ಕರ್ನಾಟಕ

ಉಮೇಶ್ ಜಾಧವ್ ಸೇರ್ಪಡೆ ನಂತರ ಬಿಜೆಪಿಯವರ ರಾಜೀನಾಮೆ ಪರ್ವ; ಮಲ್ಲಿಕಾರ್ಜುನ ಖರ್ಗೆ ಗೆಲುವು ಸುಲಭವಾಯಿತೇ?

Pinterest LinkedIn Tumblr


ಕಲಬುರ್ಗಿ: ಜಿಲ್ಲೆಯ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದ್ದು, ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಾಬುರಾವ್ ಚವ್ಹಾಣ ರಾಜೀನಾಮೆ ನೀಡಿದ ಬೆನ್ನಹಿಂದೆಯೇ ಮತ್ತೋರ್ವ ಬಿಜೆಪಿ ನಾಯಕ ಹೊರನಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ರಾಜ್ಯ ಸಂಚಾಲಕ ಸುಭಾಷ್ ರಾಠೋಡ್ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್​ನಿಂದ ವಲಸೆ ಬಂದ ಉಮೇಶ್ ಜಾಧವ್ ಅವರಿಗೆ ಬಿಜೆಪಿ ಟಿಕೇಟ್ ಘೋಷಣೆಯಾದ ಬೆನ್ನ ಹಿಂದೆಯೇ ಬಂಜಾರ ಸಮಾಜದ ಒಬ್ಬೊಬ್ಬರೇ ನಾಯಕರು ರಾಜೀನಾಮೆ ನೀಡುತ್ತಿದ್ದು, ಬಿಜೆಪಿಗೆ ಶಾಕ್ ಮೇಲೆ ಶಾಕ್ ಅಪ್ಪಳಿಸಲಾರಂಭಿಸಿದೆ.

ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆಯನ್ನು ಖೆಡ್ಡಾಕ್ಕೆ ಕೆಡವಲು ಹೊರಟ ಕಲಬುರ್ಗಿ ಜಿಲ್ಲಾ ಬಿಜೆಪಿ ಈಗ ಹತಾಶೆಯ ಸ್ಥಿತಿ ತಲುಪುತ್ತಿದೆ. ಬಾಬುರಾವ್ ಚವ್ಹಾಣ್ ಮತ್ತು ಸುಭಾಷ್ ರಾಠೋಡ್ ಅವರು ಬಿಜೆಪಿಯ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿರುವ ಬಾಬುರಾವ್ ಚವ್ಹಾಣ, ಹಿಂದೆ ರೇವುನಾಯಕ ಬೆಳಮಗಿಯನ್ನು ಬಿಜೆಪಿಯಿಂದ ಹೊರ ಹಾಕಲಾಯಿತು. ಇದೀಗ ಜಾಧವ್ ಅವರನ್ನು ಕರೆತರುವ ಮೂಲಕ ನನ್ನನ್ನು ಹೊರ ಹೋಗುವಂತೆ ಮಾಡಿದ್ದಾರೆ. ಹಿರಿಯ ನಾಯಕರು ಡಿಕ್ಟೇಟರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸದ್ಯ ಬಿಜೆಪಿಗೆ ಬಂದಿರುವ ಜಾಧವ್ ಸಹ ಹರಕೆಯ ಕುರಿಯಾಗಿದ್ದು, ಮುಂದೊಂದು ದಿನ ನಮ್ಮಂತೆಯೇ ಅವರನ್ನೂ ಬಲಿಕೊಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮತ್ತೊಂದೆಡೆ ಸುಭಾಷ ರಾಠೋಡ್ ಸಹ ಬಿಜೆಪಿ ಹಿರಿಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸೋಲಿಲ್ಲದ ಸರದಾರನ ಸೋಲಿಸಲು ಬಿಜೆಪಿ ರಣತಂತ್ರ; ಕಮಲದ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಖರ್ಗೆ

ಶೀಘ್ರದಲ್ಲಿಯೇ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿರುವ ಚವ್ಹಾಣ್ ಮತ್ತು ರಾಠೋಡ್ ಅವರಿಬ್ಬರೂ ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಇದರ ಜೊತೆಗೆ ಬಿಜೆಪಿ ಗ್ರಾಮಾಂತರ ಕಾರ್ಯದರ್ಶಿ ಶರಣು ಮೋತಕಪಲ್ಲಿ ಅವರೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಮಾಜಿ ಸಚಿವ ಡಾ ಎ.ಬಿ. ಮಾಲಕರೆಡ್ಡಿಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದರು. ಆದರೆ ಬಂಜಾರ ಸಮುದಾಯಕ್ಕೆ ಸೇರಿದ ಜಾಧವ್ ಸ್ಪರ್ಧೆಯ ವೇಳೆಯೇ ಅದೇ ಸಮುದಾಯಕ್ಕೆ ಸೇರಿದ ಬಾಬುರಾವ್ ಚವ್ಹಾಣ ಮತ್ತು ಸುಭಾಷ್ ರಾಠೋಡ ರಾಜೀನಾಮೆ ನೀಡಿರೋದು ಬಿಜೆಪಿಗೆ ದೊಡ್ಡ ಆಘಾತವಾಗಿ ಪರಿಣಮಿಸೋದು ಖಚಿತ.

Comments are closed.