ಕರ್ನಾಟಕ

ನಿಖಿಲ್ ಕುಮಾರಸ್ವಾಮಿಯ ನಾಮಪತ್ರ ಸಲ್ಲಿಕೆಗೆ ಹೋಗಲು ಸಿದ್ದರಾಮಯ್ಯ ನಿರಾಕರಿಸಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಮೈಸೂರು: ನಿನ್ನೆ ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಸೋಮವಾರ ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ತಾವೂ ಹಾಜರಿರಬೇಕೆಂದು ಮನವಿ ಮಾಡಿದ್ದರು. ಆದರೆ, ಅವರ ಮನವಿಯ ನಂತರವೂ ಸಿದ್ದರಾಮಯ್ಯ ಇಂದು ನಾಮಪತ್ರ ಸಲ್ಲಿಕೆ ವೇಳೆ ಪಾಲ್ಗೊಳ್ಳುತ್ತಿಲ್ಲ.

ಈ ಬಗ್ಗೆ ಮೈಸೂರಿನಲ್ಲಿಂದು ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನಾನು ಜೊತೆ ಇರೋಕೆ ಆಗುವುದಿಲ್ಲ. ಅವರ ತಾಯಿ ಅನಿತಾ ನನ್ನನ್ನು ಭೇಟಿ ಮಾಡಿ, ನನ್ನ ಮಗನಿಗೆ ಆಶೀರ್ವಾದ ಮಾಡಿ ಅಂತ ಕೇಳಿಕೊಂಡಿದ್ದರು. ಆದರೆ, ನಾಮಪತ್ರ ಸಲ್ಲಿಕೆ ವೇಳೆ ಜೊತೆ ಇರೋಕೆ ಆಗೋಲ್ಲ‌. ನಾನು ಇಂದು ಮೈಸೂರಿನಲ್ಲಿ ಇರುತ್ತೇನೆ. ನಂತರ ಚಿತ್ರದುರ್ಗಕ್ಕೆ ತೆರಳುತ್ತೇನೆ. ಎಲ್ಲ ಕಡೆ ನಾಮಪತ್ರ ಸಲ್ಲಿಕೆಗೆ ಹೋಗೋಕೆ ಆಗೋಲ್ಲ ಎಂದಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಅಂಬರೀಷ್​ಗೆ ಬಿಜೆಪಿ ಬೆಂಬಲ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಬಿಜೆಪಿ ಬೆಂಬಲಕ್ಕೂ ನಮಗೂ ಸಂಬಂಧವಿಲ್ಲ‌. ಬಿಜೆಪಿಯವರು ಸುಮಲತಾಗೆ ಬೆಂಬಲ ಕೊಟ್ಟಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಇಲ್ಲ. ಆ ಕ್ಷೇತ್ರವನ್ನು ನಾವು ಜೆಡಿಎಸ್‌‌ಗೆ ಬಿಟ್ಟು ಕೊಟ್ಟಿದ್ದೇವೆ. ಹೀಗಾಗಿ ಆ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಸ್ಪೆಂಡ್ ವಿಚಾರವಾಗಿಯೂ ಮಾತನಾಡಿರುವ ಸಿದ್ದರಾಮಯ್ಯ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಸಸ್ಪೆಂಡ್ ಮಾಡಿದ್ದಾರೆ. ಅದರಿಂದ ಪಕ್ಷಕ್ಕೆ ಏನೂ ಸಮಸ್ಯೆ ಆಗುವುದಿಲ್ಲ. ಎಲ್ಲರನ್ನೂ ಸಸ್ಪೆಂಡ್ ಮಾಡಿಲ್ಲ, ಕೆಲವರನ್ನು ಮಾತ್ರ ಸಸ್ಪೆಂಡ್ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಎಲ್ಲರನ್ನೂ ಸಸ್ಪೆಂಡ್​ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

Comments are closed.