ರಾಷ್ಟ್ರೀಯ

ವಯನಾಡ್​ನಲ್ಲಿ ಸ್ಪರ್ಧಿಸಿರುವ ರಾಹುಲ್ ಗಾಂಧಿ ಸೋಲಿಸಲು ಕಮ್ಯೂನಿಸ್ಟರಿಂದ ಪಣ!

Pinterest LinkedIn Tumblr


ನವದೆಹಲಿ: ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡ್ ಈ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ವಯನಾಡ್​ನಲ್ಲಿ ಪ್ರಮುಖ ವಿಪಕ್ಷ ಸಿಪಿಐನ ಪಿ.ಪಿ. ಸುನೀರ್ ಅವರು ಕಣದಲ್ಲಿದ್ದಾರೆ. ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಎಸ್​ಪಿ-ಬಿಎಸ್​ಪಿ ಅಭ್ಯರ್ಥಿ ಹಾಕಿಲ್ಲ. ಆದರೆ, ವಯನಾಡ್​ನಲ್ಲಿ ಆ ಸ್ಥಿತಿ ಇಲ್ಲ. ಎಲ್​ಡಿಎಫ್​ ಒಕ್ಕೂಟವು ಯಾವುದೇ ಕಾರಣಕ್ಕೂ ವಯನಾಡ್​ನಲ್ಲಿ ಅಭ್ಯರ್ಥಿಯನ್ನು ವಾಪಸ್ ಕರೆಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ವಯನಾಡ್​ನಲ್ಲಿ ರಾಹುಲ್ ನಿಲ್ಲಲು ಕಾರಣ?

ನರೇಂದ್ರ ಮೋದಿ ಅವರು ಉತ್ತರ ಮತ್ತು ದಕ್ಷಿಣ ಭಾರತದ ಮಧ್ಯೆ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ಭಾಷೆ, ಬಣ್ಣ, ಜೀವನಶೈಲಿ, ಆಹಾರಶೈಲಿ, ಉಡುಗೆಶೈಲಿ ಇತ್ಯಾದಿ ವಿಚಾರಗಳಿಂದ ದೇಶವನ್ನ ವಿಭಜಿಸುವ ಶಕ್ತಿಗಳು ರಾರಾಜಿಸುತ್ತಿವೆ. ಅದಕ್ಕಾಗಿ ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ದಕ್ಷಿಣ ನಾಡುಗಳನ್ನೂ ಪ್ರತಿನಿಧಿಸಿ ಭಾರತವನ್ನು ಮುನ್ನಡೆಸಬಯಸಿದ್ದಾರೆ. ಹೀಗಾಗಿ, ವಯನಾಡ್ ಕ್ಷೇತ್ರವನ್ನ ಅವರು ಆರಿಸಿಕೊಂಡಿದ್ಧಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲ ಸ್ಪಷ್ಟಪಡಿಸಿದ್ದಾರೆ.

ಆದರೆ, ದೇಶದಲ್ಲಿ ಏಕತೆ ಸಾಧಿಸಲು ರಾಹುಲ್ ವಯನಾಡ್​ನಲ್ಲಿ ಸ್ಪರ್ಧಿಸುತ್ತಿದ್ಧಾರೆಂಬ ವಾದವನ್ನು ಕೇರಳದ ಕಮ್ಯೂನಿಸ್ಟ್ ಪಕ್ಷ ಒಪ್ಪಿಕೊಳ್ಳಲು ತಯಾರಾಗಿಲ್ಲ. ಕೇರಳದಲ್ಲಿ ಆಡಳಿತಾರೂಢವಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟವು ರಾಹುಲ್ ಗಾಂಧಿ ಮೂಲಕ ಕಮ್ಯೂನಿಸ್ಟರನ್ನ ಹಣಿಯಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ ನಾಯಕರು ಭಾವಿಸಿದ್ದಾರೆ.

ದೇಶಾದ್ಯಂತ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಸಿಪಿಐ ಕೂಡ ಭಾಗಿಯಾಗಿದೆ. ಆದರೆ, ಕೇರಳದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆಂದರೆ ಕಾಂಗ್ರೆಸ್ ಪಕ್ಷದ ಪ್ರಮುಖ ಟಾರ್ಗೆಟ್ ಎಲ್​ಡಿಎಫ್ ಆಗಿದೆ. ಇದಕ್ಕೆ ತಾವು ಅವಕಾಶ ಕೊಡುವುದಿಲ್ಲ. ವಯನಾಡ್​ನಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸುವುದು ನಿಶ್ಚಿತ ಎಂದು ಹಿರಿಯ ಸಿಪಿಐ ಮುಖಂಡ ಪ್ರಕಾಶ್ ಕಾರಟ್ ಹೇಳಿದ್ದಾರೆ.

ವಾರದ ಹಿಂದಿನಿಂದಲೂ ರಾಹುಲ್ ಗಾಂಧಿ ಅವರು ವಯನಾಡ್​ನಲ್ಲಿ ಸ್ಪರ್ಧಿಸುವ ಕುರಿತು ಸುದ್ದಿಗಳಿದ್ದವು. ಅದಾಗಲೇ ಸಿಪಿಐನವರು ಪಿ.ಪಿ. ಸುನೀರ್ ಅವರನ್ನು ಕಣಕ್ಕಿಳಿಸಿಯಾಗಿತ್ತು. ಒಂದು ವೇಳೆ ರಾಹುಲ್ ಅವರು ವಯನಾಡ್​ನಲ್ಲಿ ಸ್ಪರ್ಧಿಸಲು ನಿರ್ಧರಿಸಿದರೆ ಅದು ಕಾಂಗ್ರೆಸ್​ನ ಬಹುದೊಡ್ಡ ಪ್ರಮಾದವಾಗುತ್ತದೆ ಎಂದು ಸುನೀರ್ ಎಚ್ಚರಿಸಿದ್ದರು. ರಾಹುಲ್ ಗಾಂಧಿ ಅವರು ಆತ್ಮವಿಶ್ವಾಸ ಕಳೆದುಕೊಂಡಂತಿದೆ. ಅಮೇಥಿಯಲ್ಲಿ ಸೋಲುವ ಭೀತಿ ಅವರಲ್ಲಿ ಮನೆ ಮಾಡಿದೆ. ಅವರು ವಯನಾಡ್​ನಲ್ಲಿ ನಿಂತರೆ ನಮಗ್ಯಾವ ಹೆದರಿಕೆಯೂ ಇಲ್ಲ ಎಂದು ಸುನೀರ್ ಅವರು ಆರು ದಿನಗಳ ಹಿಂದೆಯೇ ಹೇಳಿದ್ದರು. ಸುನೀರ್ ಅವರು 2004ರ ಲೋಕಸಭೆ ಚುನಾವಣೆಯಲ್ಲಿ ಪೊನ್ನಣಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮುಸ್ಲಿಂ ಲೀಗ್ ಅಭ್ಯರ್ಥಿ ಎದುರು ಸೋಲುಂಡಿದ್ದರು. ಸಮೀರ್ ಅವರಿಗೆ ಇದು ಎರಡನೇ ಲೋಕಸಭೆ ಚುನಾವಣೆಯಾಗಿದೆ.

ಇದೀಗ ವಯನಾಡ್​ನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.

Comments are closed.