ರಾಷ್ಟ್ರೀಯ

ಮೋದಿ ವಿರುದ್ಧ ರಾಹುಲ್​ ಬದಲು ಬೇರೆಯವರನ್ನು ತರಲು ಕಾಂಗ್ರೆಸ್​ನಲ್ಲೇ ಹುಟ್ಟಿಕೊಂಡ ಹೊಸ ಆಲೋಚನೆ

Pinterest LinkedIn Tumblr


ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ಬಹಳ ಮಹತ್ವ ಪಡೆದುಕೊಳ್ಳಲಿದೆ. ಕಳೆದ ಬಾರಿ ಯಾರೂ ಊಹಿಸದ ರೀತಿಯಲ್ಲಿ ಮೋದಿ ನೇತೃತ್ವದ ಎನ್​​ಡಿಎ ಗದ್ದುಗೆ ಏರಿತ್ತು. ಒಂದೊಮ್ಮೆ ಈ ಬಾರಿ ಅದೇ ಫಲಿತಾಂಶ ಪುನರಾವರ್ತನೆಯಾದರೆ ಕಾಂಗ್ರೆಸ್​ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತದೆ. ಮಾತ್ರವಲ್ಲ, ನೆಹರು-ಗಾಂಧಿ ಕುಟುಂಬದ ಮುಂದಿನ ರಾಜಕೀಯ ಬದುಕೇನು ಎನ್ನುವ ಪ್ರಶ್ನೆಯೂ ಕಾಡುತ್ತದೆ.

ಇತಿಹಾಸವನ್ನು ಒಮ್ಮೆ ತಿರುಗಿ ಹಾಕಿದರೆ, ನೆಹರು-ಗಾಂಧಿ ಕುಟುಂಬದಿಂದ ಬಂದ ಪ್ರತಿಯೊಬ್ಬರೂ ಯಶಸ್ಸು ಕಂಡಿದ್ದಾರೆ. ಜವಾಹರ್​ಲಾಲ್​ ನೆಹರು ಹಾಗೂ ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗಲೇ ಕೊನೆ ಉಸಿರೆಳೆದರು. ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ರಾಜೀವ್​ ಗಾಂಧಿ ಆತ್ಮಾಹುತಿ ದಾಳಿಗೆ ಬಲಿಯಾದರು. ಇನ್ನು, ಸೋನಿಯಾ ಗಾಂಧಿ ನೇತೃತ್ವದ ಯುಪಿಎ 2004 ಹಾಗೂ 2009ರಲ್ಲಿ ಅಧಿಕಾರಕ್ಕೆ ಬಂದಿತ್ತು. ಹಾಗಾಗಿ, ಗಾಂಧಿ ಕುಟುಂಬದವರಿಗೂ ಯಶಸ್ಸಿಗೂ ನಂಟಿದೆ ಎಂಬುದನ್ನು ರಾಹುಲ್​ ಹಾಗೂ ಪ್ರಿಯಾಂಕಾ ಗಾಂಧಿ ಮತ್ತೆ ಸಾಬೀತು ಮಾಡಬೇಕಿದೆ.

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿರುವುದು ಕಾಂಗ್ರೆಸ್​ಗೆ ಸ್ವಲ್ಪ ಬಲ ಸಿಕ್ಕಿದೆ. ಕೆಲ ಸಣ್ಣ ಪಕ್ಷಗಳ ಬೆಂಬಲ ಪಡೆದುಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸುವ ಆಲೋಚನೆಯಲ್ಲಿದೆ ಕಾಂಗ್ರೆಸ್​.

ಮೈತ್ರಿ ಮಾಡಿಕೊಳ್ಳುವ ವಿಚಾರ ಕಾಂಗ್ರೆಸ್​ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಕಾಂಗ್ರೆಸ್​​ಅನ್ನು ಸಂಪೂರ್ಣವಾಗಿ ಹೊರಗಿಟ್ಟಿದ್ದವು. ದೆಹಲಿಯಲ್ಲೂ ಕಾಂಗ್ರೆಸ್​​ಗೆ ಮೈತ್ರಿ ಸಾಧ್ಯವಾಗಿಲ್ಲ.

ಆರಂಭದಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಕಾಂಗ್ರೆಸ್​ ಹೊತ್ತುಕೊಂಡಿತ್ತು. 1939ರಲ್ಲಿ ನಡೆದ​ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಭಾಷ್ ಚಂದ್ರ ಬೋಸ್ ವಿರುದ್ಧ ಸೀತಾರಮಯ್ಯ ಸೋತಿದ್ದರು. 1948ರಲ್ಲಿ ಇವರು ಜೈಪುರದಲ್ಲಿ ಭಾಷಣ ಒಂದನ್ನು ಮಾಡಿದ್ದರು. ಈ ವೇಳೆ ಕಾಂಗ್ರೆಸ್​​ ಸಿದ್ಧಾಂತಗಳು ದೇಶಕ್ಕೆ ಬಹಳ ಸನಿಹವಾಗಿವೆ ಎಂದು ಅವರು ಹೇಳಿಕೊಂಡಿದ್ದರು.

1955ರಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಮಾತನಾಡಿದ್ದ ಎಐಸಿಸಿ ಮುಖ್ಯಸ್ಥ ಯುಎನ್​ ಧೆಬಾರ್​, “ಕಾಂಗ್ರೆಸ್​ ಎಂದರೆ ಕಣ್ಣೀರು. ದುಃಖದಲ್ಲಿರುವ ಹಾಗೂ ನೋವುಗಳನ್ನು ತಿಂದವರ ಕಣ್ಣಿನಿಂದ ಬೀಳುತ್ತಿರುವ ಕಣ್ಣೀರು. ಈ ಕಣ್ಣೀರು ಹಳ್ಳವಾಗಬಹುದು. ಈ ಹಳ್ಳಗಳು ಸೇರಿ ನದಿಯಾಗಬಹುದು. ಈ ನದಿ ಗಂಗಾ ಆಗಿರಬಹುದು ಅಥವಾ ಬ್ರಹ್ಮಪುತ್ರ ಆಗಿರಬಹುದು. ಈ ನದಿಗಳು ಜನರ ಕಷ್ಟಗಳನ್ನು ತೊಳೆದು ಅವರಿಗೆ ಹೊಸ ಜೀವನ ನೀಡುತ್ತದೆ,” ಎಂದಿದ್ದರು. ಈ ಮೂಲಕ ಕಾಂಗ್ರೆಸ್​ನ ನಿಲುವನ್ನು ಸಾರಿದ್ದರು.

ಆದರೆ, 1998ರಲ್ಲಿ ಸೋನಿಯಾ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದಾಗ ಕಾಂಗ್ರೆಸ್​ನ ನಿಲುವು ಕೊಂಚ ಬದಲಾಯಿತು. ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸೋನಿಯಾ ಒಲವು ತೋರಿದರು. ಅವರು ಕೆಲ ಯಶಸ್ವಿ ನಿಯಮಗಳನ್ನು ಜಾರಿಗೆ ತಂದರು.

ಈಗ ​​ ನರೇಂದ್ರ ಮೋದಿ ವಿರುದ್ಧ ರಾಹುಲ್​ ಸೆಣೆಸಾಡಲು ನಿಂತಿದ್ದಾರೆ. ಆದರೆ, ರಾಹುಲ್​ ಬದಲು ಹೊರಗಿನವರನ್ನು ತಂದು ನಿಲ್ಲಿಸಿದರೆ ಉತ್ತಮ ಎನ್ನುವ ಆಲೋಚನೆ ಕೆಲ ಕಾಂಗ್ರೆಸ್​ ನಾಯಕರದ್ದು. ಇದರಿಂದ, ರಾಹುಲ್​ ಗಾಂಧಿ ರಾಜಕೀಯದಲ್ಲಿ ಮತ್ತಷ್ಟು ಪಳಗುತ್ತಾರೆ. ಅಲ್ಲಿಯವರೆಗೆ ಪ್ರಾದೇಶಿಕ ಪಕ್ಷಗಳಿಗೆ ಅಧಿಕಾರ ನೀಡಬೇಕು. ಹೀಗೊಂದು ಆಲೋಚನೆಯನ್ನು ಕೆಲ ಕಾಂಗ್ರೆಸ್​ ನಾಯಕರು ಮಾಡಿದ್ದಾರೆ. ಇದು ಅಸಾಧ್ಯ ಎನ್ನುವ ಮಾತುಗಳೂ ಕೇಳಿ ಬಂದಿವೆ. 2019ರ ಲೋಕಸಭೆ ಚುನಾವಣೆ ಫಲಿತಾಂಶ ಇದಕ್ಕೆಲ್ಲ ಉತ್ತರ ನೀಡಬೇಕಿದೆ.

Comments are closed.