ಕರ್ನಾಟಕ

ತುಮಕೂರು ಕ್ಷೇತ್ರದಿಂದ ದೇವೇಗೌಡ ಸ್ಪರ್ಧೆ; ಸೋಮವಾರ ನಾಮಪತ್ರ

Pinterest LinkedIn Tumblr


ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಾರೋ ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಎಂಬ ಗೊಂದಲಕ್ಕೆ ಬಹುತೇಕ ತೆರೆ ಬಿದ್ದಿದೆ. ತುಮಕೂರು ಮತಕ್ಷೇತ್ರದಲ್ಲಿ ದೇವೇಗೌಡರು ಜೆಡಿಎಸ್-ಕಾಂಗ್ರೆಸ್ ಮೈತ್ರಿಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ತಿಳಿಸಿದ್ಧಾರೆ. ಸೋಮವಾರ ಮಧ್ಯಾಹ್ನ 2ಗಂಟೆಯ ನಂತರ ದೇವೇಗೌರು ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ದೇವೇಗೌಡರು ಸ್ಪರ್ಧಿಸುವುದರೊಂದಿಗೆ ತುಮಕೂರು ಕ್ಷೇತ್ರದ ರಣಾಂಗಣ ಕುತೂಹಲ ಮೂಡಿಸಿದೆ. ಜಿ.ಎಸ್. ಬಸವರಾಜು ಅವರು ಈಗಾಗಲೇ ಬಿಜೆಪಿಯ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದಾರೆ. ಕಾಂಗ್ರೆಸ್​ನ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಆ ಸುದ್ದಿ ನಿಜವೇ ಆದರೆ ಬಂಡಾಯ ಕಾಂಗ್ರೆಸ್ಸಿಗರು ಸೋಮವಾರವೇ ನಾಮಪತ್ರ ಸಲ್ಲಿಸಲಿದ್ದಾರೆ. ಮುದ್ದಹನುಮೇಗೌಡರು ಸ್ಪರ್ಧಿಸಿದರೆ ತುಮಕೂರಿನಲ್ಲಿ ತ್ರಿಕೋನ ಫೈಟ್ ಸೃಷ್ಟಿಯಾಗಲಿದೆ. ವಿಜಯಮಾಲೆ ಯಾರಿಗೆ ಬೇಕಾದರೂ ಒಲಿಯಬಹುದು ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ.

ಮುದ್ದಹನುಮೇಗೌಡರು ತಿರುಗಿ ಬೀಳುತ್ತಿರುವುದು ದೇವೇಗೌಡರಿಗೆ ಮುಜುಗರ ತಂದಿದೆ. ತುಮಕೂರು ಹೊರತುಪಡಿಸಿ ಕಾಂಗ್ರೆಸ್​ನ ಹಾಲಿ ಸಂಸದರೆಲ್ಲರೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮೈತ್ರಿ ಸೀಟು ಹಂಚಿಕೆ ವೇಳೆ, ಕಾಂಗ್ರೆಸ್ ಪಕ್ಷವು ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಜಿ. ಪರಮೇಶ್ವರ್ ಅವರ ಸ್ವಕ್ಷೇತ್ರವಾಗಿರುವ ತುಮಕೂರು ಜೆಡಿಎಸ್ ಪಾಲಾಗಿರುವುದಕ್ಕೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ತಂದಿದೆ. ಮಂಡ್ಯ, ಹಾಸನದಂತೆ ತುಮಕೂರಿನಲ್ಲೂ ಕಾಂಗ್ರೆಸ್ಸಿಗರ ಅಸಹಕಾರದ ಸಮಸ್ಯೆಯನ್ನು ಜೆಡಿಎಸ್ ಎದುರಿಸುವ ಪರಿಸ್ಥಿತಿದೆ. ಚತುರ ರಾಜಕಾರಣಿ ಎನಿಸಿರುವ ದೇವೇಗೌಡರು ಈ ಎಲ್ಲಾ ಸವಾಲುಗಳನ್ನ ಹೇಗೆ ನಿಭಾಯಿಸಿ ಗೆಲುವಿನ ನಗೆ ಬೀರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Comments are closed.