ಕರ್ನಾಟಕ

ನಾಮಪತ್ರ ಸಲ್ಲಿಕೆ ಸಂದರ್ಭ ತೆಗೆದ ವಿಡಿಯೋ ಕ್ಯಾಮೆರಾವನ್ನು ಮದುವೆ ಸಮಾರಂಭಕ್ಕೆ ಕಳುಹಿಸಿದ್ದ ಜಿಲ್ಲಾಧಿಕಾರಿ!

Pinterest LinkedIn Tumblr


ಮಂಡ್ಯ: ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ಕುಮಾರಸ್ವಾಮಿ ಅಫಿಡವಿಟ್ ಸಲ್ಲಿಸುವಾಗ ಗೋಲ್​ಮಾಲ್​ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ಜಿಲ್ಲಾಧಿಕಾರಿಯ ಬಳಿ ನಾಮಪತ್ರ ಸಲ್ಲಿಕೆ ವೇಳೆ ಮಾಡಲಾದ ವಿಡಿಯೋ ಚಿತ್ರೀಕರಣ ನೋಡಬೇಕೆಂದು ಕೇಳಿದವು. 2 ದಿನ ಕಾದರೂ ವಿಡಿಯೋ ಸಿಗಲಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಕೇಳಿದಾಗ ನಾಮಪತ್ರ ಸಲ್ಲಿಕೆ ವೇಳೆ ಮಾಡಲಾದ ವಿಡಿಯೋ ಇರುವ ಕ್ಯಾಮೆರಾವನ್ನು ಮದುವೆ ಸಮಾರಂಭದ ವಿಡಿಯೋ ಚಿತ್ರೀಕರಣಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಚುನಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಯುಳ್ಳ ಕ್ಯಾಮೆರಾ ಬಗ್ಗೆ ಹೇಗೆ ಇಷ್ಟು ನಿರಾಸಕ್ತಿ ವಹಿಸುತ್ತಾರೆ? ಎಂದು ಸುಮಲತಾ ಅವರ ಚುನಾವಣಾ ಏಜೆಂಟ್​ ಮದನ್​ ಆಕ್ಷೇಪಿಸುವ ಮೂಲಕ ಜಿಲ್ಲಾಧಿಕಾರಿ ಮಂಜುಶ್ರೀ ಅವರ ಯಡವಟ್ಟನ್ನು ಬಯಲಿಗೆಳೆದಿದ್ದಾರೆ.

ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದಾಗಿನಿಂದ ಇಲ್ಲಿಯವರೆಗೂ ನಡೆದಿರುವ ಕೆಲವು ಘಟನೆಗಳು ಬೇಸರ ತರಿಸಿವೆ. ನನಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎನಿಸುತ್ತಿದೆ. ಆ ವಿಷಯದ ಬಗ್ಗೆ ಸಾಕ್ಷಿ ಹಂಚಿಕೊಳ್ಳಬೇಕೆಂದು ಈ ಸುದ್ದಿಗೋಷ್ಠಿ ಕರೆದಿದ್ದೇನೆ. ನಾಮಪತ್ರ ಸಲ್ಲಿಕೆಯ ವಿಡಿಯೋ ನಮ್ಮ ಕೈಗೆ ಬಂದ ನಂತರ ಅದನ್ನು ನೋಡಿದಾಗ ಅದರಲ್ಲಿ ಪ್ರಮುಖ ಅಂಶಗಳು ಕಟ್​ ಆಗಿತ್ತು. ಆ ವಿಡಿಯೋವನ್ನು ಎಡಿಟ್​ ಮಾಡಿಸಿ ತರಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಇದು ವಿಡಿಯೋ ಚಿತ್ರೀಕರಣ ಮಾಡಿದವನ ಕೈವಾಡ. ಆತನ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿಕೊಳ್ಳುತ್ತೇವೆಂದು ಜಿಲ್ಲಾಧಿಕಾರಿ ಜಾರಿಕೊಂಡಿದ್ದಾರೆ ಎಂದು ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಇಂದು ಮಂಡ್ಯದ ನಿವಾಸದಲ್ಲಿ ಸುಮಲತಾ ಅಂಬರೀಶ್​ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ‘ನಾನು ಮಂಡ್ಯದಲ್ಲಿ ಪ್ರಚಾರ ನಡೆಸಿದ ದಿನ ಇಡೀ ಮಂಡ್ಯದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದೇ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಚಾರದ ದಿನ ಸರ್ಕಾರದಿಂದಲೇ ಅಧಿಕೃತ ಆದೇಶ ಬಂದಿತ್ತು. ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸುವಂತಿಲ್ಲ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡುವುದರಿಂದ ವಿದ್ಯುತ್​ ಸಂಪರ್ಕ ಕಡಿತಗೊಳಿಸುವಂತಿಲ್ಲ ಎಂದು ಎಸ್​ಪಿ ಮೂಲಕ ಅಧಿಕೃತ ಆದೇಶ ಹೊರಡಿಸಿದ್ದರು. ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ ಜೊತೆಗೂ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿ ಕೂಡ ರಾಜಕೀಯ ನಾಯಕನೇ. ಹೀಗಾಗಿ, ನೀತಿಸಂಹಿತೆಯ ಉಲ್ಲಂಘನೆ. ಮುಖ್ಯಮಂತ್ರಿಗಳು ಈ ರೀತಿಯ ಆದೇಶ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಇಂದು ನನ್ನ ಸುದ್ದಿಗೋಷ್ಠಿಯ ಲೈವ್​ ಪ್ರಸಾರವಾಗಬಾರದೆಂದು ಇಂದು ಕೂಡ ಕೇಬಲ್ ಸಂಪರ್ಕ ಕಡಿತಗೊಳಿಸಲಾಗಿದೆ’ ಎಂದು ಸುಮಲತಾ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿ ವಿರುದ್ಧ ಸುಮಲತಾ ಆರೋಪ:

ಸುಮಲತಾ ಅಂಬರೀಶ್​ ಅವರ ಚುನಾವಣಾ ಏಜೆಂಟ್​ ಮದನ್​, ನಾಮಪತ್ರ ಸಲ್ಲಿಕೆ ವೇಳೆ ಆಕ್ಷೇಪ ಸಲ್ಲಿಕೆ ಮಾಡಲು ಕಾನೂನಿನಲ್ಲಿಯೇ ಅವಕಾಶವಿದೆ. ಆ ಪ್ರಕಾರ ನಿಖಿಲ್ ಕುಮಾರಸ್ವಾಮಿ ಅವರ ಅಫಿಡವಿಟ್​ ಫಾರ್ಮಾಟ್​ ಪ್ರಕಾರ ಇರಲಿಲ್ಲ. ಹೀಗಾಗಿ, ನಾವು ಆಕ್ಷೇಪ ಸಲ್ಲಿಸಿದ್ದೆವು. ಆದರೆ, ಅವರು ಅದನ್ನು ಲಿಖಿತ ರೂಪದಲ್ಲಿ ಆಕ್ಷೇಪ ಸಲ್ಲಿಸಬೇಕೆಂದು ಹೇಳಿದ್ದರು. ಆ ರೀತಿ ನಾವು ದೂರು ನೀಡಿದ್ದೆವು. ಆದರೆ, ಜಿಲ್ಲಾಧಿಕಾರಿ ನಿಖಿಲ್ ಅರ್ಜಿಯನ್ನು ಅಪ್ರೂವ್​ ಮಾಡಲಾಗಿದೆ ಎಂದು ಹೇಳಿದರು. ರಾತ್ರಿಯ ವೇಳೆ ‘ನಿಮ್ಮಿಂದ ಯಾವುದೇ ಆಕ್ಷೇಪಣೆಗಳು ಬಂದಿಲ್ಲ’ ಎಂದು ಚುನಾವಣಾಧಿಕಾರಿ ನನಗೆ ಮರುಉತ್ತರ ಬರೆದಿದ್ದಾರೆ. ಹೀಗೆ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಮದನ್​ ಆರೋಪಿಸಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಎದುರಾಳಿಯಾಗಿ ಕಣಕ್ಕೆ ಇಳಿದಿರುವ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ವಿರುದ್ಧ ಜೆಡಿಎಸ್​ ನಾಯಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಜೆಡಿಎಸ್​ ನಾಯಕರ ಆಪ್ತರ ಮನೆಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರ ಹಿಂದೆ ಸುಮಲತಾ ಅಂಬರೀಶ್​ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದರು.

ನಿಖಿಲ್ ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಕೂಡ ಆಗ್ರಹಿಸಿದ್ದ ಸುಮಲತಾ, ನಿಖಿಲ್ ಅಫಿಡವಿಟ್‌ನಲ್ಲಿ ಕಾಲಂಗಳನ್ನು ಭರ್ತಿ ಮಾಡಿರಲಿಲ್ಲ. ಜತೆಗೆ, ಹಳೆಯ ಮಾದರಿ ಅಫಿಡವಿಟ್ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ಬಳಿಕ ನಿಖಿಲ್ ಹೊಸ ಮಾದರಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಅವರ ನಾಮಪತ್ರ ಪರಿಶೀಲನೆಗೂ ಮೊದಲೇ ನಾವು ನಿಖಿಲ್ ನಾಮಪತ್ರ/ಅಫಿಡವಿಟ್ ಕ್ರಮಬದ್ಧವಾಗಿಲ್ಲ ಎಂದು ಆಕ್ಷೇಪಿಸಿದ್ದೆವು. ಆದರೆ, ನಾಮಪತ್ರ ಪರಿಶೀಲನೆ ವೇಳೆ ಆಕ್ಷೇಪ ಸಲ್ಲಿಕೆಗೆ ಅವಕಾಶ ಕೊಡದೆ ಜಿಲ್ಲಾಧಿಕಾರಿ ಮಂಜುಶ್ರೀ ಏಕಾಏಕಿ ನಿಖಿಲ್ ನಾಮಪತ್ರ ಅಂಗೀಕಾರವಾಗಿದೆ ಎಂದು ಘೋಷಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ ನಿಖಿಲ್​ ಕುಮಾರಸ್ವಾಮಿಗೆ ನಿನ್ನೆ ಕ್ಲೀನ್​ಚಿಟ್​ ನೀಡಿದ್ದಾರೆ.

Comments are closed.