ಕರ್ನಾಟಕ

ಮೊಮ್ಮಕ್ಕಳ ಸ್ಪರ್ಧೆ ಕುಟುಂಬ ರಾಜಕಾರಣವಲ್ಲ, ದೇವೇಗೌಡ

Pinterest LinkedIn Tumblr


ಹಾಸನ: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರಿಗೆ ಪ್ರಜ್ವಲ್ ರೇವಣ್ಣ ಶುಭ ಗಳಿಗೆಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಮುಖ್ಯಮಂತ್ರಿ ಹೆಚ್ .ಡಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ , ಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿ ಎಂ.ವಿ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ದೇವೇಗೌಡರು, ಮಂಡ್ಯದಲ್ಲಿ ನಿಖಿಲ್, ಹಾಸನದಲ್ಲಿ ಪ್ರಜ್ವಲ್ ಭಾರೀ ಬಹುಮತದಿಂದ ಗೆಲ್ಲುತ್ತಾರೆ. ಇವರಿಬ್ಬರೂ ಶೋಕಿಗಾಗಿ ಚುನಾವಣೆಗೆ ಸ್ಪರ್ಧಿಸಿಲ್ಲ. ಭವಿಷ್ಯದಲ್ಲಿ ಇವರು ನಮ್ಮ‌ ಪಕ್ಷವನ್ನು ಕಟ್ಟಿ ಬೆಳಸುತ್ತಾರೆ ಎಂಬ ವಿಶ್ವಾಸವಿದೆ. ಕರ್ನಾಟಕದ ಇತಿಹಾಸದಲ್ಲಿ 10 ವರ್ಷಗಳಿಂದ ಕಾಂಗ್ರೆಸ್ ಜೆಡಿಎಸ್ ಪರಸ್ಪರ ವಿರುದ್ಧವಾಗಿ ಹೋರಾಡುತ್ತಿರುವುದು ಸತ್ಯ. ಆದರೆ ಈಗ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಟ್ಟಾಗಿದ್ದೇವೆ ಎಂದರು.
ಕೇವಲ 10 ರೂಪಾಯಿ ಬಾಡಿಗೆ ಮನೆಯಲ್ಲಿದ್ದು ರಾಜಕೀಯ ಪ್ರಾರಂಭಿಸಿದ್ದನ್ನು ಸ್ಮರಿಸಿದ ಅವರು, ಈ ದೇವೇಗೌಡ ಎಲ್ಲೇ ಇದ್ದರೂ ನಿಮ್ಮವರಾಗಿಯೇ ಇರುತ್ತಾರೆ. ನಾನು ಮಾಡಬೇಕಾದ ಕೆಲಸಗಳು ಇನ್ನೂ ಬಾಕಿ ಇವೆ. ಇದೀಗ ನಿಮ್ಮ ಮಡಿಲಿಗೆ ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಹಾಕಿದ್ದೇನೆ. ನಮ್ಮ ಮೊಮ್ಮಕ್ಕಳ ಸ್ಪರ್ಧೆ ಕುಟುಂಬ ರಾಜಕಾರಣವಲ್ಲ. ಅದು ದೈವ ಇಚ್ಚೆ ಎಂದರು.
ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ 47 ಸಾವಿರ ಕೋಟಿ ರೂ ಮೊತ್ತದ ರೈತರ ಸಾಲ ಮನ್ನಾ ಮಾಡಲಾಗಿದ್ದು, ಅಭಿವೃದ್ಧಿಯೇ ಮೈತ್ರಿ ಸರ್ಕಾರದ ಗುರಿಯಾಗಿದೆ. ರೈತರ ಸಾಲ ಮನ್ನಾ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಟೀಕಿಸಿದ್ದಾರೆ‌. 24 ಗಂಟೆಯೊಳಗೆ ರೈತರ ಸಾಲ‌ಮನ್ನಾ ಮಾಡಲು ಆಗುವುದಿಲ್ಲ ಎಂದರು.
ಕೇಂದ್ರದ ರೈತ ಕಿಸಾನ್ ಯೋಜನೆ ಜಾರಿಗೆ ರಾಜ್ಯ ಸರ್ಕಾರ ನಮಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈಗಾಗಲೇ ರೈತರ ಅರ್ಜಿಗಳನ್ನು ಕೇಂದ್ರಕ್ಕೆ ರವಾನಿಸಲಾಗಿದ್ದು, ಆದರೆ ಈವರೆಗೆ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ ಎಂದರು. ಟೋಪಿ ಹಾಕಿ ಅಧಿಕಾರಕ್ಕೆ ಬಂದಿರುವುದಾಗಿ ಬಿಜೆಪಿ ಮಾಡಿರುವ ಟೀಕೆಯನ್ನು ಖಂಡಿಸಿದ ಕುಮಾರಸ್ವಾಮಿ, ನಾವು ಇಲ್ಲಿಯವರೆಗೆ ಯಾರಿಗೂ ಟೋಪಿ ಹಾಕಿ ರಾಜಕೀಯಕ್ಕೆ ಪ್ರವೇಶಿಸಿಲ್ಲ. ಯಾರು ಯಾರಿಗೆ ಟೋಪಿ ಹಾಕಿ ಬಂದಿದ್ದಾರೆ ಎಂಬುದು ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ರಾಜ್ಯಕ್ಕೆ ಬರಬೇಕಿದ್ದ 2500 ಕೋಟಿ ರೂ. ಹಣ ಇನ್ನೂ ಬಿಡುಗಡೆಯಾಗಿಲ್ಲ. ಬರ ಪರಿಸ್ಥಿತಿ ನಿಭಾಯಿಸಲು ಸಮರ್ಪಕವಾಗಿ ಹಣ ಬಿಡುಗಡೆ ಮಾಡಿಲ್ಲ. 2014ರಲ್ಲಿ ಮೋದಿ ಅಲೆ‌ ಸುನಾಮಿಯಂತೆ ಎದ್ದಿತ್ತು. ಅದೀಗ ಮರೆಯಾಗಿದೆ. ಈಗಲೂ ರಾಜ್ಯ ಬಿಜೆಪಿ ನಾಯಕರು ಮೋದಿ ಹೆಸರಿನಲ್ಲಿ ಮತ ಕೇಳುತ್ತಾರೆ ಎಂದರೆ ಇವರ ಸಾಧನೆ ಏನು ಎಂದು ಪ್ರಶ್ನಿಸಿದರು.
ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡರು ತಾವು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಒಂದೆರಡು ದಿನಗಳಲ್ಲಿ ಬಹಿರಂಗಪಡಿಸುತ್ತಾರೆ. ತುಮಕೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅವರು ಸ್ಪರ್ಧಿಸಬೇಕು ಎಂಬ ಒತ್ತಡವಿದೆ. ನಮ್ಮ ಕುಟುಂಬ ಜನರ ಮದ್ಯೆ ಜನರಿಗಾಗಿ ಹೋರಾಡುವ ಕುಟುಂಬ ಎಂದರು.

Comments are closed.