ಮುಂಬೈ

ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಯುವಕನ ಜೊತೆಗೆ ಸ್ನೇಹ ಬೆಳೆಸಿದ್ದಕ್ಕೆ ಮಗಳನ್ನೆ ಕೊಲೆಗೈದ ತಂದೆ

Pinterest LinkedIn Tumblr


ಮುಂಬೈ: ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಯುವಕನ ಜೊತೆಗೆ ಸ್ನೇಹ ಬೆಳೆಸಿದ್ದಕ್ಕೆ ಮಗಳನ್ನೇ ತಂದೆಯೊಬ್ಬ ಕೊಲೆಗೈದ ಅಮಾನವೀಯ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಅಹ್ಮದ್‍ನಗರ ಜಿಲ್ಲೆಯ ಚೋಂಡಿ ಗ್ರಾಮ ಪಾಂಡುರಂಗ್ ಶ್ರೀರಂಗ್ ಸೇಗುಂಡೆ (51) ಕೊಲೆ ಮಾಡಿದ ತಂದೆ. ಆರೋಪಿ ಹಾಗೂ ಆತನಿಗೆ ಸಹಾಯ ಮಾಡಿದ್ದ ಜ್ಞಾನದೇವ್ ಜಗನ್ನಾಥ್ ಶಿಂದೆ (35), ರಾಜೇಂದ್ರ ಜಗನ್ನಾಥ್ ಶಿಂದೆ (30)ಯನ್ನು ಪೊಲೀಸರು ಬಂಧಿಸಿದ್ದಾರೆ.

ಇದೊಂದು ಮರ್ಯಾದಾ ಹತ್ಯೆಯಾಗಿದೆ. ಮಾರ್ಚ್ 23ರಂದು ಕೊಲೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಇನ್ಸ್‍ಪೆಕ್ಟರ್ ಪಾಂಡುರಂಗ್ ಪವಾರ್ ತಿಳಿಸಿದ್ದಾರೆ.

ಆಗಿದ್ದೇನು?:
ಕೊಲೆಯಾದ ಹುಡುಗಿ 17 ವರ್ಷದವಳಾಗಿದ್ದು, ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಓರ್ವ ಯುವಕನ ಜೊತೆಗೆ ಸ್ನೇಹ ಬೆಳೆಸಿದ್ದಳು. ಯುವಕನಿಗೆ ಮೊಬೈಲ್ ಮೂಲಕ ಮೆಸೇಜ್ ಮಾಡಿ, ಆತನ ಬೈಕ್‍ನಲ್ಲಿ ಕಾಲೇಜ್‍ಗೆ ಹೋಗುತ್ತಿದ್ದಳು. ಇದರಿಂದಾಗಿ ಪಾಂಡುರಂಗ್ ಶ್ರೀರಂಗ್ ಸೇಗುಂಡೆ, ಯುವಕನ ಸಂಪರ್ಕ ಬಿಡುವಂತೆ ಅನೇಕ ಬಾರಿ ಮಗಳಿಗೆ ಎಚ್ಚರಿಕೆ ಕೊಟ್ಟಿದ್ದ. ಆದರೆ ಮಗಳು ಮಾತ್ರ ಯುವಕನ ಸಂಪರ್ಕ ಬಿಡದೆ, ಆತನ ಬೈಕ್‍ನಲ್ಲೇ ಕಾಲೇಜ್‍ಗೆ ಹೋಗುತ್ತಿದ್ದಳು ಎಂದು ಇನ್ಸ್‍ಪೆಕ್ಟರ್ ಪಾಂಡುರಂಗ್ ಪವಾರ್ ತಿಳಿಸಿದ್ದಾರೆ.

ಮಗಳು ನನ್ನ ಮಾತನ್ನೇ ಕೇಳುತ್ತಿಲ್ಲ ಎಂದು ಕೋಪಗೊಂಡ ಪಾಂಡುರಂಗ್ ಶ್ರೀರಂಗ್ ಸೇಗುಂಡೆ, ಚೋಂಡಿ ಗ್ರಾಮದ ಮನೆಯಲ್ಲಿ ಮಾರ್ಚ್ 23ರಂದು ಕೊಲೆ ಮಾಡಿದ್ದಾನೆ. ಬಳಿಕ ಸಂಬಂಧಿಕರಾದ ಜ್ಞಾನದೇವ್ ಹಾಗೂ ರಾಜೇಂದ್ರ ಸಹಾಯದಿಂದ ಮಗಳ ಮೃತ ದೇಹವನ್ನು ಮನೆಯ ಸಮೀಪದ ಜಾಗದಲ್ಲಿ ಸುಟ್ಟುಹಾಕಿದ್ದ.

ಕೊಲೆಯನ್ನು ಮುಚ್ಚಿಹಾಕಲು ಯತ್ನಿಸಿದ ಪಾಂಡುರಂಗ್ ತನ್ನ ಸಂಬಂಧಿಕರ ಜೊತೆಗೆ ಸೇರಿ, ಮಗಳು ಕಾಣೆಯಾಗಿದ್ದಾಳೆ ಎಂದು ಮಾರ್ಚ್ 24ರಂದು ಜಾಂಖೇಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.

ಮೃತ ಹುಡುಗಿಯ ಸಹೋದರರು ಮಾರ್ಚ್ 25ರಂದು ಅರ್ಧ ಸುಟ್ಟು ಬಿದ್ದಿದ್ದ ದೇಹವನ್ನು ನೋಡಿದ್ದಾಳೆ. ಇದಾದ ಬಳಿಕ ಸ್ಥಳೀಯರು ಅಲ್ಲಿಯೆ ಸೇರಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈಗಾಗಲೇ ಮಗಳು ನಾಪತ್ತೆಯಾದ ಕುರಿತು ದೂರು ನೀಡಿದ್ದ ಪಾಂಡುರಂಗ್ ಮೇಲೆ ಶಂಕೆ ವ್ಯಕ್ತಪಡಿಸಿ, ಬಂಧಿಸಿದ್ದರು.

ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಕೊಲೆಯ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.