ಕರ್ನಾಟಕ

ಬಿಜೆಪಿಗೆ ಬೇಕಾದರೆ ಓಟ್‌ ಹಾಕುತ್ತೇವೆ, ಜೆಡಿಎಸ್‌ನ ದೇವೇಗೌಡರಿಗೆ ಹಾಕಲ್ಲ!

Pinterest LinkedIn Tumblr


ತುಮಕೂರು: ಹಾಲಿ ಸಂಸದ ಕಾಂಗ್ರೆಸ್‌ ನ ಮುದ್ದಹನುಮೇಗೌಡರಿಗೆ ತುಮಕೂರು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ತಪ್ಪಿರುವುದಕ್ಕೆ ಇಲ್ಲಿನ ಸ್ಥಳಿಯ ಕಾಂಗ್ರೆಸ್‌ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಫ‌ುಲ್‌ ಗರಂ ಆಗಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರ ಮನವಿಗೂ ಬೆಲೆ ಕೊಡದ ಕಾಂಗ್ರೆಸ್‌ ಹೈಕಮಾಂಡ್‌ ದೇವೇಗೌಡರ ಒತ್ತಾಯಕ್ಕೆ ಕಟ್ಟುಬಿದ್ದು ತುಮಕೂರು ಕ್ಷೇತ್ರವನ್ನು ಜೆಡಿಎಸ್‌ ಗೆ ಬಿಟ್ಟುಕೊಟ್ಟಿರುವುದರಿಂದ ಸ್ಥಳೀಯ ಕಾಂಗ್ರೆಸ್‌ ನಲ್ಲಿ ಅಸಮಧಾನ ಭುಗಿಲೆದ್ದಿದೆ.

ಒಂದೆಡೆ ಹಾಲಿ ಸಂಸದ ಮುದ್ದಹನುಮಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರು ಇಂದು ಕ್ಷೇತ್ರದ ಕಾಂಗ್ರೆಸ್‌ ನಾಯಕರ ಮತ್ತು ಶಾಸಕರ ಸಭೆಯನ್ನು ಕರೆದಿದ್ದರು. ಮತ್ತು ಆ ಸಭೆಯಲ್ಲಿ ಮಾತನಾಡುತ್ತಾ, ‘ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಒಪ್ಪದಂತೆ ತುಮಕೂರಿನಿಂದ ದೇವೇಗೌಡರು ಸ್ಪರ್ಧಿಸುತ್ತಿದ್ದು ಸ್ಥಳೀಯ ಕೈ ನಾಯಕರು ಅವರ ಗೆಲುವಿಗೆ ಶಕ್ತಿ ಮೀರಿ ಶ್ರಮಿಸಬೇಕು. ನಾನೂ ಕೊನೇ ಕ್ಷಣದವರೆಗೂ ಮುದ್ದಹನುಮಗೌಡರಿಗೆ ಟಿಕೆಟ್‌ ದೊರಕಿಸಿಕೊಡುವಲ್ಲಿ ಪ್ರಯತ್ನಪಟ್ಟಿದ್ದೇನೆ. ಆದರೆ ಸ್ವತಃ ದೇವೇಗೌಡರೇ ಕೇಳಿರುವುದರಿಂದ ನಮ್ಮ ಹೈಕಮಾಂಡ್‌ ಜೆಡಿಸ್‌ ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಹಾಗಾಗಿ ಹೈಕಮಾಂಡ್‌ ನಿರ್ಧಾರವನ್ನು ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ ಮಾತ್ರವಲ್ಲ ಕರ್ತವ್ಯವೂ ಹೌದು. ಮುದ್ದಹನುಮ ಗೌಡರನ್ನು ನಾನು ಸಮಾಧಾನಪಡಿಸುತ್ತೇನೆ. ಇನ್ನೂ ಸಹ ಜೆಡಿಎಸ್‌ ಈ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಪಕ್ಷ ಮುದ್ದಹನುಮಗೌಡರಿಗೇ ಟಿಕೆಟ್‌ ನೀಡುತ್ತದೆ…’ ಎಂದೆಲ್ಲಾ ಹೇಳಿದರು.

ಸಭೆಯ ಬಳಿಕ ಸ್ಥಳಿಯ ಕಾಂಗ್ರೆಸ್‌ ನಾಯಕರು ಜೆಡಿಎಸ್‌, ದೇವೇಗೌಡರ ವಿರುದ್ಧ ಬಹಿರಂಗವಾಗಿಯೇ ಅಸಮಧಾನವನ್ನು ಹೊರಹಾಕಿದ್ದಾರೆ. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ನಾವು ಜೆಡಿಎಸ್‌ ಪರ ಪ್ರಚಾರ ಕಾರ್ಯ ಮಾಡುವುದಿಲ್ಲ ಎಂದು ಪರಮೇಶ್ವರ್‌ ಅವರ ಮುಂದೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ, ನಾವು ಯಾವುದೇ ಕಾರಣಕ್ಕೂ ಜೆಡಿಎಸ್‌ ಅಭ್ಯರ್ಥಿ ಪರ ಮತ ಚಲಾಯಿಸುವುದಿಲ್ಲ ; ಬೇಕಾದರೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕ್ತೇವೆ ಹೊರತು ಜೆಡಿಎಸ್‌ ಪರ ಮತ ಹಾಕುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಹಾಸನ, ಮಂಡ್ಯ ಬಳಿಕ ಇದೀಗ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿ ಅಸಮಧಾನ ಭುಗಿಲೆದ್ದಿರುವುದು ಜೆಡಿಎಸ್‌ ಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.

Comments are closed.