ಕ್ರೀಡೆ

ಐಪಿಎಲ್ ಪ್ರಥಮ ಪಂದ್ಯದಲ್ಲೇ ಆರ್‌ಸಿಬಿಗೆ ಮುಖಭಂಗ; ಚೆನ್ನೈಗೆ 7 ವಿಕೆಟ್ ಅಮೋಘ ಜಯ

Pinterest LinkedIn Tumblr

ಚೆನ್ನೈ : ಇಲ್ಲಿನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​​​ನ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್​​ ತಂಡ ಸೋಲುಂಡಿದೆ. ಧೋನಿ ಪಡೆಯ ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೊಹ್ಲಿ ಟೀಂ ಟೂರ್ನಿಯಲ್ಲಿ ಮತ್ತದೆ ಕಳಪೆ ಆರಂಭ ಪಡೆದುಕೊಂಡಿದೆ. ಬೌಲಿಂಗ್​​ನಲ್ಲಿ ಮಿಂಚಿದ ಸಿಎಸ್​​ಕೆ 7 ವಿಕೆಟ್​ಗಳ ಜಯದೊಂದಿಗೆ ಭರ್ಜರಿ ಶುಭಾರಂಭ ಮಾಡಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ನಿಧಾನ ಗತಿಯ ಆಟಕ್ಕೆ ಮುಂದಾಯಿತು. ಆದರೆ, ಆರಂಭದಲ್ಲೇ ಸ್ಪಿನ್ನರ್​​ಗಳನ್ನು ಚೂ ಬಿಟ್ಟ ಧೋನಿ, ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಾಯಕ ವಿರಾಟ್ ಕೊಹ್ಲಿ ಕೇವಲ 6 ರನ್​ಗೆ ಔಟ್ ಆಗುವ ಮೂಲಕ ಆರ್​ಸಿಬಿ ಪರ ಪೆವಿಲಿಯನ್​ನತ್ತ ಹೆಜ್ಜೆ ಹಾಕಲಾರಂಭಿಸಿದರು.

ಪ್ರಮುಖ ಸ್ಟಾರ್ ಆಟಗಾರರೆ ಬೇಗನೆ ವಿಕೆಟ್ ಒಪ್ಪಿಸಿದ್ದು ಆರ್​ಸಿಬಿಗೆ ತುಂಬಾನೆ ಹಿನ್ನಡೆಯಾಯಿತು. ಇದೆ ಮೊದಲ ಬಾರಿಗೆ ಐಪಿಎಲ್​​​​​ಗೆ ಕಾಲಿಟ್ಟ ಶಿಮ್ರೋನ್ ಹೆಟ್ಮೇರ್(0) ಹಾಗೂ ಶಿವಂ ದುಬೆ(2) ಅಬ್ಬರಿಸದೆ ನಿರಾಸೆ ಮೂಡಿಸಿದರು. ಆರ್​ಸಿಬಿ ಪರ ಪಾರ್ಥಿವ್ ಪಟೇಲ್ ಕೊನೆಯ ವಿಕೆಟ್​​ಗೆ ಔಟ್ ಆಗುವ ಮೂಲಕ 17.1 ಓವರ್​​​​​​ನಲ್ಲಿ 70 ರನ್​ಗೆ ಸರ್ವಪತನ ಕಂಡಿತು. ತಂಡದ ಪರ ಪಾರ್ಥಿವ್ 29 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರ ಸ್ಕೋರ್ ಎರಡಂಕಿ ದಾಟಲಿಲ್ಲ. ಸಿಎಸ್​​ಕೆ ಪರ ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿತ್ ತಾಹಿತ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಜಡೇಜಾ 2 ಹಾಗೂ ಬ್ರಾವೋ 1 ವಿಕೆಟ್ ಪಡೆದರು.

71 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲಿ ಆಘಾತ ಅನುಭವಿಸಿತು ಆದರೂ ತದ ನಂತರದಲ್ಲಿ ಸುರೇಶ್ ರೈನಾ(19) ಹಾಗೂ ಅಂಬಟಿ ರಾಯುಡು ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ಹತ್ತಿರ ಮಾಡಿದರು. ಈ ಮಧ್ಯೆ ರೈನಾ ಐಪಿಎಲ್​​​ ಇತಿಹಾಸದಲ್ಲಿ 5 ಸಾವಿರ ರನ್ ಬಾರಿಸಿದ ಸಾಧನೆ ಮಾಡಿ ನಿರ್ಗಮಿಸಿದರು. ರಾಯುಡು 28 ರನ್​ಗೆ ಔಟ್ ಆದರು. ಅಂತಿಮವಾಗಿ ಚೆನ್ನೈ 17.4 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು 71 ರನ್ ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಗೆಲುವಿನ ಮೂಲಕ ಶುಭಾರಂಭ ಮಾಡಬೇಕು ಎಂದಿದ್ದ ಆರ್​ಸಿಬಿಗೆ ಹಿನ್ನಡೆಯಾಗಿದ್ದು, ತವರು ನೆಲದಲ್ಲಿ ನಾವೆ ಬಲಿಷ್ಠ ಎಂಬುದನ್ನು ಚೆನ್ನೈ ಮತ್ತೆ ಸಾಭೀತು ಮಾಡಿದೆ. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಇಮ್ರಾನ್ ತಾಹಿರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿ ಕೊಂಡರು. ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮಾರ್ಚ್​ 28 ಗುರುವಾರದಂದು ಬೆಂಗಳೂರಿನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ವಿರುದ್ಧ ಆಡಲಿದೆ.

Comments are closed.