ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ರಾಜಕೀಯ ನಡೆ ಹೇಗಿರುತ್ತದೆ ಎಂದು ಸುಮಾರಿನವರಿಗೆಲ್ಲ ಊಹಿಸಲು ಸಾಧ್ಯವಿಲ್ಲ. ರಾಜಕೀಯದ ಬಹುತೇಕ ಎಲ್ಲ ಹಂತಗಳನ್ನೂ ಏರಿ ರಾಷ್ಟ್ರ ರಾಜಕಾರಣದಲ್ಲೂ ಪ್ರಭಾವಿಯಾಗಿರುವ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಇಬ್ಬರು ಈ ಬಾರಿಯ ಚುನಾವಣಾ ಕಣದಲ್ಲಿದ್ದಾರೆ. ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ನಿಖಿಲ್ ಕುಮಾರಸ್ವಾಮಿ ಇನ್ನೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಹಾಸನದ ಜೆಡಿಎಸ್ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಸಿದ್ದು, ಆಸ್ತಿ ಘೋಷಣೆ ಮಾಡಿದ್ದಾರೆ.
ಮಾಜಿ ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಶಾಸಕರು ಹೀಗೆ ರಾಜಕೀಯದ ಎಲ್ಲ ವಲಯದಲ್ಲೂ ಬೀಡುಬಿಟ್ಟಿರುವ ದೇವೇಗೌಡರ ಕುಟುಂಬದ ಪ್ರಜ್ವಲ್ ರೇವಣ್ಣ ತಮ್ಮ ಆಸ್ತಿಯನ್ನು ಬಹಿರಂಗಪಡಿಸಿದ್ದು, ಚರಾಸ್ತಿಯಲ್ಲಿ ತಮ್ಮ ಬಳಿ ಯಾವುದೇ ಕಾರುಗಳಿಲ್ಲ. ಒಂದು ಟ್ರಾಕ್ಟರ್ ಮತ್ತು 20 ದನಕರುಗಳಷ್ಟೇ ತಮ್ಮ ಆಸ್ತಿ ಎಂದು ಹೇಳಿಕೊಂಡಿದ್ದಾರೆ. ಚರಾಸ್ತಿಯಾಗಿ 1,64,86,632 ರೂ. ಮತ್ತು 15 ಲಕ್ಷ ರೂ. ಹಣವಿದೆ ಎಂದು ನಮೂದಿಸಿದ್ದಾರೆ. ತಮ್ಮ ತಂದೆ ಸಚಿವ ಎಚ್.ಡಿ. ರೇವಣ್ಣ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ನಾಮಪತ್ರ ಸಲ್ಲಿಸಿರುವ 28 ವರ್ಷದ ಪ್ರಜ್ವಲ್ ಬಳಿ ಯಾವುದೇ ಕಾರುಗಳಿಲ್ಲ. 2015ರಲ್ಲಿ ಖರೀದಿಸಿರುವ ಒಂದು ಟ್ರ್ಯಾಕ್ಟರ್ ಹಾಗೂ 4,45,000 ರೂ. ಮೌಲ್ಯದ 18 ಹಸುಗಳು, 2 ಎತ್ತಿನ ಗಾಡಿಗಳಿವೆ ಎಂದು ನಾಮಪತ್ರದಲ್ಲಿ ತಿಳಿಸಲಾಗಿದೆ.
ಸಚಿವ ಎಚ್.ಡಿ. ರೇವಣ್ಣ ತಮ್ಮ ಮಗ ಪ್ರಜ್ವಲ್ ಹೆಸರಿನಲ್ಲಿ 17 ಫ್ಲಾಟ್ಗಳನ್ನು ಹೊಂದಿದ್ದಾರೆ. 4 ಎಕರೆ ಜಾಗವನ್ನು ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಚಂದ್ರಾಂಬಿಕಾ ಕನ್ವೆನ್ಷನ್ ಹಾಲ್ನ ಪಾರ್ಟನರ್ ಕೂಡ ಆಗಿರುವ ಪ್ರಜ್ವಲ್ ಮೈಸೂರಿನ ಕುವೆಂಪು ನಗರದಲ್ಲಿ ಕಮರ್ಷಿಯಲ್ ಕಟ್ಟಡವನ್ನು ಕೂಡ ಹೊಂದಿದ್ದಾರೆ. ಒಟ್ಟಾರೆ ಸ್ಥಿರಾಸ್ತಿಯಾಗಿ 4.89,15,029 ರೂ. ಆಸ್ತಿಯನ್ನು ಹೊಂದಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರನಾಗಿರುವ ಪ್ರಜ್ವಲ್ ತಮ್ಮ ತಂದೆ ರೇವಣ್ಣನವರ ಬಳಿ 1.26 ಕೋಟಿ ರೂ. ಸಾಲ ಪಡೆದಿದ್ದಾರೆ. ಹಾಗೇ, ತಮ್ಮ ತಾಯಿ ಭವಾನಿ ರೇವಣ್ಣನವರ ಬಳಿ 43.75 ಲಕ್ಷ ಸಾಲ ಪಡೆದಿದ್ದಾರೆ.
ದೇವೇಗೌಡರ ಕುಟುಂಬದ ಪ್ರಾಬಲ್ಯವಿರುವ ಹಾಸನವನ್ನು ಇದುವರೆಗೂ ದೇವೇಗೌಡರು ಪ್ರತಿನಿಧಿಸುತ್ತಿದ್ದರು. ಆದರೆ, ಈ ಬಾರಿ ತಮ್ಮ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟಿರುವ ದೇವೇಗೌಡರು ಕಳೆದ ವಾರ ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಭಾವುಕರಾಗಿದ್ದರು. ಪ್ರಜ್ವಲ್ ಅವರ ಎದುರಾಳಿಯಾಗಿ ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎ. ಮಂಜು ಸ್ಪರ್ಧಿಸಲಿದ್ದಾರೆ.
Comments are closed.