ಕರ್ನಾಟಕ

ಯಡಿಯೂರಪ್ಪನವರಿಗೆ ವಿಶ್ರಾಂತಿ ಕೊಡಿ; ಶಿವಮೊಗ್ಗ ಜನರಲ್ಲಿ ಡಿಕೆಶಿ ಮನವಿ!

Pinterest LinkedIn Tumblr


ಶಿವಮೊಗ್ಗ: ‘ಯಡಿಯೂರಪ್ಪನವರಿಗೆ ವಿಶ್ರಾಂತಿಯ ಅಗತ್ಯವಿದೆ. ನೀವೆಲ್ಲರೂ ಅವರಿಗೆ ವಿಶ್ರಾಂತಿ ಕೊಡುವಿರೆಂದು ನಂಬಿದ್ದೇನೆ. ಮುಂದಿನ ದಿನಗಳಲ್ಲಿ ಅವರ ಪಾರ್ಟಿಯವರೇ ಈ ಮಾತನ್ನು ಹೇಳಲಿದ್ದಾರೆ. ನೀವು ಕೊಡದಿದ್ದರೆ ಕೇಂದ್ರದ ನಾಯಕರೇ ಯಡಿಯೂರಪ್ಪನವರಿಗೆ ವಿಶ್ರಾಂತಿ ನೀಡಲಿದ್ದಾರೆ’ ಇದು ಶಿವಮೊಗ್ಗದಲ್ಲಿ ಕಾಂಗ್ರೆಸ್​ ಸಚಿವ ಡಿ.ಕೆ. ಶಿವಕುಮಾರ್​ ಮತಯಾಚನೆ ಮಾಡಿದ ಪರಿ.

ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಡಿ.ಕೆ. ಶಿವಕುಮಾರ್​, ಇದು ಬದಲಾವಣೆಯ ಕಾಲ. ನಿಮ್ಮ ಸೇವೆಗೆ ಯಡಿಯೂರಪ್ಪನವರ ಮಗನ ಬದಲು ಮಧು ಬಂಗಾರಪ್ಪನವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸದ್ಯ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಟ್ಟಾಗಿರಬೇಕೆಂದು ಸೂಚನೆ ನೀಡಿದ್ದೇನೆ. ನನ್ನ ಗುರಿ ಜಯದ ಕಡೆ ಮಾತ್ರ. ಯಡಿಯೂರಪ್ಪನ ಮಗ ನಾಮಪತ್ರ ಸಲ್ಲಿಕೆಗೆ ಬರುವ ಹೆಲಿಕ್ಯಾಪ್ಟರ್ ಟೇಕ್ ಆಫ್ ಆಗಿರಲಿಲ್ಲ. ಇದರಿಂದ ಒಂದು ಸಂದೇಶ ಹೋಗಿದೆ. ಅದನ್ನು ಜಿಲ್ಲೆಯ ಬುದ್ಧಿವಂತರು ತಿಳಿದುಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಇದೇವೇಳೆ ನೂರು ಜನ ಡಿಕೆಶಿ ಬಂದರೂ ಏನೂ ಮಾಡೋಕೆ ಆಗುವುದಿಲ್ಲ ಎಂಬ ಆಯನೂರು ಮಂಜುನಾಥ್ ಹೇಳಿಕೆಗೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್​, ಅಂಥವರಿಗೆಲ್ಲ ನಾನು ಉತ್ತರ ಕೊಡುವುದಿಲ್ಲ. ಅವರಿಗೆ ನಮ್ಮ ಹುಡುಗರೇ ಉತ್ತರ ಕೊಡುತ್ತಾರೆ. ಆ ಮಾತನ್ನು ಯಡಿಯೂರಪ್ಪನವರಾಗಲೀ, ಈಶ್ವರಪ್ಪರಾಗಲೀ, ಬಿ.ವೈ. ರಾಘವೇಂದ್ರನವರಾಗಲೀ ಹೇಳಲಿ ನೋಡೋಣ. ಅವರಿಗೆ ಏಪ್ರಿಲ್​ 3ರವರೆಗೆ ಸಮಯ ಕೊಡುತ್ತೇನೆ. ತಾಕತ್ತಿದ್ದರೆ ಈ ಮಾತನ್ನು ಅವರು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ನಾವು ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುವವರು. ಬಂಗಾರಪ್ಪನವರ ಯೋಜನೆಗಳನ್ನು ಜಿಲ್ಲೆಯಲ್ಲಿ ಜನರು ಈಗಲೂ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಉದ್ಯೋಗ ಸೃಷ್ಟಿಯಾಗದಿರುವುದಕ್ಕೆ ಯುವಜನಾಂಗ ಪರಿತಪಿಸುವಂತಾಗಿದೆ. ಬಿಜೆಪಿ ನುಡಿದಂತೆ ನಡೆಯಲಿಲ್ಲ. ಯಡಿಯೂರಪ್ಪನವರನ್ನು ಆಯ್ಕೆ ಮಾಡಿದ ಅಡಿಕೆ ಬೆಳೆಗಾರರ ಬುನಾದಿಗೆ ಕೈ ಹಾಕಿರುವುದು ಸರಿಯಲ್ಲ. ಇನ್ನೇನು 35 ದಿನಗಳಲ್ಲಿ ಬಿಜೆಪಿ ಸರ್ಕಾರದ ಅಧಿಕಾರಾವಧಿ ಮುಗಿಯಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚರ್ಚೆ ನಡೆಸಿ, ರೈತರಿಗಾಗಿ ಹೊಸ ಕಾರ್ಯಕ್ರಮ ರೂಪಿಸಲಾಗುವುದು. ಶಿವಮೊಗ್ಗ ಜಿಲ್ಲೆಗೆ ಹೊಸತನ ಬರಬೇಕು. ಈ ಬಾರಿ ಬದಲಾವಣೆಗೆ ಅವಕಾಶ ನೀಡಿ ಎಂದಿದ್ದಾರೆ.

Comments are closed.