ನು ಅವರು ಸ್ವೀಕರಿಸಬೇಕು. ಸವಾಲು ಸ್ವೀಕರಿಸಿ ಆಪಾದನೆ ಸಾಬೀತುಪಡಿಸಿದ್ರೆ ನಾನು ನನ್ನ ರಾಜಕೀಯ ಜೀವನದಿಂದಲೇ ನಿವೃತ್ತಿ ಪಡೆಯುತ್ತೇನೆ ಅಂತಾ ಯಡಿಯೂರಪ್ಪ ಸವಾಲ್​ ಹಾಕಿದ್ದಾರೆ.

ಈ ದೇಶದಲ್ಲಿ ಸಂವಿಧಾನ ಬದ್ಧವಾಗಿ ಸ್ಥಾಪಿತವಾದ ತನಿಖಾ ಸಂಸ್ಥೆಗಳ ಮೇಲೆ ರಾಹುಲ್​ ಗಾಂಧಿಯವರಿಗೆ ನಂಬಿಕೆ ಇಲ್ಲ. ಐಟಿ ಅಧಿಕಾರಿಗಳೇ ಆ ಡೈರಿ ನಕಲಿ ಎಂದರೂ ಮತ್ತೆ ಅದನ್ನೇ ಹೇಳುತ್ತಾರೆ ಎಂದರೆ ಅವರಿಗೆ ಕಾನೂನಿನ ಮೇಲೆ ಕೂಡ ನಂಬಿಕೆ ಇಲ್ಲ ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.

Comments are closed.