ಕರ್ನಾಟಕ

ಪ್ರಜ್ವಲ್​ ರೇವಣ್ಣಗೆ ಬೆಂಬಲಿಸಲು ಕಾಂಗ್ರೆಸ್ ಹಿಂದೇಟು; ಹಾಸನ ನಾಯಕರ ಜೊತೆ ಸಿದ್ದು ಸಭೆ

Pinterest LinkedIn Tumblr


ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್​ ರೇವಣ್ಣ ಸ್ಪರ್ಧೆ ಸದ್ಯ ಕುತೂಹಲ ಮೂಡಿಸಿದೆ. ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುತ್ತಿದ್ದಾರೆ. ಆದರೆ, ಈ ಬಗ್ಗೆ ಕಾಂಗ್ರೆಸ್​ ತೀವ್ರ ಅಸಮಾಧನ ಹೊಂದಿದೆಯಂತೆ. ಪ್ರಜ್ವಲ್​ ರೇವಣ್ಣ ಬೆಂಬಲಿಸಲು ಕಾಂಗ್ರೆಸ್​ ನಾಯಕರು ಹಿಂದೇಟು ಹಾಕುತ್ತಿರುವ ವಿಚಾರ ಈಗ ಮೈತ್ರಿ ಪಾಳೆಯದಲ್ಲಿ ಚರ್ಚೆಗೆ ಎಡೆಮಾಟಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ನಾಳೆ ಹಾಸನದ ಪ್ರಮುಖ ನಾಯಕರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ.

ಪ್ರಜ್ವಲ್​ ಅವರನ್ನು ಬೆಂಬಲಿಸಲು ಹಾಸನದ ಕಾಂಗ್ರೆಸ್​ ನಾಯಕರು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ, ಮಾಜಿ ಸಚಿವರು, ಮಾಜಿ ಶಾಸಕರು ಸೇರಿ ಪ್ರಮುಖರ ಸಭೆ ಕರೆದಿದ್ದಾರೆ. ಬೆಂಗಳೂರಿನ ಅವರ ನಿವಾಸದಲ್ಲಿ ಈ ಸಭೆ ನಡೆಯಲಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್‌ ಬೆಂಬಲಿಸಲು ಹಿಂದೇಟು ಹಾಕುತ್ತಿರುವ ನಾಯಕರ ಮನವೊಲಿಕೆ ಸಿದ್ದರಾಮಯ್ಯ ಕಸರತ್ತು ನಡೆಸಲಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎ. ಮಂಜು ಕಾಂಗ್ರೆಸ್​ ಬಿಟ್ಟು ಬಿಜೆಪಿ ಸೇರಿದ್ದಾರೆ. ಅವರು ಪಕ್ಷ ಬಿಟ್ಟಿರುವುದರಿಂದ ಆಗಲಿರುವ ಬೆಳವಣಿಗೆ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ. ಇನ್ನು, ಮಂಜು ಬೆಂಬಲಿಗರು ಕೂಡ ಪಕ್ಷ ಬಿಡಲಿದ್ದಾರೆ ಎನ್ನುವ ಮಾತಿದೆ. ಹಾಗಾಗಿ, ಅಂಥ ನಾಯಕರೊಟ್ಟಿಗೂ ಸಿದ್ದರಾಮಯ್ಯ ಸಮಾಲೋಚನೆ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್​​​ ರೇವಣ್ಣ ಅವರನ್ನು ಸೋಲಿಸಲು ಬಿಜೆಪಿ ರಣತಂತ್ರವನ್ನು ರೂಪಿಸಿದೆ. ಪ್ರಜ್ವಲ್​ಗೆ ನಮ್ಮ ಬೆಂಬಲವಿಲ್ಲ ಎಂದಿದ್ದ ಎ ಮಂಜುವನ್ನು ಕಮಲಪಾಳೆಯಕ್ಕೆ ಸೇರಿಸಿಕೊಳ್ಳುವ ಮೂಲಕ ದೇವೇಗೌಡರ ಕುಡಿಗೆ ಪ್ರಬಲ ಸ್ಪರ್ಧೆ ನೀಡಲು ವೇದಿಕೆ ಸಿದ್ಧಮಾಡಿದ್ದಾರೆ.​​​

ತೆರವಾದ ಸ್ಥಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ?:
ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾರಮೇಶ್ ಅವರನ್ನು ಕಾಂಗ್ರೆಸ್​ಗೆ ಸೇರ್ಪಡೆ ಮಾಡಿಕೊಳ್ಳಲು ಸದ್ಯ ಯೋಜನೆ ನಡೆದಿದೆ. ಎ. ಮಂಜು ಸ್ಥಾನನಕ್ಕೆ ಅವರನ್ನು ನೇಮಕ ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ, ಯೋಗಾರಮೇಶ್ ಕಾಂಗ್ರೆಸ್ ಸೇರ್ಪಡೆಗೆ ಅರಕಲಗೂಡಿನಲ್ಲಿ ಸ್ಥಳೀಯರಿಂದ ಬಾರೀ ವಿರೋಧ ವ್ಯಕ್ತವಾಗಿದೆ. ಬಿಜೆಪಿಯಲ್ಲಿ ಯೋಗಾರಮೇಶ್ ಕಡೆಗಣನೆ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರಲು ಸಜ್ಜಾಗಿದ್ದಾರೆ.

Comments are closed.